ಸಿಎಂ ಸಿದ್ದರಾಮಯ್ಯರಿಂದ ಒಕ್ಕಲಿಗರಿಗೆ ರಕ್ಷಣೆ ಇಲ್ಲ ಎಂದು ಡಿಕೆಶಿ ಒಪ್ಪಿದ್ದಾರೆ: ಎಚ್ಡಿಕೆ ವಾಗ್ದಾಳಿ

| Published : Apr 18 2024, 02:28 AM IST / Updated: Apr 18 2024, 12:04 PM IST

HDK
ಸಿಎಂ ಸಿದ್ದರಾಮಯ್ಯರಿಂದ ಒಕ್ಕಲಿಗರಿಗೆ ರಕ್ಷಣೆ ಇಲ್ಲ ಎಂದು ಡಿಕೆಶಿ ಒಪ್ಪಿದ್ದಾರೆ: ಎಚ್ಡಿಕೆ ವಾಗ್ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದರಾಮಯ್ಯ ಯಾವತ್ತೂ ಬೇರೆ ಸಮಾಜದ ನಾಯಕರ ಏಳಿಗೆ ಸಹಿಸಿಲ್ಲ. ಸಿಎಂ ಆಗಲು ತಮಗೆ ಅಡ್ಡಿಯಾಗುತ್ತಾರೆ ಅಂತಾ ಪರಮೇಶ್ವರ್ ಅವರನ್ನು ಸೋಲಿಸಿದ್ದು ಯಾರು? ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ಖಾಲಿ ಮಾಡದಿದ್ದರೆ ಬಿಜೆಪಿಗೆ ಹೋಗುತ್ತೇನೆ ಅಂತ ಕಾಂಗ್ರೆಸ್ ಹೈಕಮಾಂಡ್ ಗೆ ಸಿದ್ದರಾಮಯ್ಯ ಬೆದರಿಸಿದ್ದರು

 ಮೈಸೂರು: ಮೈಸೂರು ಜಿಲ್ಲೆಯಲ್ಲಿ ಒಕ್ಕಲಿಗರಿಗೆ ರಕ್ಷಣೆ ಇಲ್ಲ ಅಂತ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಒಕ್ಕಲಿಗರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಕ್ಷಣೆ ಸಿಕ್ಕಿಲ್ಲ ಎಂಬುದು ಅವರ ಮಾತಿನ ಅರ್ಥ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ಮೈಸೂರು ಜಿಲ್ಲೆಯಲ್ಲಿ ಒಕ್ಕಲಿಗರಿಗೆ ರಕ್ಷಣೆ ಇಲ್ಲ ಅಂತಾ ಶಿವಕುಮಾರ್ ಹೇಳಿದ್ದಾರೆ. ಒಕ್ಕಲಿಗರಿಗೆ ಸಿದ್ದರಾಮಯ್ಯ ಅವರಿಂದ ರಕ್ಷಣೆ ಸಿಕ್ಕಿಲ್ಲ ಅವರಿಂದ ಅನ್ಯಾಯವಾಗಿದೆ ಅಂತಾ ಒಪ್ಪಿಕೊಂಡಿದ್ದಾರೆ. ಒಕ್ಕಲಿಗರಿಗೆ ಅವರ ಪಕ್ಷದ ಸಿಎಂಯಿಂದಲೇ ಅನ್ಯಾಯವಾಗಿದೆ ಅನ್ನೋದು ಶಿವಕುಮಾರ್ ಮಾತಿನ ಅರ್ಥ ಎಂದು ವ್ಯಾಖ್ಯಾನಿಸಿದರು.

ಸಿದ್ದರಾಮಯ್ಯ ಯಾವತ್ತೂ ಬೇರೆ ಸಮಾಜದ ನಾಯಕರ ಏಳಿಗೆ ಸಹಿಸಿಲ್ಲ. ಸಿಎಂ ಆಗಲು ತಮಗೆ ಅಡ್ಡಿಯಾಗುತ್ತಾರೆ ಅಂತಾ ಪರಮೇಶ್ವರ್ ಅವರನ್ನು ಸೋಲಿಸಿದ್ದು ಯಾರು? ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ಖಾಲಿ ಮಾಡದಿದ್ದರೆ ಬಿಜೆಪಿಗೆ ಹೋಗುತ್ತೇನೆ ಅಂತ ಕಾಂಗ್ರೆಸ್ ಹೈಕಮಾಂಡ್ ಗೆ ಸಿದ್ದರಾಮಯ್ಯ ಬೆದರಿಸಿದ್ದರು ಎಂದು ಅವರು ತಿಳಿಸಿದರು.

ಈಗ ಕಾಂಗ್ರೆಸ್‌ಗೆ ನಾನೇ ಟಾರ್ಗೆಟ್ ಆಗಿದ್ದೇನೆ. ರಾಹುಲ್ ಗಾಂಧಿ ಅವರ ಮುಕ್ಕಾಲು ಗಂಟೆ ಭಾಷಣದಿಂದ ಯಾವ ಪರಿವರ್ತನೆಯೂ ಆಗಲ್ಲ. ನನ್ನ ಸೋಲು ಗೆಲುವು ಶಿವಕುಮಾರ್ ಕೈಲಿ ಇದಿಯಾ? ಹಣದ ದುರಹಂಕಾರ, ದರ್ಪದಿಂದ ನಾನು ಸೋಲ್ತಿನಿ ಅಂತಾ ಹೇಳ್ತಿದ್ದಾರೆ. ಹಣದಿಂದ ಮಂಡ್ಯದ ಜನರನ್ನು ಶಿವಕುಮಾರ್ ಕೊಂಡು ಕೊಳ್ಳಲು ಆಗಲ್ಲ ಎಂದರು.

ಈ ಚುನಾವಣೆಯಲ್ಲಿ 85 ರಿಂದ 90 ರಷ್ಟು ಒಕ್ಕಲಿಗರರು ಮೈತ್ರಿ ಪರ ಇದ್ದಾರೆ. ಇದು ಅವರಿಗೆ ಭಯವಾಗಿದೆ. ನಾನು ಏಕೆ ಸ್ವಾಮೀಜಿಯವರ ಫೋನ್ ಟ್ಯಾಪ್ ಮಾಡಲಿ? ಅವರ ಮೇಲೆ ಅನುಮಾನ ಇದ್ದಿದ್ದರೆ ಅವರ ಜೊತೆ ಯಾಕೆ ನಾನು ಅಮೆರಿಕಾಕ್ಕೆ ಹೋಗುತ್ತಿದ್ದೆ. ಯಾರೂ ನನಗೆ ಸರ್ಕಾರ ಬೀಳುತ್ತೆ ಅಂತಾ ಹೇಳಿರಲಿಲ್ಲ. ನೀವು ಅರಾಮಾಗಿ ಹೋಗಿ ಬನ್ನಿ ಅಂತಾ ಹೇಳಿ ಕಳುಹಿಸಿದ್ದರು. ನಾನು ಯಾರ ಫೋನ್ ಕೂಡ ಟ್ಯಾಪ್ ಮಾಡಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮೈತ್ರಿ ಸರ್ಕಾರ ಶುರುವಾದ 15 ದಿನಕ್ಕೆ ರಮೇಶ್ ಜಾರಕಿಹೊಳಿ, ಶಿವಕುಮಾರ್ ನಡುವೆ ಯಾರಿಗೋಸ್ಕರ ಕಲಹ ಆರಂಭವಾಯ್ತು ಹೇಳಲಿ? ಸರ್ಕಾರ ರಚನೆಯಾದ ಆರಂಭದಲ್ಲೆ ಅವರಿಬ್ಬರ ನಡುವೆ ಕಲಹ ಯಾಕೆ ಆಯ್ತು? ಎಂದು ಅವರು ಪ್ರಶ್ನಿಸಿದರು.

ನನ್ನ ಮೇಲೆ 150 ಕೋಟಿ ರೂ. ಲಂಚದ ಆರೋಪ ಮಾಡಿದ ಜನಾರ್ಧನ ರೆಡ್ಡಿ ಬಗ್ಗೆಯೆ ತಲೆಕೆಡಿಸಿಕೊಳ್ಳಲಿಲ್ಲ. ಬೇರೆಯವರ ಫೋನ್ ಗಳನ್ನು ನಾನು ಯಾಕೆ ಟ್ಯಾಪ್ ಮಾಡಲಿ. 1996 ರಲ್ಲಿ ಚುನಾವಣೆ ಗೆ ನಿಂತಾಗ ಸಿಂಧ್ಯಾ ಅವರಿಗೆ ನಾನು ಕಪಾಳ ಮೋಕ್ಷ ಮಾಡಿದೆ ಅಂತಾ ಸುಳ್ಳು ಸುದ್ದಿ ಹಬ್ಬಿಸಿದ್ದರು. ಈ ಥರ ರಾಜಕಾರಣ ಶಿವಕುಮಾರ್ ಗೆ ರಕ್ತಗತವಾಗಿ ಬಂದಿದೆ. ಸುಳ್ಳು ಹೇಳಿಕೊಂಡೆ ರಾಜಕಾರಣ ಮಾಡಿದ್ದಾರೆ ಎಂದು ಅವರು ತಿರುಗೇಟು ನೀಡಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬದಲಾವಣೆ ನೋಡಿದ ಮೇಲೆ ಡಿ.ಕೆ. ಶಿವಕುಮಾರ್ ಭಾಷೆಯಲ್ಲಿ ಬದಲಾವಣೆ ಆಗುತ್ತಿದೆ.ನಾನು ಒಳ್ಳೆಯ ಸ್ನೇಹಿತ ಅಂತಾ ಈಗ ಶಿವಕುಮಾರ್ ಹೇಳಿದ್ದಾರೆ. ಅವರಿಗೆ ಧನ್ಯವಾದ ಎಂದರು.

ಸ್ವಲ್ಪ ದಿನ ಇವೆಲ್ಲಾ ನಿಂತು ಹೋಗುತ್ತೆ. ಚುನಾವಣೆ ಮುಗಿದ ಮೇಲೆ ತಣ್ಣಗಾಗುತ್ತದೆ ಎಂದರು.