ಒಕ್ಕಲಿಗ ಮಠಗಳಿಗೆ ಎಚ್‌ಡಿಕೆ ದೌಡು

| Published : Apr 01 2024, 12:50 AM IST

ಸಾರಾಂಶ

ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿಯವರು ಭಾನುವಾರ ಆದಿ ಚುಂಚನಗಿರಿ ಮಹಾಸಂಸ್ಥಾನ ಹಾಗೂ ಸ್ಪಟಿಕಪುರಿ ಮಹಾಸಂಸ್ಥಾನ ಮಠಗಳಿಗೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ನಾಗಮಂಗಲ/ಶಿರಾ: ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿಯವರು ಭಾನುವಾರ ಆದಿ ಚುಂಚನಗಿರಿ ಮಹಾಸಂಸ್ಥಾನ ಹಾಗೂ ಸ್ಪಟಿಕಪುರಿ ಮಹಾಸಂಸ್ಥಾನ ಮಠಗಳಿಗೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ಬೆಳಗ್ಗೆ ಆದಿ ಚುಂಚನಗಿರಿಗೆ ಭೇಟಿ ನೀಡಿದ ಎಚ್ಡಿಕೆಯವರನ್ನು ಮಂಗಳವಾದ್ಯ ಮತ್ತು ಪೂರ್ಣಕುಂಭ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು. ಈ ವೇಳೆ, ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು ಕ್ಷೇತ್ರಪಾಲಕ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು.

ಬಳಿಕ, ತುಮಕೂರು ಜಿಲ್ಲೆ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಮಹಾ ಸ್ವಾಮೀಜಿಗಳನ್ನು ಭೇಟಿಯಾಗಿ, ಆಶೀರ್ವಾದ ಪಡೆದರು.

ದೇವರ ದರ್ಶನದ ಬಳಿಕ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಮಹಾಗದ್ದುಗೆಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ನಂತರ, ಮಠದ ಪೀಠಾಧ್ಯಕ್ಷರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದ ಎಚ್ಡಿಕೆ, ಶ್ರೀಮಠದಲ್ಲಿಯೇ ಬೆಳಗಿನ ಉಪಹಾರ ಸೇವಿಸಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಶಾಲು ಹೊದಿಸಿ, ಏಲಕ್ಕಿ ಹಾರ ಹಾಕಿ, ಹಣ್ಣಿನ ಬುಟ್ಟಿ ಮತ್ತು ನೆನಪಿನ ಕಾಣಿಕೆ ನೀಡಿ ಎಚ್ಡಿಕೆಯನ್ನು ಗೌರವಿಸಲಾಯಿತು.ಶಸ್ತ್ರಚಿಕಿತ್ಸೆ ವೇಳೆ ನಾನು

ಇದ್ದೆ: ಡಾ। ಮಂಜುನಾಥ್‌ರಾಮನಗರ: ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೃದಯ ಶಸ್ತ್ರಚಿಕಿತ್ಸೆ ಮಾಡುವಾಗ ನಾನು ಇದ್ದೆ. ಆಧುನಿಕ ತಂತ್ರಜ್ಞಾನದಲ್ಲಿ ಕಾಲಿನ ರಕ್ತನಾಳದ ಮೂಲಕ ಹೃದಯ ಕವಾಟ ಬದಲಾವಣೆ ಮಾಡಲಾಗಿದೆ. ಸರಿಯಾದ ಮಾಹಿತಿ ಇಲ್ಲದೆ ಯಾರೂ, ಯಾವುದರ ಬಗ್ಗೆಯೂ ಮಾತನಾಡಬಾರದು ಎಂದು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಅವರು ಶಾಸಕ ರಮೇಶ್ ಬಂಡಿಸಿದ್ದೇಗೌಡರಿಗೆ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಕುಮಾರಸ್ವಾಮಿಗೆ ಹೃದಯ ಶಸ್ತ್ರಚಿಕಿತ್ಸೆ ಕುರಿತು ಅನುಮಾನ ವ್ಯಕ್ತಪಡಿಸಿರುವ ಬಂಡಿಸಿದ್ದೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ಹೃದಯ ಶಸ್ತ್ರಚಿಕಿತ್ಸೆ ಬಗ್ಗೆ ತಿಳಿದುಕೊಳ್ಳಲು ಒಟ್ಟು 13 ವರ್ಷ ಓದಬೇಕು. ಇದು ಆಧುನಿಕ ತಂತ್ರಜ್ಞಾನದ ಶಸ್ತ್ರ ಚಿಕಿತ್ಸೆ. ಸಾಮಾನ್ಯ ವೈದ್ಯರಿಗೂ ಹೃದಯ ಶಸ್ತ್ರಚಿಕಿತ್ಸೆ ಬಗ್ಗೆ ಅಷ್ಟು ಮಾಹಿತಿ ಇರಲ್ಲ. ಇನ್ನು ಇದರ ಬಗ್ಗೆ ಸಾಮಾನ್ಯ ಜನಕ್ಕೆ ಏನು ಗೊತ್ತಾಗುತ್ತೆ?. ಯಾವತ್ತೂ ಯಾವುದೇ ಮಾಹಿತಿ ಇಲ್ಲದೇ ಯಾವುದರ ಬಗ್ಗೆಯೂ ಮಾತನಾಡಬಾರದು. ಜ್ಞಾನಿಗಳು ಜ್ಞಾನಿಗಳಾಗಿಯೇ ಇರಬೇಕು, ಇನ್ನೊಂದು ಆಗಬಾರದು ಎಂದು ಟಾಂಗ್ ನೀಡಿದರು.ಕುಮಾರಸ್ವಾಮಿಗೆ 2007ರಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿ ಕವಾಟ ಜೋಡಿಸಲಾಗಿದೆ. 2017ರಲ್ಲಿ ಎರಡನೇ ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದೀಗ ಮೂರನೇ ಬಾರಿ ಆಧುನಿಕ ತಂತ್ರಜ್ಞಾನ ಬಳಸಿ ಕಾಲಿನ ರಕ್ತನಾಳದ ಮೂಲಕ ಕವಾಟ ಬದಲಾಯಿಸಲಾಗಿದೆ. ಆಂಜಿಯೋಗ್ರಾಂ ತಂತ್ರಜ್ಞಾನ ಬಳಸಿ ಮಾಡುವ ಈ ಶಸ್ತ್ರಚಿಕಿತ್ಸೆಯನ್ನು ಟಾವಿ ಎನ್ನಲಾಗುತ್ತದೆ. ನಾನು ಸಹ ಇಂತಹ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದೇನೆ ಎಂದು ಹೇಳಿದರು.ಬೆಂಗಳೂರಿನಲ್ಲಿಯೇ ಅವರಿಗೆ ಶಸ್ತ್ರಚಿಕಿತ್ಸೆ ಮಾಡಬಹುದಾಗಿತ್ತು. ಆದರೆ, ಚುನಾವಣೆ ಸಂದರ್ಭವಾಗಿರುವ ಕಾರಣ ಇಲ್ಲಿ ಅವರಿಗೆ ಒತ್ತಡ ಹೆಚ್ಚಾಗಬಹುದೆಂಬ ಕಾರಣಕ್ಕೆ ಚೆನ್ನೈನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು ಎಂದು ಮಂಜುನಾಥ್ ತಿಳಿಸಿದರು.