ರಾಷ್ಟ್ರವನ್ನು ಅಭದ್ರಗೊಳಿಸಲು ನಡೆಯುತ್ತಿರುವ ಸಂಚುಗಳಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಫಂಡಿಂಗ್ ಮಾಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು : ರಾಷ್ಟ್ರವನ್ನು ಅಭದ್ರಗೊಳಿಸಲು ನಡೆಯುತ್ತಿರುವ ಸಂಚುಗಳಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಫಂಡಿಂಗ್ ಮಾಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರವಿರೋಧಿ ಹೋರಾಟಗಳಿಗೆ ಕಾಂಗ್ರೆಸ್ ನಿಂದ ನೆರವು ಸಿಗುತ್ತಿದೆ ಎಂಬುದನ್ನು ಸ್ವತಃ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಮತ್ತು ಸಿಜೆಪಿ ಎರಡೂ ಒಂದೇ ಎಂದು ಅವರು ಹೇಳಿದ್ದಾರೆ ಎಂದರು.
ಸಿಜೆಪಿಯವರು ಯಾವುದೇ ಗಲಾಟೆ ಮಾಡಿದರೂ ನಾವು ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎನ್ನುವ ಮುಖಾಂತರ ನೇರವಾಗಿ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಅವರಿಗೊಂದು, ಬೇರೆಯವರಿಗೊಂದು ಕಾನೂನು ಇದೆಯೇ? ರಾಷ್ಟ್ರದಲ್ಲಿ ಎಂತಹ ಅಹಿತಕರ ಘಟನೆಗಳು ನಡೆಯುತ್ತಿವೆ ಎಂಬುದು ಗೊತ್ತಿದೆ. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಪ್ರಿಯಾಂಕ್ ಖರ್ಗೆ ಕೊಟ್ಟಿರುವ ಹೇಳಿಕೆ ಗಂಭೀರವಾದುದು. ಇವರು ಸರ್ಕಾರದ ಹಣವನ್ನು ಅದರಲ್ಲಿಯೂ ಕನ್ನಡಿಗರ ತೆರಿಗೆ ಹಣವನ್ನು ದೆಹಲಿಯ ಗಲಭೆಕೋರರಿಗೆ ರವಾನೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ನೇರ ಆರೋಪ ಮಾಡಿದರು.
ರಾಹುಲ್ ಹೋರಾಟಗಳ ದುಡ್ಡಿನ ಮೂಲ ಯಾವುದು?:
ಸಿಜೆಪಿ ಚಟುವಟಿಕೆಗಳಿಗೆ ಹಣ ಎಲ್ಲಿಂದ ಬರುತ್ತಿದೆ? ರಾಹುಲ್ ಗಾಂಧಿ ನೇತೃತ್ವ ವಹಿಸಿರುವ ಹೋರಾಟಗಳಿಗೆ ದುಡ್ಡು ಯಾರು ಕೊಡುತ್ತಿದ್ದಾರೆ? ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಅಧ್ಯಕ್ಷರ ಪುತ್ರ ಹಾಗೂ ಕರ್ನಾಟಕದ ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ ಅವರು ಇದಕ್ಕೆ ಸ್ಪಷ್ಟನೆ ಕೊಡಬೇಕು. ರಾಜ್ಯದ ಜನರ ಹಣವನ್ನು ರಾಷ್ಟ್ರ ವಿರೋಧಿ ಕೃತ್ಯಗಳನ್ನು ನಡೆಸುವವರಿಗೆ ಕೊಡಲಾಗುತ್ತಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಎಲ್ಲವನ್ನು ಕಾಲವೇ ನಿರ್ಣಯ ಮಾಡುತ್ತದೆ
ನಮ್ಮ ಮುಖ್ಯಮಂತ್ರಿ ಎಲ್ಲವನ್ನು ಕಾಲವೇ ನಿರ್ಣಯ ಮಾಡುತ್ತದೆ ಎಂದು ಪದೇ ಪದೆ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಮತ್ತೊಂದೆಡೆ ರಾಜ್ಯದ ಹಣ ದುರುದ್ದೇಶಗಳಿಗೆ ಪೋಲಾಗುತ್ತಿದೆ. ಮುಖ್ಯಮಂತ್ರಿ ಹೇಳುವಂತೆ ಎಲ್ಲವನ್ನು ಕಾಲವೇ ನಿರ್ಣಯ ಮಾಡುತ್ತದೆ. ಖಂಡಿತವಾಗಿಯೂ ಕಾಲವೇ ಎಲ್ಲವನ್ನೂ ನಿರ್ಣಯ ಮಾಡಿ ಇವರ ಎಲ್ಲಾ ಒಳಸಂಚುಗಳು ಹಾಗೂ ರಾಷ್ಟ್ರ ವಿರೋಧಿ ಕೃತ್ಯಗಳು ಬಯಲಾಗಲಿವೆ ಎಂದು ಹೇಳಿದರು.
