ಸಾರಾಂಶ
-ರಾಜ್ಯದ ಜನರು ಕುಮಾರಸ್ವಾಮಿ ಅವರನ್ನು ನಂಬಲ್ಲ
-ಎಚ್‌ಡಿಕೆ ಸಿಎಂ ಆಗಿದ್ದ ಅವಧಿಯಲ್ಲಿ ಜಿಲ್ಲೆಗೆ ಎಷ್ಟು ವಸತಿ ನೀಡಿದ್ದಾರೆ: ಸಚಿವಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ರಾಜ್ಯದ ಜನರ ಮುಂದೆ ಕುಮಾರಸ್ವಾಮಿ ಎಕ್ಸ್‌ಪೋಸ್ ಆಗಿದ್ದು, ಅವರನ್ನು ಯಾರು ನಂಬುವುದಿಲ್ಲ. ಅವರು ರಾಮನಗರ ಬಿಟ್ಟು ಚನ್ನಪಟ್ಟಣಕ್ಕೆ ಬಂದರು. ಈಗ ಚನ್ನಪಟ್ಟಣ ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ. ಮುಂದೆ ರಾಜ್ಯವನ್ನೇ ಬಿಟ್ಟು ಬೇರೆ ರಾಜ್ಯಕ್ಕೆ ಹೋಗ್ತಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದರು.ನಗರದ ಆದಿಲ್ ಶಾ ಟಿಪ್ಪು ಮೈದಾನದಲ್ಲಿ ಆಯೋಜಿಸಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅವರನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಈ ಕ್ಷೇತ್ರ ಬಿಟ್ಟುಹೋಗುವಾಗ ನಿಮ್ಮನ್ನ ಅವರು ಕೇಳಿದರಾ?. ನಿಮ್ಮ ಅನುಮತಿ ಇಲ್ಲದೇ ಅವರು ಮಂಡ್ಯಕ್ಕೆ ಹೋಗಿದ್ದಾರೆ. ಅವರಿಗೆ ಈ ಕ್ಷೇತ್ರದ ಬಗ್ಗೆ ಕಾಳಜಿ ಇದ್ದಿದ್ದರೆ ಈ ಉಪಚುನಾವಣೆಯೇ ಬರುತ್ತಿರಲಿಲ್ಲ ಎಂದು ಕಿಡಿಕಾರಿದರು.
೨೦೧೮ರಲ್ಲಿ ಕಾಂಗ್ರೆಸ್ ೮೦ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಜೆಡಿಎಸ್ ೩೭ ಸ್ಥಾನ ಮಾತ್ರ ಗಳಿಸಿತ್ತು. ಆದರೂ ನಾವು ಕುಮಾರಸ್ವಾಮಿಗೆ ಸಿಎಂ ಸ್ಥಾನ ನೀಡಿದೆವು. ಅವರು ಸಿಎಂ ಆಗಿದ್ದ ಅವಧಿಯಲ್ಲಿ ಎಷ್ಟು ಸೈಟ್ ನೀಡಿದ್ದಾರೆ. ಜಿಲ್ಲೆಯಿಂದ ಎರಡು ಬಾರಿ ಸಿಎಂ ಆದ ಅವರು ಜಿಲ್ಲೆಗೆ ಎಷ್ಟು ವಸತಿ ನೀಡಿದ್ದಾರೆ ಎಂದು ಪ್ರಶ್ನಿಸಿದರು.ಹಿಂದೆ ೨೦೧೩ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಮನಗರ ಜಿಲ್ಲೆಗೆ ೩೧ ಸಾವಿರ ಮನೆಗಳನ್ನ ಕೊಟ್ಟಿದ್ದರು. ಆದರೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಇಡೀ ಜಿಲ್ಲೆಗೆ ಕೇವಲ ೬೦೦ ಮನೆ ನೀಡಿದ್ದಾರೆ. ಯಾಕೆ ಕುಮಾರಸ್ವಾಮಿಗೆ ಬಡವರು ಕಾಣಲಿಲ್ವಾ.? ಈಗ ಡಿಸಿಎಂ ಡಿಕೆಶಿ ಅವರ ಶ್ರಮದಲ್ಲಿ ಚನ್ನಪಟ್ಟಣಕ್ಕೆ ೫ ಸಾವಿರ ಮನೆ ಕೊಡುತ್ತಿದ್ದೇವೆ. ಕುಮಾರಸ್ವಾಮಿ ರಾಮನಗರ, ಚನ್ನಪಟ್ಟಣಕ್ಕೆ ಏನು ಮಾಡಿದ್ದಾರೆ.? ಕ್ಷೇತ್ರಕ್ಕೆ ಬಂದು ಅದನ್ನ ಹೇಳಲಿ ಎಂದು ಸವಾಲು ಹಾಕಿದರು.
ಚನ್ನಪಟ್ಟಣಕ್ಕೆ ಸ್ಟೇಡಿಯಂ ಬೇಕು ಅಂತ ಮನವಿ ಇದ್ದರೂ ಕುಮಾರಸ್ವಾಮಿ ಮಾಡಿರಲಿಲ್ಲ. ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ೯ಕೋಟಿ ವೆಚ್ಚದಲ್ಲಿ ಸ್ಟೇಡಿಯಂ ಅಭಿವೃದ್ಧಿ ಮಾಡ್ತಿದ್ದಾರೆ. ೪ ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡ ಅಭಿವೃದ್ಧಿಗೆ ಚಾಲನೆ ಕೊಟ್ಟಿದ್ದಾರೆ ಎಂದರು.ಚರ್ಚೆಗೆ ಬರಲು ಆಹ್ವಾನ: ಮಾಜಿ ಸಂಸದ ಡಿ.ಕೆ.ಸುರೇಶ್ ಸೋತರು ಕ್ಷೇತ್ರದ ಬಗ್ಗೆ ಕಾಳಜಿ ಇಟ್ಟುಕೊಂಡಿದ್ದಾರೆ. ಆದರೆ ಕುಮಾರಸ್ವಾಮಿ ಅಧಿಕಾರ ಇದ್ದಾಗಲೂ ಏನೂ ಮಾಡಲಿಲ್ಲ. ಕುಮಾರಸ್ವಾಮಿ ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ ಕ್ಷೇತ್ರಕ್ಕೆ ಎಷ್ಟು ಕೊಡುಗೆ ನೀಡಿದ್ದಾರೆ. ಸುರೇಶ್ ಸೋತ ನಂತರವೂ ಕ್ಷೇತ್ರಕ್ಕೆ ಅನುದಾನ ತರಲು ಎಷ್ಟು ಶ್ರಮಿಸಿದ್ದಾರೆ ಎಂದು ಬೇಕಿದ್ರೆ ಬಹಿರಂಗ ಚರ್ಚೆಗೆ ಕುಮಾರಸ್ವಾಮಿ ಬರಲಿ ಪಂಥಾಹ್ವಾನ ನೀಡಿದರು.
ಮಾಜಿ ಸಂಸದ ಡಿ.ಕೆ.ಸುರೇಶ್ ಮಾಡಿರೊ ಕೆಲಸ ಗಿನ್ನೀಸ್ ರೆಕಾರ್ಡ್‌ನಲ್ಲಿ ದಾಖಲಾಗಬೇಕು. ಒಬ್ಬ ಗ್ರಾಪಂ ಸದಸ್ಯನ ರೀತಿ ಅವರು ಕೆಲಸ ಮಾಡಿದ್ದಾರೆ. ಈ ಭಾಗಕ್ಕೆ ಶಾದಿ ಮಹಲ್ ಬೇಕು ಅನ್ನುವ ಮನವಿ ಕೊಟ್ಟಿದ್ದರು. ಹಾಗಾಗಿ ಅದಕ್ಕೆ ಸ್ಯಾಂಕ್ಷನ್ ಮಾಡಿದ್ದೇನೆ. ಅವರಿಗೆ ಕ್ಷೇತ್ರದ ಕುರಿತು ಸಾಕಷ್ಟು ಕಾಳಜಿ ಇದೆ ಎಂದರು.ನಮ್ಮ ಸರ್ಕಾರ ಇನ್ನೂ ಮೂರುವರೆ ವರ್ಷ ಇರುತ್ತೆ. ಈಗಾಗಲೇ ಐದು ಗ್ಯಾರಂಟಿ ಯೋಜನಗಳ ಜಾರಿ ಮಾಡಿದ್ದೇವೆ. ಮಹಿಳೆಯರು, ಬಡವರಿಗೆ ಇದು ಅನುಕೂಲ ಆಗ್ತಿದೆ. ಆರನೇ ಗ್ಯಾರಂಟಿಯಾಗಿ ವಸತಿ ಯೋಜನೆ ನೀಡುತ್ತಿದ್ದೇವೆ. ಹಾಗಾಗಿ ಜನ ನಮ್ಮ ಪಕ್ಷದ ಮೇಲೆ ನಂಬಿಕೆ ಇಡಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಹಿನ್ನೆಲೆಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಹಳ ನಿರೀಕ್ಷೆ ಇತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ನಮಗೆ ಗೆಲುವು ಸಿಗಲಿಲ್ಲ. ಆಗ ಕೆಲ ಮುಖಂಡರು ಈ ಗ್ಯಾರಂಟಿಯಿಂದ ನಮಗೆ ಲಾಭ ಇಲ್ಲ ಅದನ್ನ ತೆಗೆಯಿರಿ ಅಂದರು. ಆದರೆ ನಮ್ಮ ಸಿಎಂ, ಡಿಸಿಎಂ ಏನೇ ಆದರೂ ಗ್ಯಾರಂಟಿ ಮುಂದುವರೆಸೋಣ, ನಾವು ಗ್ಯಾರಂಟಿ ತಂದಿರೋದು ರಾಜಕೀಯ ಲಾಭಕ್ಕೆ ಅಲ್ಲ. ಎಷ್ಟೇ ಕಷ್ಟ ಆದ್ರೂ ನಾವು ಗ್ಯಾರಂಟಿ ಯೋಜನೆ ಸಮರ್ಪಕವಾಗಿ ನಿಭಾಯಿಸೋಣ ಅಂದರು ಎಂದು ತಿಳಿಸಿದರು.ಜಾತಿ ಹೆಸರಿನಲ್ಲಿ ಬಿಜೆಪಿ ಮತ: ಕಾಂಗ್ರೆಸ್ ಪಕ್ಷದ ಇತಿಹಾಸ ನೋಡಿ. ಚುನಾವಣೆ ಸಂದರ್ಭದಲ್ಲಿ ಜನರ ಬಳಿ ಹೋಗಿ ಚುನಾವಣೆ ಮಾಡ್ತೀವಿ. ಆದರೆ ಬಿಜೆಪಿಯವರು ಹಿಂದೂ ಮುಸ್ಲಿಂ ಅಂತ ಮತ ಕೇಳುತ್ತಾರೆ. ನಮಗೆ ಯಾವುದೇ ಧರ್ಮ ಬೇಧ ಇಲ್ಲ. ಎಲ್ಲರೂ ಒಂದೇ ಎಂಬ ಭಾವನೆಯಲ್ಲಿ ನಾವು ಹೋಗ್ತಿದ್ದೀವಿ ಎಂದರು.
ಸುರೇಶ್ ಅಭ್ಯರ್ಥಿಯಾಗಿಸಲು ಜಮೀರ್ ಮನವಿ
ಚನ್ನಪಟ್ಟಣ ಕ್ಷೇತ್ರ ಸಾಕಷ್ಟು ಬಡವಾಗಿದ್ದು, ಕ್ಷೇತ್ರದ ಹಿತದೃಷ್ಟಿಯಿಂದ ಉಪಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರನ್ನೇ ಕಣಕ್ಕೆ ಇಳಿಸಬೇಕು ಎಂದು ಬಹಿರಂಗ ವೇದಿಕೆಯಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಜಮೀರ್ ಅಹ್ಮದ್ ಖಾನ್ ಮನವಿ ಮಾಡಿದರು.ಚನ್ನಪಟ್ಟಣ ಕ್ಷೇತ್ರ ಸಾಕಷ್ಟು ಬಡವಾಗಿದ್ದು, ತಬ್ಬಲಿಯಾಗಿದೆ. ಈ ಕ್ಷೇತ್ರಕ್ಕೆ ಸಮರ್ಥ ಶಾಸಕರ ಆಯ್ಕೆ ಆಗಬೇಕು. ದಯಮಾಡಿ ಈ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಅವರನ್ನು ಸ್ಪರ್ಧೆಗೆ ಇಳಿಸಿ. ಹೈಕಮಾಂಡ್ ಜತೆ ಮಾತನಾಡಿ ಡಿ.ಕೆ.ಸುರೇಶ್ ಹೆಸರು ಬೆಂಬಲಿಸಿದರು. ಸುರೇಶ್ ಅವರನ್ನೇ ಸ್ಪರ್ಧೆಗೆ ಒಪ್ಪಿಸಿ ಎಂದ ಜಮೀರ್ ಅಹಮ್ಮದ್, ಚನ್ನಪಟ್ಟಣ ಉಪ ಚುನಾವಣೆಗೆ ಡಿ.ಕೆ.ಸುರೇಶ್ ನಿಲ್ಲಿಸಿ ಎಂದು ಡಿಕೆಶಿ ಬಳಿ ಮನವಿ ಮಾಡಿದರು. ಚನ್ನಪಟ್ಟಣದಲ್ಲಿ ಅಭಿವೃದ್ಧಿಯ ದೀಪ ಹಚ್ಚಿದ್ದೇವೆ: ಡಿಕೆಶಿ
-ಆದಿಲ್ ಷಾ ಮೈದಾನದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ-ವಿವಿಧ ಯೋಜನೆಗಳ ಫಲಾನುಭವಿಗಳಿಗೆ ದಾಖಲೆ ಪತ್ರ ವಿತರಣೆಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಚನ್ನಪಟ್ಟಣದಲ್ಲಿ ಅಭಿವೃದ್ಧಿ ದೀಪ ಹಚ್ಚಿದ್ದೇವೆ. ಈ ದೀಪ ನಿಮ್ಮ ದಾರಿ, ಮನೆ, ಬದುಕು ಬೆಳಗಲಿದೆ.ಕೊಟ್ಟ ಮಾತಿನಂತೆ ಚನ್ನಪಟ್ಟಣವನ್ನು ಅಭಿವೃದ್ಧಿ ಪುಟಕ್ಕೆ ಸೇರಿಸಿ ಮುನ್ನುಡಿ ಬರೆಯುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ಪಟ್ಟಣದ ಆದಿಲ್ ಷಾ(ಟಿಪ್ಪು) ಮೈದಾನದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ದಾಖಲೆ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚನ್ನಪಟ್ಟಣವನ್ನು ಚಿನ್ನದಂತ ನಾಡು ಮಾಡಲು ತೀರ್ಮಾನಿಸಿದ್ದೇವೆ. ನಾವು ಕೊಟ್ಟ ಮಾತು ಉಳಿಸಿಕೊಳ್ಳಲು ಬಂದಿದ್ದೇವೆ ಎಂದರು.ಕಳೆದ ಮೂರು ತಿಂಗಳಲ್ಲಿ ಚನ್ನಪಟ್ಟಣ ತಾಲೂಕಿನಲ್ಲಿ 500 ಕೋಟಿ ಮೊತ್ತದ ಯೋಜನೆಗಳ ಗುದ್ದಲಿ ಪೂಜೆ ಮಾಡಲಾಗಿದೆ. ಈ ತಾಲ್ಲೂಕಿನಲ್ಲಿ ಆಗುತ್ತಿರುವ ಬದಲಾವಣೆಯನ್ನು ನೀವು ಕಿವಿಯಲ್ಲಿ ಕೇಳುವುದು ಮಾತ್ರವಲ್ಲ, ಕಣ್ಣಾರೆ ನೋಡುತ್ತಿದ್ದೀರಿ ಎಂದು ತಿಳಿಸಿದರು.ಪ್ರತಿ ವಾರ್ಡಿಗೆ 1 ಕೋಟಿ ವೆಚ್ಚದ ಯೋಜನೆಗಳು:
ಕಳೆದ ಮೂರು ತಿಂಗಳುಗಳಲ್ಲಿ ಈ ಕ್ಷೇತ್ರದಲ್ಲಿ 500 ಕೋಟಿ ವೆಚ್ಚದ ಯೋಜನೆಗಳ ಗುದ್ದಲಿ ಪೂಜೆ ಮಾಡಲಾಗಿದೆ. ವಿಶೇಷ ಅನುದಾನ ತಂದು ಪ್ರತಿ ವಾರ್ಡ್ ನಲ್ಲಿ 1 ಕೋಟಿ ಅನುದಾನದ ಯೋಜನೆಗಳು ನಡೆಯುತ್ತಿದೆ. ಇಂದು 200 ಕೋಟಿ ಅನುದಾನದ ಯೋಜನೆಗಳಿಗೆ ಗುದ್ದಲಿ ಪೂಜೆ ಮಾಡಿದ್ದೇವೆ ಎಂದು ತಿಳಿಸಿದರು.ಕುಮಾರಣ್ಣ ಈ ವಿಚಾರವಾಗಿ ನೀನು ಉತ್ತರ ನೀಡಬೇಕು. ನೀನು ಈ ಕ್ಷೇತ್ರದ ಶಾಸಕನಾಗಿ ಮುಖ್ಯಮಂತ್ರಿ ಆಗಿದ್ದೆ. ನಾವು ಬೆಂಬಲ ನೀಡಿ ನಿಮ್ಮನ್ನು ಮುಖ್ಯಮಂತ್ರಿ ಮಾಡಿದ್ದೆವು. ನಿನಗೆ ಸಹಾಯ ಮಾಡಿದ ಜನರ ಋಣ ತೀರಿಸುವ ಕೆಲಸ ನೀನು ಮಾಡಿಲ್ಲ. ಮತ್ತೆ ಈ ತಾಲೂಕಿನ ಜನರ ಮುಂದೆ ಬಂದು ಮತ ಕೇಳುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಟೀಕಿಸಿದರು.ಆಟದ ಮೈದಾನ, ವಿವಿಧ ಕಟ್ಟಡಗಳ ಶಂಕುಸ್ಥಾಪನೆ ಮಾಡಿದ್ದೇವೆ. ಎಲ್ಲಾ ವರ್ಗದ ಬಡವರಿಗೂ ನಿವೇಶನ ನೀಡಲಾಗುತ್ತಿದೆ. ಕಾಂಗ್ರೆಸ್ ಎಂದರೆ ಬಡವರು, ಕಾರ್ಮಿಕರು, ರೈತರು, ಶ್ರಮಿಕರು ಸೇರಿದಂತೆ ಎಲ್ಲಾ ವರ್ಗದ ಜನರ ಸರ್ಕಾರ. ರಾಮಲಿಂಗಾ ರೆಡ್ಡಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ನಿಮಗೆ ಗ್ಯಾರಂಟಿ ಯೋಜನೆಗಳು ತಲುಪಿವೆ. ಇದನ್ನು ತಪ್ಪಿಸಲು ಬಿಜೆಪಿ ಹಾಗೂ ಜೆಡಿಎಸ್ ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು.ಏನಾದರು ಮಾಡಿ ಕಾಂಗ್ರೆಸ್ ಸರ್ಕಾರ ಬೀಳಿಸಬೇಕು ಅಂತ ಬಿಜೆಪಿ - ಜೆಡಿಎಸ್ ನವರು ಕಾಯುತ್ತಿದ್ದಾರೆ. ಬಿದ್ದ ತಕ್ಷಣ ಒಡೆದು ಹೋಗಲು ಇದು ಮಡಿಕೆ ಅಲ್ಲ. ಚಿನ್ನದ ಚೊಂಬು, ಕಂಚಿನ ಚೊಂಬು. ನಮ್ಮ ಸರ್ಕಾರ ಸುಭದ್ರವಾಗಿ ಇರಲಿದೆ ಎಂದು ಹೇಳಿದರು.ನಾವು ಇಲ್ಲಿ ಯಾರೂ ಶಾಶ್ವತವಲ್ಲ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ನಮ್ಮ ಈ ಎರಡು ಕೈ ಕೊಟ್ಟಿರುವುದು, ಒಂದು ನಮ್ಮನ್ನು ನಾವು ಕಾಪಾಡಿಕೊಳ್ಳಲು ಹಾಗೂ ಮತ್ತೊಂದು ಬೇರೆಯವರನ್ನು ರಕ್ಷಣೆ ಮಾಡಲು. ಬೇರೆಯವರು ಈ ಕೆಲಸ ಮಾಡಬಹುದಾಗಿತ್ತು. ಆದರೆ ಮಾಡಲಿಲ್ಲ ಎಂದು ಶಿವಕುಮಾರ್ ಹೇಳಿದರು. ಕುಮಾರಣ್ಣನ ಆಡಳಿತ ಸ್ವಾರ್ಥಕ್ಕೆ, ನನ್ನ ಆಡಳಿತ ಜನರಿಗಾಗಿ: ಡಿಸಿಎಂ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣಕುಮಾರಣ್ಣನ ಆಡಳಿತ ಸ್ವಾರ್ಥಕ್ಕೆ, ನನ್ನ ಆಡಳಿತ ತಾಲೂಕು ಹಾಗೂ ಜನರಿಗಾಗಿ. ನನ್ನ ಆಡಳಿತವೇ ಬೇರೆ, ಕುಮಾರಣ್ಣನ ಆಡಳಿತವೇ ಬೇರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.ಪಟ್ಟಣದ ಆದಿಲ್ ಷಾ (ಟಿಪ್ಪು) ಮೈದಾನದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ದಾಖಲೆ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಮೂರು ತಿಂಗಳಲ್ಲಿ ಸಚಿವರು, ಅಧಿಕಾರಿಗಳು ನಿಮ್ಮ ಬಳಿ ಬಂದು ನಿಮಗೆ ಏನು ಬೇಕು ಎಂದು ಕೇಳುತ್ತಿದ್ದಾರೆ. ಹಳೆ ಶಾಸಕರು ನಿಮ್ಮನ್ನು ಬಿಟ್ಟು ಹೋಗಿದ್ದಾರೆ. ಅವರಿಗೂ ಚನ್ನಪಟ್ಟಣಕ್ಕೂ ಸಂಬಂಧವಿಲ್ಲ. ನನ್ನ ಮತ್ತು ಚನ್ನಪಟ್ಟಣ ನಡುವಣ ಸಂಬಂಧ ಭಕ್ತ ಹಾಗೂ ಭಗವಂತ ನಡುವಿನ ಸಂಬಂಧ. ಈ ಭಾಗದವರು ನಾಲ್ಕು ಬಾರಿ ನನ್ನನ್ನು ವಿಧಾನಸಭೆಗೆ ಆರಿಸಿದ್ದಾರೆ. ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದರು.ಇನ್ನೂ 150 ಎಕರೆ ಖರೀದಿಗೆ ಸಿದ್ಧ :
ನಾವು ನಿಮ್ಮ ಮನೆ ಬಾಗಿಲಿಗೆ ಬಂದಾಗ ಈ ಜನ 27 ಸಾವಿರ ಅರ್ಜಿ ನೀಡಿದ್ದಾರೆ. ಅದರಲ್ಲಿ 18 ಸಾವಿರ ಅರ್ಜಿಗಳು, ಮನೆ ಹಾಗೂ ನಿವೇಶನ ಬೇಕು ಎಂದು ಹೇಳಿದ್ದಾರೆ. ಈ ತಾಲೂಕಿನಲ್ಲಿ ನಿವೇಶನ ಹಂಚಿಕೆ ಮಾಡಲು 170 ಎಕರೆ ಜಾಗ ಗುರುತಿಸಲಾಗಿದೆ. ಇನ್ನು 150 ಎಕರೆ ಖರೀದಿ ಮಾಡಲು ನಾವು ಸಿದ್ಧವಾಗಿದ್ದೇವೆ. ಮಾರುಕಟ್ಟೆ ದರ ನೀಡಿ ಜಿಲ್ಲಾಧಿಕಾರಿಗಳು ಖರೀದಿ ಮಾಡಲಿದ್ದಾರೆ. ಈ ಮಾತನ್ನು ಕುಮಾರಣ್ಣನಿಗೆ ಹೇಳಲು ಬಯಸುತ್ತೇನೆ ಎಂದು ಕಾಲೆಳೆದರು. ನಮ್ಮ ಕೇಂದ್ರ ಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ನನ್ನ ಕಾಲದಲ್ಲಿ ಇಂತಹ ಕೆಲಸ ಮಾಡಲಿಲ್ಲ, ಈಗ ಹೇಗೆ ಮಾಡುತ್ತೀರಿ ಎಂದು ಕೇಳುತ್ತಿದ್ದಾರಂತೆ. ಕುಮಾರಣ್ಣ ನಿನ್ನ ಗೊಡ್ಡು ಬೆದರಿಕೆಗಳಿಗೆ ನಾನು ಹೆದರುವವನಲ್ಲ. ನನ್ನದು ಕುಟುಂಬಕ್ಕಾಗಿ ರಾಜಕಾರಣವಲ್ಲ, ತಾಲೂಕು ಹಾಗೂ ಜನರ ಪರವಾದ ರಾಜಕಾರಣ ಎಂದು ಶಿವಕುಮಾರ್ ಹರಿಹಾಯ್ದರು. ಅರ್ಜಿ ಕೊಟ್ಟಿರುವ ಎಲ್ಲರಿಗೂ ನೀವೇಶನ ನೀಡುವ ಆಸೆ:
ಅರ್ಜಿ ಹಾಕಿರುವ ಎಲ್ಲರಿಗೂ ನಿವೇಶನ, ಮನೆ ನೀಡಲು ನಮಗೆ ಆಸೆ ಇದೆ. ಸಚಿವ ಜಮೀರ್ ಅಹ್ಮದ್ ಅವರು 5,000 ಮನೆ ಮಂಜೂರು ಮಾಡಿದ್ದಾರೆ. ಈಗ ನಿವೇಶನದ ಬದಲು 500 ಚ.ಅಡಿ ಮನೆ ಕಟ್ಟಿಕೊಡೋಣ ಎಂದು ಹೇಳಿದ್ದಾರೆ. ಜಮೀನ್ ಮತ್ತು ನಾನು ಕೂತು ಸಭೆ ಮಾಡಿ ನಿಮಗೆ ಮನೆ ನೀಡುವ ಕೆಲಸ ಮಾಡುತ್ತೇವೆ. 150 ಎಕರೆ ಜಮೀನನ್ನು ಹುಡುಕಿ ಬಡವರಿಗೆ ಸೈಟ್ ಹಂಚುತ್ತಿದ್ದೇವೆ. ಇನ್ನೂ 150 ಎಕರೆ ಖರೀದಿ ಮಾಡಿ ಜನರಿಗೆ ಸೈಟ್ ಕೊಡುತ್ತೇವೆ ಎಂದು ಹೇಳಿದರು.ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್, ರಹೀಮ್ ಖಾನ್, ಶಾಸಕ ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪ್ರಮೋದ್, ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಜಿಲ್ಲಾ ಪಂಚಾಯತ್ ಸಿಇಓ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು. ಉಪಚುನಾವಣೆಯಲ್ಲಿ ಯಾರೇ ಸ್ಪರ್ಧಿಸಿದರೂ ನಾನೇ ಅಭ್ಯರ್ಥಿ: ಡಿಕೆಶಿ
ಚನ್ನಪಟ್ಟಣ: ಮುಂದಿನ ಉಪಚುನಾವಣೆ ಟಿಕೆಟ್ ವಿಚಾರವಾಗಿ ನಾನು ಈ ವೇದಿಕೆ ಮೇಲೆ ಮಾತನಾಡುವುದಿಲ್ಲ. ಇಲ್ಲಿ ನಾನೇ ಅಭ್ಯರ್ಥಿ. ನಾನು ಅಧ್ಯಕ್ಷನಾಗಿ ಯಾರಿಗೆ ಟಿಕೆಟ್ ನೀಡುತ್ತೇನೋ ಅವರಿಗೆ ಬೆಂಬಲ ನೀಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.ಪಟ್ಟಣದ ಆದಿಲ್ ಷಾ (ಟಿಪ್ಪು) ಮೈದಾನದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ದಾಖಲೆ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೂರು ತಿಂಗಳಲ್ಲಿ ಇಷ್ಟು ಕೆಲಸ ಮಾಡಿರುವ ನಾವು, ಮೂರುವರೆ ವರ್ಷಗಳಲ್ಲಿ ಎಷ್ಟು ಕೆಲಸ ಮಾಡಬಹುದು ಆಲೋಚಿಸಿ. ಚನ್ನಪಟ್ಟಣ ಗೊಂಬೆ ಕಾರ್ಖಾನೆ ಸಮಸ್ಯೆ ಬಗೆಹರಿಸಿದ್ದೇವೆ ಎಂದರು.ನಿಮ್ಮ ರಾಜಕಾರಣದ ಇತಿಹಾಸದಲ್ಲಿ ಯಾವುದಾದರೂ ರಾಜಕಾರಣಿ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಕಷ್ಟ ಕೇಳಿದ್ದಾರಾ? ಇಲ್ಲವಾದರೆ, ಅವರು ಬಂದು ಮತ ಯಾಕೆ ಕೇಳಬೇಕು?. ನಮಗೆ ನಿಮ್ಮ ಮೇಲೆ ನಂಬಿಕೆ, ವಿಶ್ವಾಸವಿದೆ. ನಾವು ಕೊಟ್ಟ ಮಾತು ತಪ್ಪುವುದಿಲ್ಲ. ಗ್ರಾಮೀಣ ಭಾಗದಲ್ಲಿ ₹300 ಕೋಟಿ, ಪಟ್ಟಣ ಭಾಗದಲ್ಲಿ ₹200 ಕೋಟಿ ರೂಪಾಯಿ ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು. ನಾನು ನಿಮ್ಮ ಸೇವಕನಾಗಿ ಬಂದಿದ್ದೇನೆ. ನಿಮ್ಮ ಮೇಲೆ ಅಧಿಕಾರ ಚಲಾಯಿಸಲು ಬಂದಿಲ್ಲ. ನಿಮ್ಮ ಮನೆಗೆ ಅವಕಾಶ ಬಂದಿದೆ, ಯಾಮಾರಬೇಡಿ. ಚನ್ನಪಟ್ಟಣದ ಜನರಿಗೆ ಒಳ್ಳೆಯದಾಗಬೇಕು. ಈ ಜನರ ಋಣ ತೀರಿಸಬೇಕು. ಈ ಕ್ಷೇತ್ರದ ಜನರ ಜತೆಗಿನ ಸಂಬಂಧ ಗಟ್ಟಿ ಮಾಡಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ಸ್ಥಳೀಯ ಕಾರ್ಪೊರೇಟರ್ ಗಳು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಈಗ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಅವರನ್ನು ಕೈ ಬಿಡುವ ಪ್ರಶ್ನೆ ಇಲ್ಲ. ಬಿಸಾಕಿದ ತಕ್ಷಣ ಒಡೆದು ಹೋಗಲು ನಮ್ಮದು ಮಣ್ಣಿನ ಮಡಕೆ ಅಲ್ಲ. ಇದು ಬಲಿಷ್ಟವಾದ ಪಂಚ ಲೋಹದ ಪಾತ್ರೆ. ಈ ಭಾಗದಲ್ಲಿ ಇನ್ನೂ ಅನೇಕ ಜನ ನಮ್ಮ ಪಕ್ಷ ಸೇರಲಿದ್ದಾರೆ. ಇನ್ನೂ ಯಾರೆಲ್ಲಾ ಸೇರುತ್ತಾರೆ ಕಾದುನೋಡಿ.- ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ