ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ತಲೆಮರೆಸಿದ್ದ ನಟೋರಿಯಸ್ ರೌಡಿ ಆಕಾಶಭವನ ಶರಣ್‌ನ್ನು ಕಾಲಿಗೆ ಗುಂಡು ಹಾರಿಸಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ನಗರದ ಜೆಪ್ಪು ಕುಡುಪಾಡಿಯಲ್ಲಿ ಪೊಲೀಸರನ್ನು ಕಂಡು ಆತ ಪರಾರಿಯಾಗುತ್ತಿದ್ದನು. ಆಗ ಪೊಲೀಸರು ಬೆನ್ನಟ್ಟಿ ಬಂಧಿಸಲು ಯತ್ನಿಸಿದಾಗ ಆರೋಪಿ ಶರಣ್ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭ ಸಿಸಿಬಿ ಪಿಎಸ್‌ಐ ಸುದೀಪ್ ಅವರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡಿರುವ ಶರಣ್‌ನನ್ನು ಕಂಕನಾಡಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಕಾಲಿಗೆ ಗುಂಡೇಟು ಹಿನ್ನೆಲೆಯಲ್ಲಿ ರೌಡಿಶೀಟರ್ ಶರಣ್ ಚಿಕಿತ್ಸೆ ಪಡೆಯುತ್ತಿರುವ ಕಂಕನಾಡಿ ಖಾಸಗಿ ಆಸ್ಪತ್ರೆಗೆ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಭೇಟಿ ನೀಡಿದ್ದಾರೆ. ರೌಡಿಶೀಟರ್ ಶರಣ್ ಸ್ಥಿತಿಗತಿ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ಕಾಲಿಗೆ ಗುಂಡು ಬಿದ್ದ ಕಾರಣ ಸದ್ಯ ಶರಣ್ ಚೇತರಿಸಿಕೊಂಡಿದ್ದಾನೆ.ಜ.5ರಂದು ಆತನನ್ನು ಬಂಧಿಸಲು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಅವರ ಮೇಲೆ ಕಾರು ಹಾಯಿಸಿ ಕೊಲೆಗೆ ಯತ್ನಿಸಿದ್ದ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಬಳಿಕ ಆತನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದರು. ರೌಡಿ ಶರಣ್ ವಿರುದ್ಧ 22 ಪ್ರಕರಣ: ಆಕಾಶಭವನ ಶರಣ್ ವಿರುದ್ಧ ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿ, ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆ ಸೇರಿ ಒಟ್ಟು 25ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ. ಈ ಪೈಕಿ 6 ಕೊಲೆ, 2 ಅತ್ಯಾಚಾರ, 2 ಕೊಲೆ ಯತ್ನ, 2 ದರೋಡೆಗೆ ಯತ್ನ, 4 ಹಲ್ಲೆ, 2 ಅತ್ಯಾಚಾರ, 1 ದರೋಡೆ ಮತ್ತು ಎನ್‌ಡಿಪಿಎಸ್ ಕಾಯ್ದೆ, ಕಳವು, ಹಫ್ತಾ ವಸೂಲಿ ಪ್ರಕರಣಗಳು ದಾಖಲಾಗಿವೆ. 2017ರ ಫೆ.8 ರಂದು ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿತ್ತು. 2017ರ ಡಿ.26ರಂದು ಈತ ಜೈಲಿನಿಂದ ಬಿಡುಗಡೆಯಾಗಿದ್ದ. ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಡಾ.ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಈತ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.