ಸಾರಾಂಶ
ಬೆಂಗಳೂರು : ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಲವು ವಿಕಲಚೇತನ ಉದ್ಯೋಗಿಗಳೊಂದಿಗೆ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಸಂಕ್ರಾಂತಿ ಹಬ್ಬ ಆಚರಿಸಿದರು.
ಮಂಗಳವಾರ ತಮ್ಮ ಜೆ.ಪಿ.ನಗರದ ನಿವಾಸದಲ್ಲಿ 600ಕ್ಕೂ ಹೆಚ್ಚು ಉದ್ಯೋಗಿಗಳ ಜತೆ 6ನೇ ವರ್ಷದ ಸಂಕ್ರಾಂತಿಯನ್ನು ಆಚರಿಸಿಕೊಂಡರು. 2019 ರಿಂದಲೂ 600ಕ್ಕೂ ಹೆಚ್ಚು ವಿಕಲಚೇತನ ಉದ್ಯೋಗಿಗಳು ಕುಮಾರಸ್ವಾಮಿ ಅವರೊಂದಿಗೆ ಪ್ರತೀ ವರ್ಷ ತಪ್ಪದೇ ಸಂಕ್ರಾಂತಿ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ. ಕುಮಾರಸ್ವಾಮಿ ಅವರೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸಿಕೊಳ್ಳಲು ತಮ್ಮ ಕುಟುಂಬ ಸಮೇತವಾಗಿ ರಾಜ್ಯದ ಎಲ್ಲಾ ಭಾಗಗಳಿಂದ ಸಿಬ್ಬಂದಿ ಆಗಮಿಸಿದ್ದರು.
ಕಳೆದ ಆರು ವರ್ಷಗಳಿಂದ ಇದನ್ನು ನಿರಂತರವಾಗಿ ಕುಮಾರಸ್ವಾಮಿ ಮುಂದುವರಿಸಿಕೊಂಡು ಬಂದಿದ್ದಾರೆ. ಈ ವೇಳೆ ಎಲ್ಲರಿಗೂ ಶುಭ ಕೋರಿದ ಕುಮಾರಸ್ವಾಮಿ ಅವರು, ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಋಣಿ ಆಗಿದ್ದೇನೆ. ನಿಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿರುವುದಕ್ಕೆ ನಾನು ಆಭಾರಿ. ನಿಮ್ಮ ಹಾರೈಕೆ ಪ್ರೀತಿಯೇ ನನಗೆ ಶ್ರೀರಕ್ಷೆ ಎಂದು ಭಾವುಕರಾದರು.
ಅವಕಾಶ ದೊರಕಿದಾಗ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ವಿಕಲಚೇತನರಿಗೆ ಸಾಧ್ಯವಾದಷ್ಟು ನೆರವು ಕೊಟ್ಟಿದ್ದೇನೆ. ದೈಹಿಕವಾಗಿ ಶಕ್ತಿ ಇಲ್ಲದ ಯಾರೇ ಇದ್ದರೂ ಅವರಿಗಾಗಿ ನನ್ನ ಹೃದಯ ಮುಂದೆಯೂ ಮಿಡಿಯುತ್ತದೆ. ಪ್ರಾಮಾಣಿಕವಾಗಿ ಅಂಥವರ ಒಳಿತಿಗಾಗಿ ಪ್ರಯತ್ನ ಮಾಡುತ್ತೇನೆ. ವಿಕಲಚೇತನರು, ದೈಹಿಕವಾಗಿ ಆಶಕ್ತರ ಬಗ್ಗೆ ನಮಗೆ ಅನುಕಂಪಕ್ಕಿಂತ ಮಿಗಿಲಾಗಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಕೆಲಸ ಆಗಬೇಕಿದೆ. ನನಗೆ ಅವಕಾಶ ಸಿಕ್ಕಿದಾಗ ನಾನು ಇಂಥವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.