ಸಾರಾಂಶ
ತಮ್ಮ ಹಠ ಸಾಧನೆಯಿಂದಲೇ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕಾಂಗ್ರೆಸ್ ಪಾಳೇಯದ ನಾಯಕರ ಮನಗೆದ್ದು ತಾವೂ ಲೋಕಸಭೆ ಚುನಾವಣೆಯಿಂದ ದೂರ ಉಳಿಯುವ ಮೂಲಕ ಹಾಗೂ ತಮ್ಮ ಪುತ್ರನಿಗೆ ಚಾಮರಾಜನಗರ ಲೋಕಸಭೆ ಟಿಕೆಟ್ ಗಿಟ್ಟಿಸುವಲ್ಲಿಯೂ ಸಹ ಚಾಣಾಕ್ಷ ನಡೆ ಅನುಸರಿಸುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ತಮಗಿದ್ದ ಆತಂಕ ಮತ್ತು ತಮ್ಮ ಪುತ್ರನಿಗಿದ್ದ ಟಿಕೆಟ್ ಫೈಟ್ ಎರಡರಲ್ಲಿಯೂ ಗೆದ್ದು ಬೀಗಿದ್ದಾರೆ.
ಅತ್ತ ಮಾಜಿ ಶಾಸಕರೊಂದಿಗೆ ಸಂಧಾನ । ಇತ್ತ ಸುನೀಲ್ ಬೋಸ್ ಗೆಲುವಿಗಾಗಿ ರಣತಂತ್ರ ಕನ್ನಡಪ್ರಭ ವಾತೆ೯, ಕೊಳ್ಳೇಗಾಲತಮ್ಮ ಹಠ ಸಾಧನೆಯಿಂದಲೇ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕಾಂಗ್ರೆಸ್ ಪಾಳೇಯದ ನಾಯಕರ ಮನಗೆದ್ದು ತಾವೂ ಲೋಕಸಭೆ ಚುನಾವಣೆಯಿಂದ ದೂರ ಉಳಿಯುವ ಮೂಲಕ ಹಾಗೂ ತಮ್ಮ ಪುತ್ರನಿಗೆ ಚಾಮರಾಜನಗರ ಲೋಕಸಭೆ ಟಿಕೆಟ್ ಗಿಟ್ಟಿಸುವಲ್ಲಿಯೂ ಸಹ ಚಾಣಾಕ್ಷ ನಡೆ ಅನುಸರಿಸುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ತಮಗಿದ್ದ ಆತಂಕ ಮತ್ತು ತಮ್ಮ ಪುತ್ರನಿಗಿದ್ದ ಟಿಕೆಟ್ ಫೈಟ್ ಎರಡರಲ್ಲಿಯೂ ಗೆದ್ದು ಬೀಗಿದ್ದಾರೆ.
ಸಚಿವ ಮಹದೇವಪ್ಪ ಅವರೇ ಲೋಕಸಭೆ ಚುನಾವಣೆಗೆ ಕಣದಿಂದ ನಿಲ್ಲಬೇಕು ಎಂಬುದು ಕಾಂಗ್ರೆಸ್ ಹೈಕಮಾಂಡ್ ನಾಯಕರ ಒಲವಿತ್ತು, ಮಾತ್ರವಲ್ಲ ಸ್ವತಃ ಮುಖ್ಯಮಂತ್ರಿಗಳ ತೀರ್ಮಾನವೂ ಆಗಿತ್ತು. ಅಲ್ಲದೆ ಈ ಭಾಗದ ಶಾಸಕರೂ, ಮಾಜಿ ಶಾಸಕರೂ ಹಾಗೂ ಕಾಂಗ್ರೆಸ್ ನಾಯಕರ ಒಲವು ಮಹದೇವಪ್ಪ ಅವರೇ ಚುನಾವಣೆಗೆ ನಿಂತರೆ ಗೆಲುವು ಸುಲಭ ಹಾಗಾಗಿ ಸ್ಪರ್ಧಿಸಲೇ ಬೇಕು ಎಂಬ ಒತ್ತಡ ತಂತ್ರವೂ ಇತ್ತು. ಹಾಗಾಗಿ ಇದೆಲ್ಲವನ್ನು ತಮ್ಮ ಚಾಣಾಕ್ಷ ತಂತ್ರದಿಂದಲೇ ನಿಭಾಯಿಸುವ ಮೂಲಕ ನಾಯಕರ ಮನ ಸೆಳೆದು ತಾವು ಸಚಿವರಾಗಿ ಮುಂದುವರೆಯುವ ತಮ್ಮ ಅಭಿಲಾಷೆ ಹಾಗೂ ತಮ್ಮ ಮೇಲಿದ್ದ ಒತ್ತಡ ತಂತ್ರದಿಂದ ಪಾರಾಗಿದ್ದಾರೆ. ಹಲವು ಮುಖಂಡರ ಪೈಪೋಟಿ ನಡುವೆ ತಮ್ಮ ಪುತ್ರನಿಗೆ ರಾಜಕೀಯ ನೆಲೆ ಕಲ್ಪಿಸುವ ಸದುದ್ದೇಶದಿಂದ ಕೊನೆಗೂ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಿ ತಮ್ಮ ಹಠ ಸಾಧನೆಯಲ್ಲಿ ಯಶ ಕಂಡಿದ್ದಾರೆ. ತಮ್ಮ ಪುತ್ರನ ಗೆಲುವಿಗೆ ಅಡ್ಡಿಯಾಗಿದ್ದ ತಮ್ಮ ಹೇಳಿಕೆ ಹಾಗೂ ಟಿಕೆಟ್ ಪೈಪೋಟಿ ರೇಸ್‌ನಲ್ಲಿದ್ದವರ ಮನವೊಲಿಸುವಲ್ಲಿಯೂ ಯಶಸ್ಸು ಕಂಡಿದ್ದಾರೆ.ನಿನ್ನೆ ಸರಣಿ ಸಭೆ, ಇಂದು ಬಹಿರಂಗ ಸಭೆಯಲ್ಲಿ ಭಾಗಿ:
ಸಚಿವ ಮಹದೇವಪ್ಪ ತಮ್ಮ ಪುತ್ರನಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಗೂ ಮುನ್ನವೇ ರಾಜಕೀಯ ತಂತ್ರಗಾರಿಕೆ ಹೆಣೆದು ಪುತ್ರ ಸುನೀಲ್ ಬೋಸ್‌ರನ್ನು ಕಾಂಗ್ರೆಸ್ ಪಕ್ಷದ ಮಾಜಿ ಹಾಗೂ ಹಾಲಿ ಶಾಸಕರನ್ನು ಭೇಟಿ ಮಾಡಿಸುವಲ್ಲಿ ಯಶ ಕಂಡಿದ್ದಾರೆ. ಈ ಹಿನ್ನೆಲೆ ಮಂಗಳವಾರ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ದರ್ಶನ್ ಧ್ರುವನಾರಾಯಣ, ಗಣೇಶ ಪ್ರಸಾದ್, ಪುಟ್ಟರಂಗಶೆಟ್ಟಿ, ಮಾಜಿ ಶಾಸಕರಾದ ಆರ್. ನರೇಂದ್ರ, ಎಸ್. ಜಯಣ್ಣ ಸೇರಿದಂತೆ ಅನೇಕ ಮುಖಂಡರು, ನಾಯಕರನ್ನು ಸುನೀಲ್ ಬೋಸ್ ಅವರವರ ನಿವಾಸಗಳಲ್ಲಿ ಭೇಟಿ ಮಾಡಿ ಗೌರವ ಸಲ್ಲಿಸಿ ನನ್ನ ಗೆಲುವಿಗೆ ಸಹಕರಿಸಿ ಎಂಬ ಮನವಿ ಮಾಡಿ ನಿರ್ಗಮಿಸಿದ್ದರು.ಬುಧವಾರದಿಂದ ಖುದ್ದು ಅಖಾಡಕ್ಕಿಳಿದ ಸಚಿವ:
ಸಚಿವರು ಪುತ್ರನ ಪರ ಬುಧವಾರ ಖುದ್ದು ಅಖಾಡಕ್ಕಿಳಿಯುವ ಮೂಲಕ ತಮ್ಮ ರಾಜಕೀಯ ತಂತ್ರಗಾರಿಕೆಯನ್ನು ಕೊಳ್ಳೇಗಾಲ ಕ್ಷೇತ್ರದಿಂದಲೇ ಆರಂಭಿಸಿದ್ದಾರೆ. ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಅವರ ನಿವಾಸಕ್ಕೆ ತೆರಳಿ ಅವರ ಮನವೊಲಿಸಿ ಸಭೆಯೊಂದಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಮಾಜಿ ಶಾಸಕ ನರೇಂದ್ರ ನಿವಾಸಕ್ಕೆ ತೆರಳಿ ನರೇಂದ್ರ ಹಾಗೂ ಅವರ ಬೆಂಬಲಗರ ಮುನಿಸು ಶಮನಗೊಳಿಸಿ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನಿವಾಸದ ಸಭೆಗೆ ಕರೆತರುವಲ್ಲಿ ಯಶ ಕಂಡಿದ್ದಾರೆ. ಗುರುವಾರ ಹನೂರಿನಲ್ಲಿ ಮತ್ತು ಕೊಳ್ಳೇಗಾಲದಲ್ಲಿ ಕಾರ್ಯಕರ್ತರ ಯಶಸ್ವಿ ಸಭೆ ನಡೆಸುವ ಮೂಲಕ ಪುತ್ರನ ಗೆಲುವಿಗೆ ಶ್ರಮಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡುವ ಮೂಲಕ ಪುತ್ರನ ಗೆಲುವಿಗೆ ಶಪಥ ಮಾಡಿ ಶ್ರಮಿಸುತ್ತಿದ್ದು ಮುಂದಾಗುವ ಬೆಳವಣಿಗೆ ಕಾದು ನೋಡಬೇಕಿದೆ.