ಪ್ರಜ್ವಲ್ ರೇವಣ್ಣ ಪ್ರಕರಣ ರಾಜಕೀಯ ಅಸ್ತ್ರವಾಗಿ ಬಳಕೆ । ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ವಾಗ್ದಾಳಿ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪ್ರಜ್ವಲ್ ರೇವಣ್ಣ ಪ್ರಕರಣವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ದೇವೇಗೌಡರ ಕುಟುಂಬವನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿರುವ ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ, ಕಾಂಗ್ರೆಸ್ ಸರ್ಕಾರದ ಒತ್ತಡ ಹಾಗೂ ಬೆದರಿಕೆಗಳಿಗೆ ಕುಟುಂಬ ಮಣಿಯುವುದಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.

ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜೈಲುಗಳಲ್ಲಿ ಮೊಬೈಲ್ ಬಳಕೆ ಹಾಗೂ ಕೈದಿಗಳಿಗೆ ಹೊರಗಿನಿಂದ ವಸ್ತುಗಳ ಪೂರೈಕೆಯಾಗುತ್ತಿರುವ ಘಟನೆಗಳು ಈ ಹಿಂದೆಯೂ ವರದಿಯಾಗಿವೆ. ಆದರೆ ಪ್ರಜ್ವಲ್ ರೇವಣ್ಣ ಅವರ ವಿಚಾರವನ್ನು ಮಾತ್ರ ದೊಡ್ಡದಾಗಿ ಬಿಂಬಿಸಿ ರಾಜಕೀಯ ಲಾಭ ಪಡೆಯಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಮುಖ್ಯಮಂತ್ರಿಗಳ ಸೂಚನೆಯಂತೆ ಪ್ರಜ್ವಲ್ ರೇವಣ್ಣ ಅವರ ಸೆಲ್‌ನಲ್ಲಿ ತಪಾಸಣೆ ನಡೆಸಲಾಗಿದೆ. ದಾಳಿ ವೇಳೆ ಎರಡು ಮೊಬೈಲ್‌ಗಳು, ಪೆನ್‌ಡ್ರೈವ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡು ತನಿಖೆ ನಡೆಸ ಲಾಗುತ್ತಿದೆ ಎಂದು ಹೇಳಿದ್ದಾರೆ. ಹಾಗಾದರೆ ಇದೇ ಮಾದರಿಯಲ್ಲಿ ರಾಜ್ಯದ ಎಲ್ಲ ಜೈಲುಗಳಲ್ಲಿರುವ ಪ್ರತಿಯೊಬ್ಬ ಕೈದಿಯ ಬ್ಯಾರಕ್‌ಗಳನ್ನೂ ಪರಿಶೀಲಿಸಿ, ಅಕ್ರಮ ವಸ್ತುಗಳಿದ್ದರೆ ವಶಪಡಿಸಿಕೊಂಡು ತನಿಖೆ ನಡೆಸಬೇಕಲ್ಲವೇ? ಕೇವಲ ಒಬ್ಬ ಕೈದಿಯ ವಿಚಾರವನ್ನೇ ರಾಜಕೀಯವಾಗಿ ಬಳಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.


ಪೊಲೀಸ್ ಭದ್ರತೆಯಲ್ಲಿರುವ ಕೈದಿ ಮೊಬೈಲ್ ಬಳಸಿದ್ದರೆ ಅದನ್ನು ಯಾರು ದಾಖಲಿಸಿದರು? ಆ ದೃಶ್ಯ ಹೇಗೆ ಹೊರಬಂತು? ಮತ್ತೊಬ್ಬ ಕೈದಿಯ ಬಳಿ ಮೊಬೈಲ್ ಇದ್ದರೆ ಅದನ್ನು ಒಳಗೆ ತಲುಪಿಸಿ ದವರು ಯಾರು ಎಂಬುದನ್ನೂ ಸರ್ಕಾರ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಬಿಡದಿ ಟೌನ್‌ಶಿಪ್ ವಿಚಾರವನ್ನು ಕೈಬಿಡಿಸುವ ಉದ್ದೇಶದಿಂದ ದೇವೇಗೌಡರ ಕುಟುಂಬದ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ. ಅಧಿಕಾರ ಶಾಶ್ವತವಲ್ಲ. 2028ರಲ್ಲಿ ಸರ್ಕಾರ ಬದಲಾಗಲಿದೆ. ಆಗ ಈಗಿನ ಆಡಳಿತದಲ್ಲಿ ನಡೆದಿರುವ ಎಲ್ಲ ವಿಚಾರಗಳನ್ನೂ ಜನರ ಮುಂದಿಡುತ್ತೇವೆ ಎಂದು ಎಚ್ಚರಿಸಿದರು.

ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಸಂವಿಧಾನದ ಆಶಯವನ್ನು ಜೆಡಿಎಸ್ ಗೌರವಿಸುತ್ತದೆ. ಆದರೆ ಒಬ್ಬರಿಗೆ ಒಂದು ಮಾನದಂಡ, ಮತ್ತೊಬ್ಬರಿಗೆ ಮತ್ತೊಂದು ಮಾನದಂಡ ಇರಬಾರದು. ಅಧಿಕಾರ ದುರ್ಬಳಕೆಯಿಂದ ದೇವೇಗೌಡರ ಕುಟುಂಬವನ್ನು ಹಣಿಯಲು ಹೊರಟಿ ರುವ ಕಾಂಗ್ರೆಸ್ ಸರ್ಕಾರಕ್ಕೆ 2028ರಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮುಕ್ತ ಮುನಿಯಪ್ಪ ಹೇಳಿದರು.ಈ ಸಂರ್ಧಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಶಾಂತ ಮೂರ್ತಿ, ನಗರ ಘಟಕ ಅಧ್ಯಕ್ಷ ಬಂಡ್ಲು ಶ್ರೀನಿವಾಸ, ಕಿಸಾನ್ ಕಿಷ್ಣಪ್ಪ, ವಾಸುದೇವ್, ಸಾದಿಕ್ ಪಾಷಾ, ಮಂಚೇನಹಳ್ಳಿ ಅಧ್ಯಕ್ಷ ಪ್ರಕಾಶ್ ರೆಡ್ಡಿ, ಸ್ಟುಡಿಯೋ ಮಂಜುನಾಥ್, ಅನ್ವರ್ ಪಾಷಾ, ಮಹಿಳಾ ಅಧ್ಯಕ್ಷೆ ಅರುಣಾ, ವನಜಾ, ಲಕ್ಷ್ಮೀ ನರಸಪ್ಪ, ವೇದ ಕಾಂತರಾಜ್ ಹರೀಶ್ ಗೌಡ ಮತ್ತಿತರರು ಇದ್ದರು.

ಸಿಕೆಬಿ-3 ಸುದ್ದಿಗಾರರೊಂದಿಗೆ ಮುಕ್ತ ಮುನಿಯಪ್ಪ ಮಾತನಾಡಿದರು