ಕೈಗಾರಿಕಾ ಘಟಕ ಸ್ಥಾಪಿಸಲು ಜಿಲ್ಲೆಯಲ್ಲಿ 1200 ಎಕರೆ ಭೂ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದಕ್ಕೆ ಸ್ಥಳೀಯ ಜನರು ವಿರೋಧ ವ್ಯಕ್ತಪಡಿಸಿದರು. ಮತ್ತೊಂದೆಡೆ ನ್ಯಾಯಾಲಯದ ತಡೆಯಾಜ್ಞೆ ತಂದಿದ್ದಾರೆ. ಇದಲ್ಲದೇ, ಕೈಗಾರಿಕಾ ಘಟಕ ಸ್ಥಾಪಿಸಲು ಜಿಲ್ಲೆಯಲ್ಲಿ ಯಾವುದೇ ಜಾಗ ಗುರುತಿಸಿಲ್ಲ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಯಾವುದೇ ಒಂದು ಕಂಪನಿಯ ಯಜಮಾನರಲ್ಲ. ಅವರು ಇಂತಹ ಕಂಪನಿಗೆ ಜಾಗ ಕೊಡಿ ಎಂದರೆ ನಾವು ಕೊಡಲಿಕ್ಕೆ ಆಗಲ್ಲ. ಅವರು ಹೇಳಿದ ಕಂಪನಿ ಮಾಲೀಕರು ಸರ್ಕಾರಕ್ಕೆ ಅರ್ಜಿ ಹಾಕಿದರಷ್ಟೇ ಜಾಗ ಕೊಡಬಹುದು. ಇದನ್ನು ಎಷ್ಟು ಬಾರಿ ಹೇಳಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಎಚ್ಡಿಕೆ ವಿರುದ್ಧ ಕಿಡಿಕಾರಿದರು.ತಾಲೂಕಿನ ಬೆಳ್ಳೂರು ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ನಾಗಮಂಗಲ ಅಗ್ನಿಶಾಮಕ ಠಾಣೆಗೆ ಸರ್ಕಾರ ನೀಡಿರುವ 1 ಕೋಟಿ ರು.ವೆಚ್ಚದ ಎರಡು ಹೊಸ ಅಗ್ನಿಶಾಮಕ ವಾಹನಗಳಿಗೆ ಪೂಜೆ ಸಲ್ಲಿಸಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಕೈಗಾರಿಕಾ ಘಟಕ ಸ್ಥಾಪಿಸಲು ಜಿಲ್ಲೆಯಲ್ಲಿ 1200 ಎಕರೆ ಭೂ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದಕ್ಕೆ ಸ್ಥಳೀಯ ಜನರು ವಿರೋಧ ವ್ಯಕ್ತಪಡಿಸಿದರು. ಮತ್ತೊಂದೆಡೆ ನ್ಯಾಯಾಲಯದ ತಡೆಯಾಜ್ಞೆ ತಂದಿದ್ದಾರೆ. ಇದಲ್ಲದೇ, ಕೈಗಾರಿಕಾ ಘಟಕ ಸ್ಥಾಪಿಸಲು ಜಿಲ್ಲೆಯಲ್ಲಿ ಯಾವುದೇ ಜಾಗ ಗುರುತಿಸಿಲ್ಲ ಎಂದರು.ಯಾವುದೇ ಕಂಪನಿಯವರು ಅರ್ಜಿ ಸಲ್ಲಿಸಿದರೆ ಸೂಕ್ತ ಜಾಗವನ್ನು ಸ್ವಾಧೀನಪಡಿಸಿ ಕೊಡುತ್ತೇವೆ ಎಂದು ಸದನದಲ್ಲಿ ನಮ್ಮ ಸಚಿವರು ಉತ್ತರ ಕೊಟ್ಟಿದ್ದಾರೆ. ಕುಮಾರಸ್ವಾಮಿ ಅಥವಾ ಅವರ ಪಕ್ಷದ ಶಾಸಕರ ಪ್ರಶ್ನೆಗೆ ಇನ್ನೇನು ಹೇಳಬೇಕು. ಇದನ್ನು ಅರ್ಥೈಸಿಕೊಳ್ಳದ ಕೇಂದ್ರ ಸಚಿವರು ಜಿಲ್ಲೆಗೆ ಬಂದಾಗಲೆಲ್ಲ ಈ ಸರ್ಕಾರ ಜಾಗ ಕೊಡುತ್ತಿಲ್ಲ ಎಂದು ದೂಷಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.
ಕಳೆದ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಎಚ್.ಡಿ. ಕುಮಾರಸ್ವಾಮಿ ಅವರು ನಾನು ಕೇಂದ್ರದಲ್ಲಿ ಮಂತ್ರಿಯಾದರೆ ಮೇಕೆದಾಟು ಯೋಜನೆ ಮಂಜೂರಾತಿ ಕೊಂಡಿಸುವುದಾಗಿ ಭರವಸೆ ನೀಡಿದ್ದರು. ಗೆದ್ದು ಮಂತ್ರಿಯಾದ ನಂತರ ಈಗ ನಾನು ಹಾಗೆ ಹೇಳಿಯೇ ಇಲ್ಲ ಎಂದು ನುಣಿಚಿಕೊಳ್ಳುತ್ತಿದ್ದಾರೆ. ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಮೇಕೆದಾಟು ಯೋಜನೆಗೆ ರಾಜ್ಯ ಸರ್ಕಾರ ಅನುಮತಿ ತಂದಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ನಾಚಿಕೆಯಾಗಬೇಕು ಎಂದರು.ಇತ್ತೀಚೆಗೆ ಹಾಸನದ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಎಚ್ಡಿಕೆ ಅವರು ಎಲ್ಲವನ್ನು ಬಿಟ್ಟು ನಾನು ಕಾಡಿಗೆ ಹೋಗಬೇಕು ಅನಿಸುತ್ತಿದೆ. ನಾನು ಅಸಹಾಯಕ, ಸರ್ಕಾರ ನನಗೆ ಸ್ಪಂದಿಸುತ್ತಿಲ್ಲ. ಆಂಧ್ರಪ್ರದೇಶಕ್ಕೆ ಹೋಗುತ್ತಿರುವ ಕೇಂದ್ರದ ಹಣ ಕರ್ನಾಟಕಕ್ಕೆ ಬರುತ್ತಿಲ್ಲ ಎಂದಿದ್ದಾರೆ. ಇಂತಹ ಅನೇಕ ಮಾತುಗಳಾಡುತ್ತಾರೆ. ಆಗ ನಾವೂ ಸಹ ಏನಾದರೂ ಪ್ರತಿಕ್ರಿಯೆ ನೀಡಬೇಕು ಅನ್ನಿಸುತ್ತದೆ. ಇನ್ನು ಮುಂದೆ ಇಂತಹ ಹೇಳಿಕೆಗಳಿಗೆ ಪ್ರತಿಕ್ರಿಯಿಸದೆ ನಮ್ಮ ಕೈಲಾದ ಜನಸೇವೆ ಮಾಡಬೇಕೆಂದು ನಿರ್ಧರಿಸಿದ್ದೇನೆ ಎಂದರು.
ಈ ಹಿಂದೆ ನಾನು ಸಾರಿಗೆ ಸಚಿವನಾಗಿದ್ದ ಅವಧಿಯಲ್ಲಿ ತಾಲೂಕಿಗೆ ಅಗ್ನಿಶಾಮಕ ಠಾಣೆ ಮಂಜೂರು ಮಾಡಿಸಿ ಒಂದು ಬೆಂಕಿ ನಂದಿಸುವ ವಾಹನ ಕೊಡಿಸಲಾಗಿತ್ತು. ಆ ವಾಹನದ ವಾಯಿದೆ ಮುಗಿದು ಕೆಟ್ಟು ನಿಂತಿದೆ ಎಂದು ಅಧಿಕಾರಿಗಳು ಹೇಳಿದ ಒಂದು ತಿಂಗಳಲ್ಲಿ 1 ಕೋಟಿ ರು.ವೆಚ್ಚದ ಅಗ್ನಿನಂದಿಸುವ ಎರಡು ಹೊಸ ವಾಹನಗಳನ್ನು ಕೊಡಿಸಿದ್ದೇನೆ ಎಂದರು.ತಾಲೂಕಿನಲ್ಲಿ ಹತ್ತು ವರ್ಷ ಶಾಸಕರಾಗಿದ್ದವರು ಇಂತಹ ಯಾವುದಾದರೊಂದು ಕೆಲಸ ಮಾಡಿದ್ದರೆ ತಿಳಿಸಲಿ. ಅವರು ದೊಡ್ಡ ವಿದ್ಯಾವಂತರು ನಾನು ಸಾಮಾನ್ಯ ಶಿಕ್ಷಣ ಪಡೆದವನು. ಆದರೆ, ಅವನಂತೆ ಸುಳ್ಳು ಹೇಳಲು, ಕದ್ದು ಹೋಡಿ ಹೋಗಲು ನನಗೆ ಬರುವುದಿಲ್ಲ. ನಾನು ಕೆಲಸ ಮಾಡುತ್ತೇನೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಸುರೇಶ್‌ಗೌಡರನ್ನು ಜರಿದರು.