ಮತ ಕೇಳುವ ಹಕ್ಕು ಕಳೆದುಕೊಂಡ ಎಚ್‌ಡಿಕೆ

| Published : Nov 05 2024, 01:41 AM IST

ಸಾರಾಂಶ

ಚನ್ನಪಟ್ಟಣ: ನೀವು ಇಲ್ಲಿ ಮತ ಹಾಕುವಾಗ ಬರುವ ಶಬ್ಧ ದೆಹಲಿಯಲ್ಲಿ ಕುಮಾರಸ್ವಾಮಿಗೆ ಕೇಳಿಸಬೇಕು. ಕನಕಪುರದ ಜನ ಹೇಗೆ ನನನ್ನು ೧.೨೩ ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿದರೋ ಅದೇ ರೀತಿ ಯೋಗೇಶ್ವರ್ ಅವರನ್ನು ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದರು.

ಚನ್ನಪಟ್ಟಣ: ನೀವು ಇಲ್ಲಿ ಮತ ಹಾಕುವಾಗ ಬರುವ ಶಬ್ಧ ದೆಹಲಿಯಲ್ಲಿ ಕುಮಾರಸ್ವಾಮಿಗೆ ಕೇಳಿಸಬೇಕು. ಕನಕಪುರದ ಜನ ಹೇಗೆ ನನನ್ನು ೧.೨೩ ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿದರೋ ಅದೇ ರೀತಿ ಯೋಗೇಶ್ವರ್ ಅವರನ್ನು ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದರು.

ತಾಲೂಕಿನ ಹೊಂಗನೂರು ಜಿಪಂ ವ್ಯಾಪ್ತಿಯ ತಗಚಗೆರೆ ಹಾಗೂ ಭೂಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಕ್ಷೇತ್ರದಿಂದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಜನರ ಕಷ್ಟಕ್ಕೆ ಸ್ಪಂದಿಸಿಲ್ಲ, ಈ ಭಾಗದ ಜನರಿಗೆ ಒಂದೇ ಒಂದು ಉತ್ತಮ ಯೋಜನೆ ನೀಡಿಲ್ಲ. ಇಲ್ಲಿನ ಬಡವರಿಗೆ ಸಹಾಯ ಮಾಡಲು ಆಗದಿದ್ದವರಿಗೆ ಮತ್ತೆ ಮತ ಕೇಳುವ ಹಕ್ಕು ಇದೆಯೇ? ಅವರು ಈ ಜನರ ಬಳಿ ಮತ ಕೇಳುವ ಹಕ್ಕು ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಯೋಗೇಶ್ವರ್‌ಗೆ ಮೋಸ:ನಾನು ಇಲ್ಲಿ ಉದ್ಯೋಗ ಮೇಳ ಮಾಡಿದ ನಂತರ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಉದ್ಯೋಗ ಮೇಳ ಮಾಡಿದ್ದಾರೆ. ಅದೇ ಕೆಲಸವನ್ನು ಅವರು ಚನ್ನಪಟ್ಟಣದಲ್ಲಿ ಯಾಕೆ ಮಾಡಲಿಲ್ಲ? ಇಲ್ಲಿನ ಯುವಕರಿಗೆ ಉದ್ಯೋಗ ಕೊಡಿಸಬಹುದಿತ್ತಲ್ಲವೇ? ಈ ಜನರಿಗೆ ಸಹಾಯ ಮಾಡುವ ಮನೋಭಾವ ನಿಮಗಿಲ್ಲ. ಇಲ್ಲಿ ಜಾಗ ಖಾಲಿ ಮಾಡಿ ಯೋಗೇಶ್ವರ್ ಅವರಿಗೆ ತಬ್ಬಿಕೊಂಡೇ ಮೋಸ ಮಾಡಲು ಪ್ರಯತ್ನಿಸಿದೆ. ಅದು ಯೋಗೇಶ್ವರ್ ಅವರಿಗೆ ಅರ್ಥವಾಗಿ ಜನರಿಗೆ ಸಹಾಯ ಮಾಡಬೇಕಾದರೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಅರಿತು ಕಾಂಗ್ರೆಸ್ ಸೇರಿದ್ದಾರೆ ಎಂದರು.

ನಾನು ಹಾಗೂ ಸಿದ್ದರಾಮಯ್ಯ ಅವರು ವಿಧಾನಸಭೆ ಚುನಾವಣೆಗೂ ಮುನ್ನ ಐದು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದೆವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೆಲೆಏರಿಕೆ ಸಮಸ್ಯೆಗೆ ಮುಕ್ತಿ ನೀಡಿ ನಿಮ್ಮ ಬದುಕಿನಲ್ಲಿ ಬದಲಾವಣೆ ತರಬೇಕು ಎಂದು ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆ ಜಾರಿ ಮಾಡಿದ್ದೇವೆ. ಇಂತಹ ಒಂದೇ ಒಂದು ಯೋಜನೆ ನೀಡದ ಕುಮಾರಣ್ಣ ಇಲ್ಲಿ ಬಂದು ಮತ ಕೇಳುತ್ತಿದ್ದಾರೆ. ಈ ಭಾಗದ ಜನರ ಕಷ್ಟಕ್ಕೆ ಸ್ಪಂದಿಸಿದ್ದರೆ ಕುಮಾರಣ್ಣನಿಗೆ ಮತ ಕೇಳುವ ಹಕ್ಕಿತ್ತು. ಆದರೆ ನೀನು ಮತ ಕೇಳುವ ಹಕ್ಕು ಕಳೆದುಕೊಂಡಿದ್ದೀಯ. ನಿನ್ನನ್ನು ನಂಬಿ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ ಜನರನ್ನು ಕೈಬಿಟ್ಟು ಮಂಡ್ಯಕ್ಕೆ ಹೋಗಿದ್ದೀಯ. ಈಗ ಮತ್ತೆ ಬಂದು ಮತ ಕೇಳುತ್ತಿದ್ದೀಯಲ್ಲ, ನಿನಗೆ ಮತ ಕೇಳುವ ಹಕ್ಕಿದೆಯೇ? ಎಂದು ಪ್ರಶ್ನಿಸಿದರು.

ಕ್ಷೇತ್ರಕ್ಕೆ ಬರಲಿಲ್ಲ:

ಕುಮಾರಸ್ವಾಮಿ ಅವರು ಈ ಕ್ಷೇತ್ರದ ಜನಪ್ರತಿನಿಧಿಯಾಗಿ ಒಂದೇ ಒಂದು ದಿನ ಈ ಕ್ಷೇತ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡಲು ಬರಲಿಲ್ಲ. ಹಾಗಾದ್ರೆ ಅವರಿಗೆ ಶಾಸಕ ಸ್ಥಾನ ಯಾಕೆ ಬೇಕು? ಕನ್ನಡ ರಾಜ್ಯೋತ್ಸವದಂದು ನೀನು ಇಲ್ಲಿ ಕನ್ನಡ ಧ್ವಜ ಹಾರಿಸಲಿಲ್ಲ. ಅಲ್ಲಿಗೆ ನಿನ್ನ ಹಾಗೂ ಈ ಚನ್ನಪಟ್ಟಣ ಕ್ಷೇತ್ರದ ಜನರ ನಡುವೆ ಭಾವನಾತ್ಮಕ ಸಂಬಂಧ ಎಲ್ಲಿದೆ? ಹೀಗಾಗಿ ಕುಮಾರಣ್ಣ ಮತ ಕೇಳುವ ಹಕ್ಕು ಕಳೆದುಕೊಂಡಿದ್ದಾರೆ ಎಂದು ಹರಿಹಾಯ್ದರು.

ಲೋಕಸಭೆ ಚುನಾವಣೆ ಬಳಿಕ ಈ ಕ್ಷೇತ್ರದಲ್ಲಿ ಶಾಸಕ ಸ್ಥಾನ ಖಾಲಿಯಾಯಿತು. ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ, ರಾಜ್ಯದ ಉಪಮುಖ್ಯಮಂತ್ರಿಯಾಗಿ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಸಮಸ್ಯೆಗಳನ್ನು ಆಲಿಸಿದೆ. ೨೬ ಸಾವಿರ ಜನ ನನಗೆ ಅರ್ಜಿ ತಂದು ಪಿಂಚಣಿ, ಸಾಲ ಸೌಲಭ್ಯ, ಮನೆ, ನಿವೇಶನಕ್ಕೆ ಮನವಿ ಮಾಡಿದಿರಿ. ನಾನು ೨೦ಕ್ಕೂ ಹೆಚ್ಚು ಬಾರಿ ಕ್ಷೇತ್ರಕ್ಕೆ ಬಂದು ಸಭೆ ಮಾಡಿದ್ದೇನೆ ಎಂದು ತಿಳಿಸಿದರು.

ದೇವರು ವರ, ಶಾಪ ಕೊಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಅದೇ ರೀತಿ ರಾಜಕೀಯದಲ್ಲಿ ನಮಗೆ ಜನ ಅವಕಾಶ ಕೊಟ್ಟಾಗ ನಾವು ಅವರಿಗೆ ಏನು ಮಾಡುತ್ತೇವೆ ಎಂಬುದು ಮುಖ್ಯ. ನಾವು ರಾಜಕಾರಣಿಗಳು ಚುನಾವಣೆಯಲ್ಲಿ ನಿಮ್ಮ ಸೇವೆ ಮಾಡುತ್ತೇವೆ ಎಂದು ಹೇಳಿ ನಿಮ್ಮ ಮುಂದೆ ಬಂದು ನಿಲ್ಲುತ್ತೇವೆ. ನಿಮ್ಮ ಬದುಕಿನಲ್ಲಿ ಬದಲಾವಣೆ ತಂದು, ನಿಮ್ಮ ಕಷ್ಟ ಸುಖಕ್ಕೆ ನಿಲ್ಲುತ್ತೇವೆ. ನಮಗೆ ಮತ ನೀಡಿ ಎಂದು ಕೇಳಲು ಬರುತ್ತೇವೆ ಎಂದು ತಿಳಿಸಿದರು.

(ಒಂದು ಫೋಟೋ ಮಾತ್ರ ಬಳಸಿ)

ಪೊಟೋ೧೪ಸಿಪಿಟಿ೪:

ಚನ್ನಪಟ್ಟಣ ತಾಲೂಕಿನ ಅಕ್ಕೂರು ಗ್ರಾಮದಲ್ಲಿ ಡಿ.ಕೆ.ಶಿವಕುಮಾರ್ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಪೊಟೋ೧೪ಸಿಪಿಟಿ೫:

ತೆರೆದ ವಾಹನದಲ್ಲಿ ಸಿ.ಪಿ.ಯೋಗೇಶ್ವರ್ ಪರ ಡಿ.ಕೆ.ಶಿವಕುಮಾರ್ ಮತಯಾಚನೆ ಮಾಡಿದರು.