ಕುಮಾರಸ್ವಾಮಿಯವರು ಉತ್ತರ ಕುಮಾರನಂತೆ, ಕೇವಲ ಬಡಾಯಿ ಕೊಚ್ಚಿಕೊಳ್ಳುತ್ತಾರೆ, ದಾಖಲೆ ನೀಡುವುದಿಲ್ಲ. ‘ಸ್ಟಿಂಗ್ ಆಪರೇಷನ್’ಗೆ ಸಂಬಂಧಿಸಿದಂತೆ ಎಚ್‌.ಡಿ.ಕುಮಾರಸ್ವಾಮಿ ಬಳಿ ನಿರ್ದಿಷ್ಟ ಮಾಹಿತಿ ಅಥವಾ ದಾಖಲೆ ಇದ್ದರೆ ಪೊಲೀಸ್ ಮಹಾನಿರ್ದೇಶಕರಿಗೆ ಸಲ್ಲಿಸಲಿ. ನಮ್ಮ ಮೇಲೆ ನಂಬಿಕೆ ಇಲ್ಲದಿದ್ದರೆ ನ್ಯಾಯಾಲಯದ ಮುಂದೆ ದಾಖಲೆಗಳನ್ನು ಸಲ್ಲಿಸಿ ಸತ್ಯಾಂಶ ಸಾಬೀತುಪಡಿಸಲಿ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ:

ಕುಮಾರಸ್ವಾಮಿಯವರು ಉತ್ತರ ಕುಮಾರನಂತೆ, ಕೇವಲ ಬಡಾಯಿ ಕೊಚ್ಚಿಕೊಳ್ಳುತ್ತಾರೆ, ದಾಖಲೆ ನೀಡುವುದಿಲ್ಲ. ‘ಸ್ಟಿಂಗ್ ಆಪರೇಷನ್’ಗೆ ಸಂಬಂಧಿಸಿದಂತೆ ಎಚ್‌.ಡಿ.ಕುಮಾರಸ್ವಾಮಿ ಬಳಿ ನಿರ್ದಿಷ್ಟ ಮಾಹಿತಿ ಅಥವಾ ದಾಖಲೆ ಇದ್ದರೆ ಪೊಲೀಸ್ ಮಹಾನಿರ್ದೇಶಕರಿಗೆ ಸಲ್ಲಿಸಲಿ. ನಮ್ಮ ಮೇಲೆ ನಂಬಿಕೆ ಇಲ್ಲದಿದ್ದರೆ ನ್ಯಾಯಾಲಯದ ಮುಂದೆ ದಾಖಲೆಗಳನ್ನು ಸಲ್ಲಿಸಿ ಸತ್ಯಾಂಶ ಸಾಬೀತುಪಡಿಸಲಿ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸ್ಟಿಂಗ್ ಆಪರೇಷನ್‌ ಕುರಿತು ಸಮರ್ಪಕ ತನಿಖೆ ನಡೆಯುತ್ತಿದ್ದು, ಸತ್ಯಾಂಶ ಹೊರಬರಲಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರೇ ಇದರ ಹಿಂದೆ ಯಾಕೆ ಇರಬಾರದು? ಎಂದು ಅವರು ಪ್ರಶ್ನಿಸಿದರು.

ತನಿಖೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದೆ ಮಾತನಾಡುವುದು ಸರಿಯಲ್ಲ. ಅವರ ಬಳಿ ದಾಖಲೆಗಳಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲಿ. ತನಿಖೆ ವೇಳೆ ಸಿಕ್ಕಿರುವ ಸಾಕ್ಷ್ಯಗಳ ಆಧಾರದ ಮೇಲೆ ವಿಚಾರಣೆ ನಡೆಯುತ್ತಿದೆ. ನಮ್ಮ ತನಿಖೆ ಬಗ್ಗೆ ಅವರಿಗೆ ಏನು ಗೊತ್ತು?. ನೀವು ಡಿಜಿ ಕಚೇರಿಗೆ ಹೋಗಿದ್ದೀರಿ ಅಲ್ಲವೇ? ನಿಮ್ಮ ಬಳಿ ದಾಖಲೆಗಳಿದ್ದರೆ ಕೊಡಿ. ಕುಮಾರಸ್ವಾಮಿಯವರೇ, ನಿಮ್ಮ ಕುರ್ಚಿಯ ಘನತೆ ಕಾಪಾಡಿಕೊಳ್ಳಿ. ಓಡಿಹೋಗುವ ಕೆಲಸ ಮಾಡಬೇಡಿ. ನಿಮ್ಮ ಮನಸ್ಥಿತಿಯನ್ನು ಕರ್ನಾಟಕದ ಜನ ನೋಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಚುನಾವಣೆಯಲ್ಲಿ ಸಾಮಾನ್ಯ ಕೋಟದಲ್ಲಿ ಸ್ಪರ್ಧಿಸಲು ಸಿದ್ಧ:

ಚುನಾವಣೆಯಲ್ಲಿ ಸಾಮಾನ್ಯ ಕೋಟದಲ್ಲಿ ಸ್ಪರ್ಧೆ ಮಾಡಲಿ ಅಂತ ಸವಾಲು ಹಾಕ್ತಿರಾ?, ಸ್ಪರ್ಧೆ ಮಾಡಲು ನಾನು ರೆಡಿ ಇದ್ದೇನೆ. ಆದರೆ ಜನರ ಮನಸ್ಥಿತಿ ಹಾಗಿದೆಯಾ?. ಒಬ್ಬ ದಲಿತನ ಗೆಲ್ಲಿಸುವ ಮನಸ್ಥಿತಿ ನಮ್ಮ ಸಮಾಜದಲ್ಲಿ ಇದೆಯಾ?. ಈಗಲೂ ಕೂಡ ರಾಷ್ಟ್ರಪತಿ ಮುರ್ಮುರನ್ನು ದೇವಸ್ಥಾನದೊಳಗೆ ಬಿಡುವುದಿಲ್ಲ. ಖರ್ಗೆ ಸಾಹೇಬರು ಉತ್ತರಖಂಡದಲ್ಲಿ ಭಾಷಣ ಮಾಡಿದಾಗ ಗೋಮೂತ್ರದಿಂದ ಶುಚಿ ಮಾಡುತ್ತಾರೆ ಎಂದು ಆರೋಪಿಸಿದರು.

ಧರ್ಮಸ್ಥಳ, ಹಾಸನಾಂಬೆ ದೇವಸ್ಥಾನಗಳಿಗೆ ಬನ್ನಿ ಅಂತ ಕುಮಾರಸ್ವಾಮಿ ಅವರು ಹೇಳುತ್ತಿದ್ದಾರೆ, ಸತ್ಯ ಹೇಳಲು ಧರ್ಮಸ್ಥಳ, ಹಾಸನಂಬೆ ದೇವಸ್ಥಾನಗಳಿಗೆ ಯಾಕೆ ಹೋಗಬೇಕು?. ನಾನು ಎಲ್ಲಾ ಕಡೆಯೂ ನಿಜಾನೇ ಹೇಳುತ್ತೇನೆ. ಧರ್ಮಸ್ಥಳಕ್ಕೆ ಹೋದರೆನೇ ನಿಜ ಹೇಳಬೇಕಾ?. ನನ್ನ ಪಕ್ಕದಲ್ಲಿ ಬಂದು ಕುಳಿತುಕೊಳ್ಳಲಿ, ಮಾಧ್ಯಮಗಳ ಮುಂದೆ ಸತ್ಯ ಹೇಳಲಿ ಎಂದು ಖರ್ಗೆ ಸವಾಲೆಸೆದರು.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ದಲಿತ, ಬಲಿತ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಖರ್ಗೆ,

ದಲಿತರು ಐಟಿ ಮಿನಿಸ್ಟರ್, ದಲಿತರು ಹೋಂ ಮಿನಿಸ್ಟರ್ ಆದರೆ ಅವರಿಗೆ ರಕ್ತ ಕುದಿಯುತ್ತೆ ಅಂದರೆ 10 ಸೂಟ್ ಹೊಲಿಸಿ ಅವರ ರಕ್ತ ಕುದಿಸುತ್ತೇನೆ. ಏನ್ ಮಾಡ್ತೀರಿ?. ಮಣ್ಣಿನ ಮಕ್ಕಳು ಫಿಲಂ ಪ್ರೊಡ್ಯೂಸರ್ ಆಗಬಹುದು. ಮಣ್ಣಿನ ಮೊಮ್ಮಕ್ಕಳು ಜಾಗ್ವಾರ್ ಆಗಬಹುದು. ಮಣ್ಣಿನ ಮಕ್ಕಳು ಪ್ಯಾಂಟ್ ಶರ್ಟ್ ಹಾಕಬಹುದು. ದಲಿತರ ಮಕ್ಕಳು ಬಲಿತರು ಆಗಬಾರದಾ? ಎಂದು ಪ್ರಶ್ನಿಸಿದರು.

ನೀವೇ ಉತ್ತರ ಕುಮಾರ: ಎಚ್ಡಿಕೆ

ಕನ್ನಡಪ್ರಭ ವಾರ್ತೆ ಹಾಸನ:‘ಸ್ಟಿಂಗ್ ಆಪರೇಷನ್’ನಲ್ಲಿ ಸಂಬಂಧಪಟ್ಟ ವ್ಯಕ್ತಿಯೇ ಅದನ್ನು ನಡೆಸಿರುವುದಾಗಿ ಒಪ್ಪಿಕೊಂಡಿರುವಾಗ ತನಿಖೆಗೆ ಮತ್ತೆ ದಾಖಲೆಗಳನ್ನು ಒದಗಿಸುವಂತೆ ಕೇಳುತ್ತಿರುವುದರ ಔಚಿತ್ಯವೇನು? ಸತ್ಯ ಸಂಗತಿ ಹೀಗಿರುವಾಗ ಉತ್ತರ ಕುಮಾರನ ಕೆಲಸ ಮಾಡುತ್ತಿರುವವರು ಯಾರು? ನೀವಲ್ಲವೇ? ಎಂದು ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.ಕುಮಾರಸ್ವಾಮಿಯವರು ಉತ್ತರ ಕುಮಾರನಂತೆ, ಕೇವಲ ಬಡಾಯಿ ಕೊಚ್ಚಿಕೊಳ್ಳುತ್ತಾರೆ, ದಾಖಲೆ ನೀಡುವುದಿಲ್ಲ ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಎಚ್ಡಿಕೆ, ‘ಸ್ಟಿಂಗ್ ಆಪರೇಷನ್’ ಮಾಡಿದ ವ್ಯಕ್ತಿಗೆ ನಟ್ಟು ಬೋಲ್ಟ್ ಇಲ್ವಾ ಎಂಬುದು ನನ್ನ ಪ್ರಶ್ನೆ. ರಾಜ್ಯ ಸರ್ಕಾರ ಆ ವ್ಯಕ್ತಿಯ ಗುಲಾಮಗಿರಿ ಮಾಡುತ್ತಿದೆ. ಅಂದಮೇಲೆ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯುವ ಬಗ್ಗೆ ಅನುಮಾನವಿದೆ ಎಂದರು.ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ ಸ್ಟಿಂಗ್ ಆಪರೇಷನ್ ಮಾಡಲಾಗಿದೆ ಎಂಬ ಆರೋಪವನ್ನು ಉಲ್ಲೇಖಿಸಿದ ಸಚಿವರು, ಇಂತಹ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿತ್ತು. ಆದರೆ, ಆರೋಪಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವ ಬದಲು ತನಿಖೆಯ ಹೆಸರಿನಲ್ಲಿ ವಿಳಂಬ ಮಾಡಲಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತಪಡಿಸಿದರು.ಸ್ಟಿಂಗ್ ಆಪರೇಷನ್ ಮಾಡಿದ ವ್ಯಕ್ತಿಯೇ ಅದನ್ನು ಒಪ್ಪಿಕೊಂಡಿರುವಾಗ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ?. ತನಿಖೆಗೆ ಮತ್ತೆ ದಾಖಲೆಗಳನ್ನು ಒದಗಿಸುವಂತೆ ಕೇಳುತ್ತಿರುವುದೇಕೆ?. ರಾಜ್ಯದಲ್ಲಿ ಕಾನೂನು ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯವಾಗುತ್ತಿದೆಯೇ, ಇಲ್ಲವೇ ಎಂಬ ಅನುಮಾನ ಮೂಡಿಸುತ್ತಿದೆ ಎಂದರು.ಪ್ರಕರಣ ಕುರಿತು ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಪ್ರಕರಣ ಸಂಬಂಧ ಡಿಜಿಪಿ ಅವರನ್ನು ಭೇಟಿ ಮಾಡಿ ತನಿಖೆ ನಡೆಸುವಂತೆ ಮನವಿ ಸಲ್ಲಿಸಿದ್ದೇನೆ. ಆದರೆ, ಅಲ್ಲಿನವರ ಮುಖಭಾವ ನೋಡಿದರೆ ಸೂಕ್ತ ತನಿಖೆ ನಡೆಯುವ ಲಕ್ಷಣ ಕಾಣಿಸುತ್ತಿಲ್ಲ. ತನಿಖೆ ನಡೆಸಲು ದಾಖಲೆಗಳನ್ನು ಕೊಡಿ ಎಂದು ಕೇಳುತ್ತಿದ್ದಾರೆ. ಸ್ಟಿಂಗ್ ಆಪರೇಷನ್ ಮಾಡಿರುವುದಾಗಿ ಸಂಬಂಧಪಟ್ಟ ವ್ಯಕ್ತಿಯೇ ಒಪ್ಪಿಕೊಂಡಿರುವಾಗ ಮತ್ತೆ ಯಾವ ದಾಖಲೆ ನೀಡಬೇಕು? ಎಂದು ಪ್ರಶ್ನಿಸಿದರು.ಪ್ರಕರಣದ ತನಿಖೆಯಲ್ಲಿ ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಅವಕಾಶ ನೀಡಬಾರದು. ಆರೋಪಗಳ ಸತ್ಯಾಸತ್ಯತೆ ಹೊರಬರಲು ಕಾನೂನುಬದ್ಧವಾಗಿ ತನಿಖೆ ನಡೆಯಬೇಕು ಎಂಬುದು ನನ್ನ ಆಗ್ರಹ ಎಂದು ಹೇಳಿದರು.ಸ್ಟಿಂಗ್ ಆಪರೇಷನ್ ಪ್ರಕರಣ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು. ತನಿಖೆಯ ಪ್ರಗತಿ ಮತ್ತು ಕೈಗೊಂಡ ಕ್ರಮಗಳ ಬಗ್ಗೆ ಜನರಿಗೆ ವಿಶ್ವಾಸ ಮೂಡುವಂತೆ ನಡೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.