ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್‌ಶಿಪ್) ಯೋಜನೆ ಕುರಿತು ಚರ್ಚೆಗೆ ಬರುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸವಾಲು ಹಾಕಿ ಬೈರಮಂಗಲ ವೃತ್ತಕ್ಕೆ ಆಗಮಿಸಿದಾಗ ಮತ್ತು ವಾಪಸ್ಸಾಗುವಾಗ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಟೌನ್‌ಶಿಪ್ ಯೋಜನೆ ಪರವಾಗಿರುವ ರೈತರು ಕೆಂಪು ಬಾವುಟ ಪ್ರದರ್ಶಿಸಿ ಮುತ್ತಿಗೆ ಹಾಕಲು ವಿಫಲ ಯತ್ನ ನಡೆಸಿದರು.

ಬೈರಮಂಗಲ ವೃತ್ತದಿಂದ ಕೂಗಳತೆ ದೂರದಲ್ಲಿರುವ ವೃಷಭಾವತಿ ಶಾಲೆ ಬಳಿ ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಬಿಡದಿ ಟೌನ್ ಶಿಪ್ ಯೋಜನೆ ಪರವಾಗಿರುವ ರೈತರು ಹೆಚ್ಚಿನ ಸಂಖ್ಯೆಯಲ್ಲಿಯೇ ಸೇರಿದ್ದರು. ಮಧ್ಯಾಹ್ನ 12.20ರ ವೇಳೆಗೆ ಕಾರಿನಲ್ಲಿ ಬೈರಮಂಗಲ ವೃತ್ತದತ್ತ ಕೇಂದ್ರ ಸಚಿವ ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ರೈತರು ಕೆಂಪು ಬಾವುಟ ಪ್ರದರ್ಶಿಸಿ ಧಿಕ್ಕಾರದ ಘೋಷಣೆ ಕೂಗಿದರು.

ಈ ವೇಳೆ ಕುಮಾರಸ್ವಾಮಿ ಅವರಿದ್ದ ಕಾರಿಗೆ ಮುತ್ತಿಗೆ ಹಾಕುವ ಕೆಲ ರೈತರ ಪ್ರಯತ್ನವನ್ನು ಬಂದೋಬಸ್ತಿನಲ್ಲಿದ್ದ ಪೊಲೀಸರು ವಿಫಲಗೊಳಿಸಿದರು. ಇದರಿಂದ ಮತ್ತಷ್ಟು ಸಿಡಿದೆದ್ದ ರೈತರು, ರೆಡ್ ಜೋನ್ ಮಾಡಿದ ಕುಮಾರಸ್ವಾಮಿಗೆ ಧಿಕ್ಕಾರ. ರೆಡ್ ಜೋನ್ ಪಿತಾಮಹ ಕುಮಾರಸ್ವಾಮಿ. ಯೋಜನೆ ಮಾಡಿ ಈಗ ಬೇಡಾ ಎನ್ನುವ ಕುಮಾರಣ್ಣನಿಗೆ ಧಿಕ್ಕಾರ. ಬೇಕೆ ಬೇಕು ಅಕ್ವೇರ್ ಬೇಕೆಂದು ರೈತರು ಘೋಷಣೆ ಕೂಗಿದರು.

ರೈತರನ್ನು ತಡೆದ ಪೊಲೀಸರು:

ನಮ್ಮ ಸ್ಥಳಕ್ಕೆ ಕುಮಾರಸ್ವಾಮಿ ಬರಲೇಬೇಕು. ನಮ್ಮ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕುಮಾರಸ್ವಾಮಿ ಪಲಾಯನ ಆಗಿದ್ದಾರೆ. ಪೊಲೀಸರ ರಕ್ಷಣೆಯಲ್ಲಿ ಅವರು ಓಡಿ ಹೋಗಿದ್ದಾರೆ. ಕುಮಾರಸ್ವಾಮಿ ಓಡಿ ಹೋಗಿರೋದೆ ನಮಗೆ ವಿಜಯ ಎಂದು ಪ್ರತಿಭಟನಾಕಾರರು ಲೇವಡಿ ಮಾಡಿದರು.


ಕುಮಾರಸ್ವಾಮಿಯವರ ಬಳಿ ಹೋಗಲು ನಮಗೆ ಅವಕಾಶ ಕೊಡಿ. ಇಲ್ಲ ಅವರನ್ನೇ ಇಲ್ಲಿಗೆ ಬರುವಂತೆ ಹೇಳಿ. ಇಲ್ಲದಿದ್ದರೆ ಮುತ್ತಿಗೆ ಹಾಕುತ್ತೇವೆ ಎಂದು ಟೌನ್​ಶಿಪ್ ಪರ ರೈತರು ಬೈರಮಂಗಲ ವೃತ್ತದತ್ತ ತೆರಳಲು ಮುಂದಾದಾಗ ಪೊಲೀಸರು ಅವರನ್ನು ತಡೆಯಲು ಹರಸಾಹಸ ಪಟ್ಟರು.

ಪ್ರತಿಭಟನಾ ಸ್ಥಳಕ್ಕೆ ಕುಮಾರಸ್ವಾಮಿ ಅವರನ್ನು ಕರೆದುಕೊಂಡು ಬನ್ನಿ. ನಾವು 10 ಮಂದಿ ಮುಖಂಡರು ಶಾಂತಿಯಿಂದ ಅವರೊಂದಿಗೆ ಮಾತನಾಡುತ್ತೇವೆ ಎಂದು ರೈತರು ಪಟ್ಟು ಹಿಡಿದಾಗ ಪೊಲೀಸ್ ಅಧಿಕಾರಿಗಳು, ಕುಮಾರಸ್ವಾಮಿ ಅವರನ್ನು ಕೇಳಿಕೊಂಡು ಬರುತ್ತೇವೆಂದು ಹೇಳಿ ಹೋದರು. ಪೊಲೀಸರು ಬರುವವರೆಗೂ ಶಾಂತಿಯಿಂದ ಇರುತ್ತೇವೆ. ಒಂದು ವೇಳೆ ಅವರು ಇಲ್ಲಿಗೆ ಬರಲು ಒಪ್ಪದಿದ್ದರೆ ಮುತ್ತಿಗೆ ಹಾಕುತ್ತೇವೆ. ಬೇಕಾದರೆ ಪೊಲೀಸರು ಗೋಲಿಬಾರ್ ಮಾಡಲಿ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಬೈರಮಂಗಲ ವೃತ್ತದಲ್ಲಿನ ಪ್ರತಿಭಟನೆ ಮುಗಿಸಿ ಸಂಜೆ 4 ಗಂಟೆ ವೇಳೆಗೆ ಕುಮಾರಸ್ವಾಮಿಯವರು ವಾಪಸ್ ಬಿಡದಿಯತ್ತ ತೆರಳುತ್ತಿದ್ದ ವೇಳೆ ರೈತರು ಮತ್ತೆ ಕೆಂಪು ಬಾವುಟ ಪ್ರದರ್ಶಿಸಿ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ, ಭದ್ರತೆಯಲ್ಲಿ ತೊಡಗಿದ್ದ ಪೊಲೀಸರು ರೈತರು ಕುಮಾರಸ್ವಾಮಿ ಅವರಿದ್ದ ಕಾರಿನತ್ತ ತೆರಳದಂತೆ ತಡೆಯುವಲ್ಲಿ ಯಶಸ್ವಿಯಾದರು.

ಇದರಿಂದ ರೊಚ್ಚಿಗೆದ್ದ ರೈತರು ಕುಮಾರಸ್ವಾಮಿ ಅವರಿದ್ದ ಕಾರನ್ನು ಹಿಂಬಾಲಿಸಿದರು. ಇದೇ ಸಮಯಕ್ಕೆ ಬೈರಮಂಗಲ ಆಸ್ಪತ್ರೆ ಮುಂಭಾಗ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಮೂಡಲಗಿರಿಯಪ್ಪ ಉರುಫ್ ತಮ್ಮಯಣ್ಣ ಅವರನ್ನು ಕಂಡ ತಕ್ಷಣ ಕುಮಾರಸ್ವಾಮಿಯವರು ಕಾರು ನಿಲ್ಲಿಸಿ ಆರೋಗ್ಯ ವಿಚಾರಿಸಿದರು.

ರೈತರು ಬರುತ್ತಿರುವುದನ್ನು ನೋಡಿದ ಪೊಲೀಸರು, ತಕ್ಷಣ ಕುಮಾರಸ್ವಾಮಿ ಅವರನ್ನು ಅಲ್ಲಿಂದ ಮುಂದಕ್ಕೆ ಕಳುಹಿಸಿ ಪ್ರತಿಭಟನಾಕಾರರನ್ನು ತಡೆದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ರೈತರು, ಜೆಡಿಎಸ್ ಮುಖಂಡರ ಕಾರುಗಳನ್ನು ಅಡ್ಡಗಟ್ಟಿದರು. ಈ ವೇಳೆ ಪ್ರತಿಭಟನಾಕಾರರು ಪೊಲೀಸರೊಂದಿಗೆ ವಾಗ್ವಾದ, ಮಾತಿನ ಚಕಮಕಿಯಲ್ಲಿ ತೊಡಗಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತು. ಕೊನೆಗೆ ಪೊಲೀಸರು ರೈತರನ್ನು ಸಮಾಧಾನ ಪಡಿಸಿ ಕಾರುಗಳು ಮುಂದೆ ಸಾಗಲು ಅನುವು ಮಾಡಿಕೊಟ್ಟರು.

27ಕೆಆರ್ ಎಂಎನ್ 1,2,3,4.ಜೆಪಿಜಿ

1,2,3.ಬೈರಮಂಗಲ ವೃತ್ತಕ್ಕೆ ಆಗಮಿಸುವಾಗ ಟೌನ್ ಶಿಪ್ ಯೋಜನೆ ಪರವಾಗಿರುವ ರೈತರು ಕೆಂಪು ಬಾವುಟ ಪ್ರದರ್ಶಿಸುತ್ತಿರುವುದು.

4.ಬೈರಮಂಗಲ ವೃತ್ತದಿಂದ ತೆರಳುವಾಗ ಟೌನ್ ಶಿಪ್ ಯೋಜನೆ ಪರವಾಗಿರುವ ರೈತರು ಕೆಂಪು ಬಾವುಟ ತೋರಿಸಿ ಮುತ್ತಿಗೆ ವಿಫಲ ಯತ್ನ ನಡೆಸಿದರು.