ಶ್ರೀಕ್ಷೇತ್ರದ ಮಾಳಮ್ಮದೇವಿ, ಆದಿಶಕ್ತಿ ಸ್ಥಂಬಾಬಿಕ, ಮಹಾಗಣಪತಿ ಸುಬ್ರಹ್ಮಣ್ಯಸ್ವಾಮಿ ಸೇರಿದಂತೆ ಎಲ್ಲಾ ಅಧಿದೇವತೆಗಳಿಗೆ ಪೂಜೆ ಸಲ್ಲಿಸಿದ ಎಚ್ಡಿಕೆ ಅವರು ಭೈರವೈಕ್ಯಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ಮಹಾಗದ್ದುಗೆಗೆ ವಿಶೇಷ ಪೂಜೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಆದಿಚುಂಚಗಿರಿ ಮಹಾ ಸಂಸ್ಥಾನಮಠದಲ್ಲಿ ಭಾನುವಾರ ನಡೆದ ವಿಶೇಷ ಪೂಜಾಕಾರ್ಯದಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಪಾಲ್ಗೊಂಡು ಕ್ಷೇತ್ರಾಧಿದೇವತೆಗಳು ಮತ್ತು ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದುಕೊಂಡರು.

ಬೆಳಗ್ಗೆ 9 ಗಂಟೆ ವೇಳೆಗೆ ಶ್ರೀಕ್ಷೇತ್ರಕ್ಕೆ ಭೇಟಿ ಕೊಟ್ಟ ಎಚ್.ಡಿ.ಕುಮಾರಸ್ವಾಮಿ ಅವರನ್ನು ಶ್ರೀಮಠದ ಸಂಪ್ರದಾಯದಂತೆ ಮಂಗಳವಾದ್ಯದೊಂದಿಗೆ ಬರಮಾಡಿಕೊಳ್ಳಲಾಯಿತು. ನಂತರ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಕ್ಷೇತ್ರಪಾಲಕ ಶ್ರೀಕಾಲಭೈರವೇಶ್ವರಸ್ವಾಮಿ ದೇಗುಲದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಕ್ಷೇತ್ರಾಧಿದೇವತೆಗಳ ದರ್ಶನಾಶೀರ್ವಾದ ಪಡೆದುಕೊಂಡರು. ಶ್ರೀಕ್ಷೇತ್ರದ ಮಾಳಮ್ಮದೇವಿ, ಆದಿಶಕ್ತಿ ಸ್ಥಂಬಾಬಿಕ, ಮಹಾಗಣಪತಿ ಸುಬ್ರಹ್ಮಣ್ಯಸ್ವಾಮಿ ಸೇರಿದಂತೆ ಎಲ್ಲಾ ಅಧಿದೇವತೆಗಳಿಗೆ ಪೂಜೆ ಸಲ್ಲಿಸಿದ ಎಚ್ಡಿಕೆ ಅವರು ಭೈರವೈಕ್ಯಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ಮಹಾಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥಸ್ವಾಮೀಜಿ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು. ಕ್ಷೇತ್ರಕ್ಕೆ ಭೇಟಿಕೊಟ್ಟ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಶ್ರೀಮಠದ ಸಂಪ್ರದಾಯದಂತೆ ಶಾಲು ಹೊದಿಸಿ ಹಾರ ಹಾಕಿ ನೆನಪಿನ ಕಾಣಿಕೆ ಕೊಟ್ಟು ಶ್ರೀಗಳು ಆಶೀರ್ವದಿಸಿದರು.

ಭಾನುವಾರದಿಂದ ಮೂರುದಿನಗಳ ಕಾಲ 5 ವರ್ಷದೊಳಗಿನ ಮಕ್ಕಳಿಗೆ ಉಚಿತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯುತ್ತಿರುವ ಹಿನ್ನಲೆಯಲ್ಲಿ ಶ್ರೀಮಠಕ್ಕೆ ಪೋಷಕರು ಕರೆತಂದಿದ್ದ ಚಿಕ್ಕ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಡಾ. ನಿರ್ಮಲಾನಂದನಾಥಶ್ರೀಗಳು ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು.

ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು, ಶ್ರೀಕ್ಷೇತ್ರದ ಡಾ.ಡಿ.ಸಿ.ರಾಮಚಂದ್ರ, ಸಮಾಜ ಸೇವಕ ಜವರನಹಳ್ಳಿ ಗೌರೀಶ್ ಸೇರಿದಂತೆ ಮಠದ ಭಕ್ತರು ಇದ್ದರು.