ಸಾರಾಂಶ
ಶಿಗ್ಗಾಂವಿ: ಬದುಕಿನಲ್ಲಿ ಪಾಠ ಕಲಿಸಿದ ಬಡತನ ಹಾಗೂ ಮಠಗಳ ಸಂಸ್ಕಾರದ ಪರಿಣಾಮ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯವಾಯಿತು. ಬಾಲ್ಯದ ದಿನಗಳಲ್ಲಿ ದನ ಮೇಯಿಸಿದ ಹುಲ್ಲುಗಾವಲು ಪ್ರದೇಶದಲ್ಲಿ ಕಮಾಂಡೆಂಟ್ ಆಗಿ ಅಧಿಕಾರ ಸ್ವೀಕರಿಸಿರುವುದು ಬದುಕಿನ ಧನ್ಯತೆಯ ಮತ್ತೊಂದು ಕ್ಷಣ ಎಂದು ಗಂಗಿಭಾವಿಯ ಕೆ.ಎಸ್.ಆರ್.ಪಿ. ೧೦ನೇ ಪಡೆಯ ಕಮಾಂಡೆಂಟ್ ಎನ್.ಬಿ. ಮೆಳ್ಳೆಗಟ್ಟಿ ಹೇಳಿದರು.ಪಟ್ಟಣದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಪದವಿ ಕಾಲೇಜು ಅಧ್ಯಯನ ಮಾಡುವಾಗ ಸಂಕಷ್ಟದ ದಿನಗಳು ನನ್ನ ಪಾಲಿಗಿದ್ದವು. ಆಗ ಬೆರಳೆಣಿಕೆಯ ಸಂಖ್ಯೆಯಲ್ಲಿ ಸಹಪಾಠಿಗಳಿದ್ದರು. ಉಪನ್ಯಾಸಕರ ಮಾರ್ಗದರ್ಶನ ಹಾಗೂ ಬದುಕು ಕಟ್ಟಿಕೊಳ್ಳುವ ಛಲ ಅಧ್ಯಯನಶೀಲವಾಗಲು ಕಾರಣವಾಯಿತು. ನಾನು ಅಧ್ಯಯನ ಮಾಡಿದ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಸನ್ಮಾನ ಸ್ವೀಕರಿಸಿರುವುದು ನನ್ನ ಶ್ರಮ ಹಾಗೂ ಸಾಧನೆಗೆ ಸಂದ ಗೌರವ ಎಂದರು.ಕಾಲೇಜಿನ ಶೈಕ್ಷಣಿಕ ಕಾರ್ಯದರ್ಶಿ ಪ್ರೊ.ಪಿ.ಸಿ. ಹಿರೇಮಠ ಮಾತನಾಡಿ, ೧೯೯೦ರ ದಶಕದಲ್ಲಿ ಮೂಲ ಸೌಕರ್ಯಗಳ ಕೊರತೆಯ ಮಧ್ಯೆಯೂ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಸಾಧನೆಯತ್ತ ಸಾಗಿದಾಗ ಗುರುವಿಗೆ ಅದಕ್ಕಿಂತ ಸಂಭ್ರಮ ಮತ್ತೊಂದಿಲ್ಲ. ಕಮಾಂಡೆಂಟ್ ಎನ್.ಬಿ. ಮೆಳ್ಳೆಗಟ್ಟಿ ಶಿಸ್ತಿನ ಬದುಕು ರೂಪಿಸಿಕೊಂಡ ಹಿನ್ನೆಲೆಯಲ್ಲಿ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯವಾಗಿದೆ. ನಮ್ಮ ಕಾಲೇಜಿಗೆ ಇದೊಂದು ಅಭಿಮಾನದ ಸಂಗತಿ ಎಂದರು. ಪ್ರಾಚಾರ್ಯ ಡಾ. ಬಾಲಚಂದ್ರ ತೊಂಡಿಹಾಳ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಿರುವುದು ನಮಗೆ ಅಭಿಮಾನ ಮೂಡಿಸುತ್ತದೆ ಎಂದರು.ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕರಡಿ ಮಾತನಾಡಿ, ಪ್ರಾಥಮಿಕ ಶಾಲೆಯಿಂದ ಪಿಯು ಶಿಕ್ಷಣದವರೆಗೆ ಸಾಮಾನ್ಯ ವಿದ್ಯಾರ್ಥಿಯಂತಿದ್ದ ಎನ್.ಬಿ. ಮೆಳ್ಳೆಗಟ್ಟಿ ಅವರು ಪದವಿ ದಿನಗಳಿಂದ ತಮ್ಮ ಬದುಕನ್ನೇ ಬದಲಾಯಿಸಿಕೊಂಡರು. ಸತತ ಪ್ರಯತ್ನ, ಓದಬೇಕೆಂಬ ತುಡಿತ ಹಾಗೂ ಶಿಸ್ತು ಅವರನ್ನು ಉನ್ನತಿಯತ್ತ ಸಾಗಲು ಕಾರಣವಾಯಿತು ಎಂದರು. ಹಳೆಯ ವಿದ್ಯಾರ್ಥಿಗಳ ಸಂಘದ ನಾಗರಾಜ ಬ್ರಹ್ಮಾವರ, ಪರಿಮಳಾ ಜೈನ್, ಎಸ್.ವಿ. ಕುಲಕರ್ಣಿ, ಧೀರೇಂದ್ರ ಕುಂದಾಪುರ, ಲಿಂಗರಾಜ ಕುನ್ನೂರ, ಗುರು ಅಂಗಡಿ, ಹನುಮಂತಪ್ಪ ಬೆಂಗೇರಿ, ಜಿಶಾನಖಾನ್ ಪಠಾಣ, ರಾಜು ಕೆಂಭಾವಿ, ಸುರೇಶ ಯಲಿಗಾರ ಹಾಗೂ ಉಪನ್ಯಾಸಕ ವಿನಯ್ ಎಚ್.ಕೆ ಉಪಸ್ಥಿತರಿದ್ದರು.ಗೂಳಪ್ಪ ಅರಳಿಕಟ್ಟಿ ನಿರ್ವಹಿಸಿದರು.