ಸಾರಾಂಶ
ಹಿಂದುಳಿದ ವರ್ಗಗಳ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಗಳ ಅನುದಾನವನ್ನು ತಡೆಹಿಡಿಯುವ ಕೆಲಸವನ್ನು ಮಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಗಳ ಅಭಿವೃದ್ಧಿ ನಿಗಮಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ನಗರದ ಗಾಂಧಿ ಚೌಕದಲ್ಲಿ ಪ್ರತಿಭಟಿಸಿದರು.ಈ ವೇಳೆ ಹಿಂದುಳಿದ ವರ್ಗಗಳ ಮೊರ್ಚಾದ ಜಿಲ್ಲಾಧ್ಯಕ್ಷ ಜೋಗಿ ಮಂಜು ಮಾತನಾಡಿ, ಹಿಂದುಳಿದ ವರ್ಗಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಹಾಗೂ ಹಿಂದುಳಿದ ವರ್ಗಗಳ ಮಹಾನ್ ನಾಯಕ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರವು ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.
ಬಿಜೆಪಿ ವಕ್ತಾರ ಎಂ.ಜಿ. ಮಹೇಶ್ ಮಾತನಾಡಿ, ಹಿಂದುಳಿದ ವರ್ಗಗಳ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಗಳ ಅನುದಾನವನ್ನು ತಡೆಹಿಡಿಯುವ ಕೆಲಸವನ್ನು ಮಾಡುತ್ತಿದ್ದಾರೆ. ತಮ್ಮ ರಾಜಕೀಯ ಸ್ವಾರ್ಥಕ್ಕೆ ಗ್ಯಾರಂಟಿ ಯೋಜನಗಳನ್ನು ಜಾರಿಗೆ ತಂದು, ಕರ್ನಾಟಕವನ್ನು ದಿವಾಳಿ ಮಾಡಿದ್ದಾರೆ ಎಂದು ಆರೋಪಿಸಿದರು.ವಾಲ್ಮೀಕಿ ನಿಗಮದ ಹಣವನ್ನು ಲೂಟಿ ಮಾಡಿ ಪಕ್ಕದ ರಾಜ್ಯವಾದ ತೆಲಂಗಾಣದ ಚುನಾವಣೆಗೆ ಬಳಿಸಿಕೊಂಡಿದ್ದಾರೆ. ಲೂಟಿ ಮಾಡಿದ ಹಣದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಹಿಂದುಳಿದವರ ವರ್ಗಕ್ಕೆ ಮೀಸಲಾಗಿದ್ದ ಹಣವನ್ನು ವಾಪಸ್ ತೆಗೆದುಕೊಂಡಿದ್ದಾರೆ. ಎಸ್ಸಿ, ಎಸ್ಟಿ ಹಣವನ್ನು ತೆಗೆದುಕೊಂಡು ಗ್ಯಾರಂಟಿಗೆ ಬಳಕೆ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಮುಖಂಡರಾದ ಪರಶುರಾಮಪ್ಪ, ಮಂಜುನಾಥ್, ದಿನೇಶ್ ಗೌಡ, ಶಾಲಿನಿ, ಸವಿತಾ ಗೌಡ, ಕಾವೇರಿ, ರಘು ಮೊದಲಾದವರು ಇದ್ದರು.