2028ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಜಯ ಸಾಧಿಸಿ ಮತ್ತೆ ಕರ್ನಾಟಕದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಜಾತ್ಯತೀತ ಜನತಾ ದಳದ ಜಿಲ್ಲಾಧ್ಯಕ್ಷ ಎಂ.ಜಯಣ್ಣ ಹೇಳಿದರು.

ಚಿತ್ರದುರ್ಗ: 2028ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಜಯ ಸಾಧಿಸಿ ಮತ್ತೆ ಕರ್ನಾಟಕದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಜಾತ್ಯತೀತ ಜನತಾ ದಳದ ಜಿಲ್ಲಾಧ್ಯಕ್ಷ ಎಂ.ಜಯಣ್ಣ ಹೇಳಿದರು.ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿರವರ 66ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಸಾಲ ಮನ್ನಾ ಮಾಡಿ ಮಣ್ಣಿನ ಮಗ ಎನ್ನುವ ಹೆಸರಿಗೆ ತಕ್ಕಂತೆ ಕೃಷಿಗೆ ಹೆಚ್ಚಿನ ಒತ್ತು ಕೊಟ್ಟಿದ್ದರು. ಭಾಗ್ಯಲಕ್ಷ್ಮಿ ಯೋಜನೆ, ಗ್ರಾಮ ವಾಸ್ತವ್ಯ ಇವುಗಳು ಅವರ ಅಧಿಕಾರವಧಿಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು. ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು. 2028ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಗಲಿ ಎಂದು ಶುಭ ಹಾರೈಸಿದರು.

ಎಚ್.ಡಿ.ಕುಮಾರಸ್ವಾಮಿರವರು ರಾಜಕೀಯ ಜೀವನದುದ್ದಕ್ಕೂ ಸರಳತೆ ಮೈಗೂಡಿಸಿಕೊಂಡಿದ್ದಾರೆ. ಎಂದಿಗೂ ಅಧಿಕಾರದ ದರ್ಪ ಚಲಾಯಿಸಿದವರಲ್ಲ. ಅಂತಹ ಸಜ್ಜನ ರಾಜಕಾರಣಿ ಕರ್ನಾಟಕ ರಾಜ್ಯಕ್ಕೆ ಬೇಕಾಗಿರುವುದರಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜನ ಆಶೀರ್ವದಿಸಿ ಮತ್ತೊಮ್ಮೆ ಅಧಿಕಾರ ನೀಡುವಂತೆ ಎಂ.ಜಯಣ್ಣ ಮನವಿ ಮಾಡಿದರು.

ನಂತರ ಉಚ್ಚಂಗಿಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆ ಮಾಡಿಸಿದ ತರವಾಯ ಕಬೀರಾನಂದಾಶ್ರಮದಲ್ಲಿರುವ ವೃದ್ಧರಿಗೆ ಹಾಗೂ ಶಾಲಾ ಮಕ್ಕಳಿಗೆ ಹಣ್ಣುಗಳನ್ನು ವಿತರಿಸಲಾಯಿತು. ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್, ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿನಾಯಕ, ತಾಲೂಕು ಅಧ್ಯಕ್ಷ ತಿಮ್ಮಣ್ಣ, ಯುವ ಘಟಕದ ಅಧ್ಯಕ್ಷ ಓ.ಪ್ರತಾಪ್‍ಜೋಗಿ, ಚಿದಾನಂದ್, ಶಂಕರಮೂರ್ತಿ, ಎಂ.ಎಸ್.ಮಂಜುನಾಥ್, ನಾಗರಾಜು, ಗೀತಮ್ಮ, ಶಿವಪ್ರಸಾದ್‍ಗೌಡ, ಗೀತ, ಸೋಮು ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.