ಪರಿಸರ ನಾಶ ಮಾಡುವ ಗಣಿಗಾರಿಕೆಗೆ ಎಚ್‌ಡಿಕೆ ಅನುಮತಿ

| Published : Jun 18 2024, 12:49 AM IST

ಸಾರಾಂಶ

ಮಂಡ್ಯ ಸಂಸದ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಪರಿಸರ ನಾಶ ಮಾಡುವಂತಹ ಗಣಿಗಾರಿಕೆಗೆ ಅನುಮತಿ ನೀಡಿರುವುದು ದೇಶದ ದೌರ್ಭಾಗ್ಯ ಎಂದು ಕಾಂಗ್ರೆಸ್ ಮುಖಂಡ ಶಿವನಂಜು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಸಂಸದ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಪರಿಸರ ನಾಶ ಮಾಡುವಂತಹ ಗಣಿಗಾರಿಕೆಗೆ ಅನುಮತಿ ನೀಡಿರುವುದು ದೇಶದ ದೌರ್ಭಾಗ್ಯ ಎಂದು ಕಾಂಗ್ರೆಸ್ ಮುಖಂಡ ಶಿವನಂಜು ಆರೋಪಿಸಿದರು. ಬಳ್ಳಾರಿ ಜಿಲ್ಲೆ ಸೊಂಡೂರು ತಾಲೂಕಿನ ಸ್ವಾಮಿಮಲೈ ಪಶ್ಚಿಮ ಘಟ್ಟಗಳ ಸಾಲಿಗೆ ಸೇರಿದ ಅತ್ಯಂತ ಸೂಕ್ಷ್ಮಜೀವಿ ಹಾಗೂ ಪ್ರಾಣಿ ಸಂಕುಲಗಳು ಮತ್ತು ಸಸ್ಯ ಸಂಕುಲಗಳು ಇರುವ ಸೂಕ್ಷ್ಮ ಪರಿಸರ ಅಭಯಾರಣ್ಯ ಪ್ರದೇಶವಾಗಿದ್ದು, ಇದರಲ್ಲಿ ೪೮೫.೭೭ ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ಮಾಡಲು ಕೇಂದ್ರ ಸಚಿವರು ಅನುಮತಿ ನೀಡಿರುವುದನ್ನು ಸೋಮವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.ಈ ಪ್ರದೇಶದಲ್ಲಿ ಗಣಿಗಾರಿಕೆ ಮಾಡಿದರೆ ೯೯,೩೮೮ ಬೃಹತ್ ಮರಗಳು, ಜೀವ ಸಂಕುಲಗಳು ಹಾಗೂ ಔಷಧ ಸಸ್ಯಗಳ ಮಾರಣ ಹೋಮವಾಗಲಿದ್ದು, ಅಂತರ್ಜಲ ಹಾಗೂ ಭೂಕುಸಿತಕ್ಕೆ ಕಾರಣವಾಗಲಿದೆ. ಅರಣ್ಯ ಇಲಾಖೆ ಅನುಮತಿ ನೀಡಬಾರದು ಎಂದು ವರದಿ ನೀಡಿದ್ದರೂ ಅನುಮತಿಸಿರುವುದು ಸರಿಯಲ್ಲ ಎಂದು ದೂರಿದರು. ೨೦೧೮ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಈ ಪ್ರದೇಶದಲ್ಲಿ ಗಣಿಗಾರಿಕೆ ಮಾಡಲು ಬಿಡುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿ ಈಗ ಅವರೇ ಅನುಮತಿ ನೀಡಿದ್ದಾರೆ. ಈ ಪ್ರದೇಶದಲ್ಲಿ ಸಸಿಗಳನ್ನು ನೆಡಲು ಕಂಪನಿ ೧೨೩ ಕೋಟಿ ರು. ನೀಡಲಿದೆ. ೧೨೩ ಲಕ್ಷ ಕೋಟಿ ಖರ್ಚು ಮಾಡಿದರೂ ಅದೇ ಪರಿಸರವನ್ನು ಮತ್ತೆ ಸೃಷ್ಠಿ ಮಾಡಲಾಗದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆಯನ್ನು ಪುನರಾರಂಭ ಮಾಡಿ 3000 ಕುಟುಂಬಗಳಿಗೆ ಅನುಕೂಲ ಮಾಡಿಕೊಡಬೇಕು. ದೇಶದಾದ್ಯಂತ ಹಲವಾರು ಬೃಹತ್ ಕೈಗಾರಿಕೆಗಳು ಮುಚ್ಚಿಹೋಗಿದ್ದು, ಅವುಗಳನ್ನು ಪುನರಾರಂಭ ಮಾಡಿ ಜನರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿದರು. ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದ್ದು, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ೧.೮೫ ಸಾವಿರ ಕೋಟಿ ಅನ್ಯಾಯವಾಗಿದ್ದು, ನಿಮ್ಮ ಅಧಿಕಾರ ಹಾಗೂ ಪ್ರಭಾವ ಬಳಸಿ ತೆರಿಗೆ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿದರು. ನಗರಸಭಾ ಸದಸ್ಯ ಶ್ರೀಧರ್, ಮುಖಂಡರಾದ ನಾಗರತ್ನ, ಸೋಮಶೇಖರ್ ಇತರರು ಗೋಷ್ಠಿಯಲ್ಲಿದ್ದರು.