ಸಾರಾಂಶ
ಕೇಂದ್ರ ಸರ್ಕಾರದಿಂದ ತನಿಖೆ ಎದುರಿಸುತ್ತಿರುವ ಪ್ರಖ್ಯಾತ ಕ್ಯಾನ್ಸರ್ ಆಸ್ಪತ್ರೆ ಎಚ್‌ಸಿಜಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 2023ರಲ್ಲಿ ನಡೆದಿದ್ದ ಆಸ್ಪತ್ರೆಯ ಆಂತರಿಕ ಆಡಿಟ್ ಕೂಡ ಕ್ಲಿನಿಕಲ್ ಟ್ರಯಲ್ ಅಕ್ರಮಗಳನ್ನು ಎತ್ತಿ ತೋರಿಸಿತ್ತು.
ಬೆಂಗಳೂರು : ಮಾನವರನ್ನು ಪ್ರಯೋಗಪಶು ಮಾಡುವ ಕ್ಲಿನಿಕಲ್ ಟ್ರಯಲ್ಸ್‌ನಲ್ಲಿ ಹಗರಣ ರೀತಿಯ ನೀತಿಬಾಹಿರ ಚಟುವಟಿಕೆ ನಡೆಸಿದ ಆರೋಪಕ್ಕೆ ಗುರಿಯಾಗಿ, ಕೇಂದ್ರ ಸರ್ಕಾರದಿಂದ ತನಿಖೆ ಎದುರಿಸುತ್ತಿರುವ ಪ್ರಖ್ಯಾತ ಕ್ಯಾನ್ಸರ್ ಆಸ್ಪತ್ರೆ ಎಚ್‌ಸಿಜಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 2023ರಲ್ಲಿ ನಡೆದಿದ್ದ ಆಸ್ಪತ್ರೆಯ ಆಂತರಿಕ ಆಡಿಟ್ ಕೂಡ ಕ್ಲಿನಿಕಲ್ ಟ್ರಯಲ್ ಅಕ್ರಮಗಳನ್ನು ಎತ್ತಿ ತೋರಿಸಿತ್ತು. ಎಚ್‌ಸಿಜಿ ಆಸ್ಪತ್ರೆಯ ಕ್ಲಿನಿಕಲ್ ಟ್ರಯಲ್‌ನಲ್ಲಿ ಗಂಭೀರ ಸ್ವರೂಪದ ವ್ಯವಸ್ಥಿತ ಅವ್ಯವಹಾರಗಳು ನಡೆಯುತ್ತಿರುವುದನ್ನು ಹೊರಗೆಳೆದಿತ್ತು ಎಂಬ ಆತಂಕಕಾರಿ ಮಾಹಿತಿ ಈಗ ಬಯಲಾಗಿದೆ.
ಇದರೊಂದಿಗೆ ನೈತಿಕ ಸಮಿತಿ ಮುಖ್ಯಸ್ಥರಾಗಿದ್ದ ನ್ಯಾ। ಕೃಷ್ಣಭಟ್ ಅವರು ಕ್ಲಿನಿಕಲ್ ಟ್ರಯಲ್ಸ್ ಕುರಿತು ನೀಡಿದ್ದ ವರದಿಯಲ್ಲಿನ ಅಂಶಗಳು ದೃಢಪಟ್ಟಂತಾಗಿದೆ.
ಎಚ್‌ಸಿಜಿ ಆಸ್ಪತ್ರೆಯ ಮಾಜಿ ಸಿಇಒ ಸೂಚನೆ ಅನ್ವಯ, 2023ರ ಫೆಬ್ರವರಿಯಲ್ಲಿ ಆಂತರಿಕ ಆಡಿಟ್ ನಡೆಸಲಾಗಿತ್ತು. ಈ ವರದಿಯಲ್ಲಿ, ಆಸ್ಪತ್ರೆಯ ಅಸಮರ್ಥ ಸಿಬ್ಬಂದಿಗಳು, ಅಗತ್ಯ ಕಾರ್ಯವಿಧಾನಗಳ ಬಗ್ಗೆ ಆಸ್ಪತ್ರೆಯಲ್ಲಿದ್ದ ವ್ಯಾಪಕ ನಿರ್ಲಕ್ಷ್ಯ ಸೇರಿ ಹಲವು ಅವ್ಯವಸ್ಥೆಗಳ ಕುರಿತು ಉಲ್ಲೇಖಿಸಲಾಗಿತ್ತು.
ವರದಿಯಲ್ಲೇನಿದೆ?:
ಅನರ್ಹ ಸಿಬ್ಬಂದಿಗಳಿಂದ ಪ್ರಯೋಗ:
ಕ್ಲಿನಿಕಲ್ ಟ್ರಯಲ್ ಅಧ್ಯಯನಕ್ಕೆ ಎಸ್‌ಒಪಿ ಎಂಬುದು ಮಹತ್ವದ ದಾಖಲೆ. ಆದರೆ ಆ ವರದಿಯನ್ನು ಯಾವುದೇ ತಾಂತ್ರಿಕ ಹಾಗೂ ವೈಜ್ಞಾನಿಕ ಹಿನ್ನೆಲೆ, ಅನುಭವ ಇಲ್ಲದವರಿಂದ ವ್ಯಕ್ತಿಯಿಂದ ಬರೆಸಲಾಗುತ್ತಿತ್ತು. ಅವರಿಗೆ ಸೂಕ್ತ ವಿದ್ಯಾರ್ಹತೆಯೂ ಇರಲಿಲ್ಲ. ಕ್ಲಿನಿಕಲ್ ಅಧ್ಯಯನ ನಡೆಸುವ ಅನುಭವವೂ ಇರಲಿಲ್ಲ ಎಂದು ವರದಿ ಹೇಳಿತ್ತು.
ಕಳವಳಕಾರಿ ಎಂದರೆ, ಯಾವುದೇ ಅರ್ಹತೆ ಹೊಂದಿಲ್ಲದಿದ್ದರೂ ಫ್ಲೆಬೊಟೊಮಿಸ್ಟ್ (ದೇಹದಿಂದ ರಕ್ತ ತೆಗೆಯುವವರು) ಆಗಿದ್ದ ಕಾವ್ಯಾ ಎಂಬಾಕೆಗೆ ಮಹತ್ವದ ‘ಅನ್‌ಬ್ಲೈಂಡೆಡ್ ಪರ್ಸನ್’ (ಕ್ಲಿನಿಕಲ್ ಟ್ರಯಲ್‌ಗೆ ಭಾಗಿಯಾದವರಿಗೆ ನೀಡುವ ಚಿಕಿತ್ಸಾ ವಿಧಾನ ಗೊತ್ತಿರುವ ವ್ಯಕ್ತಿ) ಹೊಣೆ ವಹಿಸಲಾಗಿತ್ತು. ಆದರೆ ಈ ಕಾರ್ಯವನ್ನು ಸೂಕ್ತ ಅರ್ಹತೆ ಹೊಂದಿದ್ದ ಫಾರ್ಮಾಸಿಸ್ಟ್ ನಿರ್ವಹಿಸಬೇಕಿತ್ತು.
ಎಸ್‌ಒಪಿ, ದಾಖಲಾತಿ ವೈಫಲ್ಯ:
ಆಸ್ಪತ್ರೆಯ ದಾಖಲಾತಿಯನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಆಸ್ಪತ್ರೆಯಲ್ಲಿ ನಡೆದ ಗಂಭೀರ ಪ್ರತಿಕೂಲ ಘಟನೆಗಳು ಮತ್ತು ಪ್ರೋಟೋಕಾಲ್ ಉಲ್ಲಂಘನೆ ಕುರಿತು ತನಿಖಾಧಿಕಾರಿಗಳ ವಿಸ್ತೃತವಾದ ಯಥಾಸ್ಥಿತಿ ವರದಿಯ ಕೊರತೆ ಕಂಡುಬಂದಿದೆ. ಅಲ್ಲದೆ ಪರಿಣಾಮಗಳ ಮೌಲ್ಯಮಾಪನ ಉಲ್ಲಂಘನೆ ಮತ್ತು ಗಂಭೀರ ಅಡ್ಡಪರಿಣಾಮಗಳ ನಂತರದ ವಿಷಯಗಳಾದ ವೈದ್ಯಕೀಯ ನಿರ್ವಹಣೆ ಮತ್ತು ಹಣಕಾಸಿನ ನೆರವಿನ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ನೈತಿಕ ಸಮಿತಿಯು ಸಭೆಗಳ ಸಮಯದಲ್ಲಿ ತನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸಿಲ್ಲ. ಅಸ್ಪತ್ರೆಯ ಪ್ರತಿಯೊಂದು ಒಪ್ಪಂದ ಪತ್ರ, ಪರಿಶೀಲನಾ ಪಟ್ಟಿ, ಸೈಟ್‌ಗಳ ಮೇಲ್ವಿಚಾರಣೆಯಲ್ಲಿ ಲೋಪವಿದೆ ಎಂದು ವರದಿ ತಿಳಿಸಿತ್ತು.
ಆಡಳಿತದಿಂದಲೇ ತೊಡಕು:
ಆಸ್ಪತ್ರೆಯ ದುರಾಡಳಿತಕ್ಕೆ ಕನ್ನಡಿ ಹಿಡಿಯುವ ಗಂಭೀರ ವಿಚಾರವೆಂದರೆ, ಆಡಿಟ್ ಸಮಯದಲ್ಲಿ ಆಸ್ಪತ್ರೆಯ ಆಡಳಿತ ವರ್ಗ ನೇರವಾಗಿ ಹಸ್ತಕ್ಷೇಪ ಮಾಡಿತ್ತು. ರೇಣುಕಪ್ಪ ಎಂಬುವವರು ಆಡಿಟ್ ನಿಲ್ಲಿಸುವಂತೆ ಸೂಚನೆ ನೀಡಿದ್ದರು ಮತ್ತು ತನಿಖಾಧಿಕಾರಿ ಡಾ. ಸತೀಶ್ ಅವರಿಗೆ ವರದಿ ನೀಡುವಂತೆ ಸೂಚಿಸಿದ್ದರು ಎಂದು ಆಡಿಟ್ ತಂಡ ತನ್ನ ವರದಿಯಲ್ಲಿ ಪ್ರಸ್ತಾಪಿಸಿತ್ತು ಎಂಬ ವಿಷಯವೂ ಬೆಳಕಿಗೆ ಬಂದಿದೆ.
ನ್ಯಾ.ಕೃಷ್ಣಭಟ್ ವರದಿಗೆ ಪೂರಕ:
ಎಚ್‌ಸಿಜಿ ಆಸ್ಪತ್ರೆಯ ಆಂತರಿಕ ಲೆಕ್ಕಪರಿಶೋಧನಾ ವರದಿಯಲ್ಲಿ ಕಂಡುಬಂದ ಅಂಕಿ ಅಂಶಗಳು, ಇದೇ ವಿಷಯದ ಬಗ್ಗೆ ಆಸ್ಪತ್ರೆಯ ನೈತಿಕ ಸಮಿತಿಯ ಮಾಜಿ ಮುಖ್ಯಸ್ಥ, ನಿವೃತ್ತ ನ್ಯಾಯಮೂರ್ತಿ ಪಿ.ಕೃಷ್ಣ ಭಟ್ ಅವರು ಸ್ವತಂತ್ರವಾಗಿ ಸಿದ್ಧಪಡಿಸಿದ್ದ ವರದಿಯಲ್ಲಿನ ಆರೋಪಗಳನ್ನು ದೃಢೀಕರಿಸುವಂತಿದೆ. ನ್ಯಾ. ಕೃಷ್ಣ ಭಟ್ ಅವರು ತಮ್ಮ ವರದಿಯಲ್ಲಿ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಟ್ರಯಲ್ ವೇಳೆ, ಹಿತಾಸಕ್ತಿಯ ವೈರುಧ್ಯ, ಭಾರೀ ಲೋಪ, ರೋಗಿಗಳ ಭದ್ರತೆ ವಿಷಯದಲ್ಲಿನ ಭಾರೀ ಲೋಪದ ಬಗ್ಗೆ ಪ್ರಸ್ತಾಪಿಸಿದ್ದರು.
ಆಡಿಟ್‌ನಲ್ಲೇನಿದೆ?
- ಕ್ಲಿನಿಕಲ್ ಟ್ರಯಲ್‌ಗೆ ಸಂಬಂಧಿಸಿದ ಮಹತ್ವದ ವರದಿಯನ್ನು ತಾಂತ್ರಿಕ, ವೈಜ್ಞಾನಿಕ ಹಿನ್ನೆಲೆ ಹಾಗೂ ಅನುಭವ ಇಲ್ಲದವರಿಂದ ಬರೆಸಲಾಗುತ್ತಿತ್ತು
- ಯಾವುದೇ ಅರ್ಹತೆಯನ್ನೇ ಹೊಂದಿಲ್ಲದ ‘ಫ್ಲೆಬೊಟೊಮಿಸ್ಟ್’ ಕಾವ್ಯಾ ಎಂಬಾಕೆಗೆ ಮಹತ್ವದ ‘ಅನ್‌ಬ್ಲೈಂಡೆಡ್ ಪರ್ಸನ್’ ಹೊಣೆ ವಹಿಸಲಾಗಿತ್ತು
- ಆಡಿಟ್ ಸಮಯದಲ್ಲಿ ಆಸ್ಪತ್ರೆಯಲ್ಲಿ ಆಡಳಿತ ವರ್ಗ ನೇರ ಹಸ್ತಕ್ಷೇಪ ಮಾಡಿತ್ತು. ಆಡಿಟ್ ನಿಲ್ಲಿಸುವಂತೆಯೂ ಸೂಚನೆಯನ್ನು ನೀಡಲಾಗಿತ್ತು
ಅನುಮಾನವೇ ಬೇಡ, ಎಲ್ಲ ನಿಯಮ ಕಟ್ಟುನಿಟ್ಟು ಪಾಲನೆ
ಭಾರತ ಮತ್ತು ಆಫ್ರಿಕಾದಲ್ಲಿ ಕ್ಯಾನ್ಸರ್ ಆರೈಕೆಯಲ್ಲಿ ಮುಂಚೂಣಿಯಲ್ಲಿರುವ ಎಚ್‌ಸಿಜಿ ವಿರುದ್ಧ ಇತ್ತೀಚೆಗೆ ಕೆಲವು ಅಸತ್ಯ ಮತ್ತು ದೃಢಪಡದ ಮಾಹಿತಿ ಹರಡುತ್ತಿದೆ. ಆದರೆ ನಾವು ನಾವು ಡಿಸಿಜಿಐ ಮತ್ತು ಐಸಿಎಂಆರ್ ಸೇರಿದಂತೆ ಎಲ್ಲಾ ನಿಯಂತ್ರಕ ಸಂಸ್ಥೆಗಳ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇವೆ. ಈ ಬಗ್ಗೆ ಯಾವುದೇ ಸಂದೇಹವಿಲ್ಲ. ನಾವು ಅನೇಕ ಕ್ಲಿನಿಕಲ್ ಟ್ರಯಲ್‌ಗಳನ್ನು ಯಶಸ್ವಿಯಾಗಿ ಮತ್ತು ಸಂಪೂರ್ಣ ಪಾರದರ್ಶಕತೆಯೊಂದಿಗೆ ನಡೆಸುತ್ತಿದ್ದೇವೆ.
ಡಾ. ಬಿ.ಎಸ್. ಅಜಯ್ ರಾವ್, ಎಚ್‌ಸಿಜಿ ಆಸ್ಪತ್ರೆ ಅಧ್ಯಕ್ಷ