ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ವಿಚಾರವಾಗಿ ವಿಧಾನ ಪರಿಷತ್ ಚುನಾವಣೆ ಮುಗಿದ ನಂತರ ನಾನೇ ಡೇಟ್ ಕೊಡುತ್ತೇನೆ. ನಾನೂ ಹೋಗಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕರ್ಪೂರ ಹಚ್ಚಿ ಬರುತ್ತೇನೆ. ಬೇಕಾದರೆ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಬರಲಿ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತೊಮ್ಮೆ ಆಣೆ ಪ್ರಮಾಣದ ಸವಾಲು ಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆವತ್ತೇ ಯೋಜನೆಯನ್ನು ಕೈಬಿಡಲು ಸಿದ್ಧನಾಗಿದ್ದೆ ಎಂದು ಕುಮಾರಸ್ವಾಮಿ ಆಗಲಿ ಅಥವಾ ಅವರ ಸುಪುತ್ರರಾಗಲಿ ಚಾಮುಂಡೇಶ್ವರಿ ದೇವಾಲಯಕ್ಕೆ ಬಂದು ಕರ್ಪೂರ ಹಚ್ಚಲಿ. ಯಾರು ಸುಳ್ಳು ಹೇಳುತ್ತಿದ್ದಾರೆ ಅನ್ನೋದನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. 2018ರಲ್ಲೇ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಟೌನ್‌ಶಿಪ್‌ಗೆ ಗುರುತಿಸಿದ್ದ ಪ್ರದೇಶವನ್ನು ರೆಡ್ ಜೋನ್‌ನಿಂದ ಎಲ್ಲೋ ಜೋನ್ ಮಾಡಬೇಕಿತ್ತು. ಆಗ ರೆಡ್ ಜೋನ್ ತೆಗೆದಿದ್ದರೆ ಈ ಪರಿಸ್ಥಿತಿ ಯಾಕೆ ಬರುತ್ತಿತ್ತು. ರೈತರಿಗೆ ಇವತ್ತು ದುಪ್ಪಟ್ಟು ಹಣ ಸಿಗುತ್ತಿತ್ತು ಎಂದು ಹೇಳಿದರು.

ನಿಖಿಲ್‌ ಕುಮಾರಸ್ವಾಮಿ ಆತ್ಮಸಾಕ್ಷಿ ಮಾತುಗಳನ್ನಾಡಿದ್ದಾರೆ. ಸುಮ್ಮನೆ ಮಾತು ಆಡೋದ್ಯಾಕೆ. ದೇವಸ್ಥಾನಕ್ಕೆ ಬಂದರೆ ಸತ್ಯ ಗೊತ್ತಾಗುತ್ತೆ. ಆಗ ಆತ್ಮಸಾಕ್ಷಿ ಯಾರಿಗಿದೆ ಅಂತ ತಿಳಿಯುತ್ತದೆ. ಅವರು ಚಾಮುಂಡೇಶ್ವರಿ ದೇವಿಗೆ ಪೂಜೆ ಮಾಡುತ್ತಾರೆ ಅಲ್ವಾ? ಮೊದಲಿಂದಲೂ ನಾನು ಕೂಡ ಚಾಮುಂಡೇಶ್ವರಿಯ ಭಕ್ತ ಅಂತ ಹೇಳ್ಕೊಂಡು ಬಂದಿದ್ದಾರೆ. ಹಾಗಿದ್ದರೆ ಬಂದು ಪ್ರಮಾಣ ಮಾಡಲಿ ಎಂದರು.

ವಿಧಾನ ಪರಿಷತ್ ಚುನಾವಣೆ ಬಳಿಕ ಒಂದು ಡೇಟ್ ಫಿಕ್ಸ್ ಮಾಡುತ್ತೇನೆ. ಅವರು ಬರದೆ ಇದ್ದರೂ ನಾನೇ ಹೋಗಿ ಕರ್ಪೂರ ಹಚ್ಚಿ ಬರುತ್ತೇನೆ. ಯಾರು ಸುಳ್ಳು ಹೇಳುತ್ತಿದ್ದಾರೆಂದು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳಲಿ ಎಂದು ಬಾಲಕೃಷ್ಣ ಹೇಳಿದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಿಎಂ ಬದ್ಧ:


ಮಾಗಡಿ ಕ್ಷೇತ್ರಕ್ಕೆ ವಿಶೇಷ ಅನುದಾನಕ್ಕೆ ಬೇಡಿಕೆ ಇಟ್ಟಿದ್ದೀರಾ ಎಂಬ ಸುದ್ಧಿಗಾರರ ಪ್ರಶ್ನೆಗೆ ಶಾಸಕ ಬಾಲಕೃಷ್ಣ ಪ್ರತಿಕ್ರಿಯಿಸಿ, ನಾವ್ಯಾಕೆ ಅನುದಾನ ಕೇಳಬೇಕು? ಇದು ಸಿಎಂ ಅವರ ತವರು ಜಿಲ್ಲೆಯಾಗಿದ್ದು, ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ಮುಖ್ಯಮಂತ್ರಿ ಬದ್ಧರಾಗಿದ್ದಾರೆ ಎಂದರು.

ನಾವು ಬೊಗಳೆ ಬಿಡಲ್ಲ, ಸುಳ್ಳು ಹೇಳಲ್ಲ. ಭಾವನಾತ್ಮಕವಾಗಿ ಮತ ಕೇಳಲ್ಲ. ನಾವು ಕೆಲಸ ಮಾಡಿ, ಮತ ಹಾಕಿ ಅಂತ ಕೇಳುತ್ತೇವೆ. ಭಾವನಾತ್ಮಕವಾಗಿ ಮತ ಕೇಳೋದು, ಜಾತಿ ಆಧಾರದ ಮೇಲೆ ಮತ ಕೇಳುವವರು ನಾವಲ್ಲ. ನಮ್ಮ ಸಾಕ್ಷಿಗುಡ್ಡೆ ಏನು ಅಂತ ತಿಳಿಸಿ ಮತ ಕೇಳುತ್ತೇವೆ ಎಂದು ಬಾಲಕೃಷ್ಣ ಹೇಳಿದರು.

15ಕೆಆರ್ ಎಂಎನ್ 5.ಜೆಪಿಜಿ

ಶಾಸಕ ಎಚ್.ಸಿ.ಬಾಲಕೃಷ್ಣ.