ಸಾರಾಂಶ
ಎಲ್ಲಿ ಗೋವುಗಳು ಸುಖವಾಗಿರುತ್ತವೆಯೋ ಅಲ್ಲಿ ಸಕಲ ಸಂಪತ್ತು ಹರಿದು ಬರುತ್ತದೆ. ಮಾನವ ಹಾಗೂ ಗೋವಿನ ನಡುವೆ ಇರುವ ಚಿಕ್ಕ ಪರದೆ ಸರಿಸುವ ಕಾರ್ಯವಾಗಬೇಕಿದೆ.
ಕುಮಟಾ:
ಎಲ್ಲಿ ಗೋವುಗಳು ಸುಖವಾಗಿರುತ್ತವೆಯೋ ಅಲ್ಲಿ ಸಕಲ ಸಂಪತ್ತು ಹರಿದು ಬರುತ್ತದೆ. ಮಾನವ ಹಾಗೂ ಗೋವಿನ ನಡುವೆ ಇರುವ ಚಿಕ್ಕ ಪರದೆ ಸರಿಸುವ ಕಾರ್ಯವಾಗಬೇಕಿದೆ ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಶ್ರೀ ನುಡಿದರು. ಹೊಸಾಡದ ಅಮೃತಧಾರಾ ಗೋ ಶಾಲೆಯಲ್ಲಿ ನಡೆದ ಆಲೆಮನೆ ಹಬ್ಬ ಹಾಗೂ ಗೋ ಸಂಧ್ಯಾ ಕಾರ್ಯಕ್ರಮ ಉದ್ಘಾಟಿಸಿ, ಡಾ. ರವಿ.ಎನ್. ವಿರಚಿತ ಗವ್ಯಾಮೃತ ಪುಸ್ತಕ ಲೋಕಾರ್ಪಣೆಗೊಳಿಸಿ ಆಶೀರ್ವದಿಸಿದರು.ಹಿಂದಿನ ಕಾಲದಲ್ಲಿ ಗೋವು ಎಲ್ಲರ ಜೀವನದಲ್ಲಿತ್ತು. ಇಂದು ಇಲ್ಲ. ಗೋವಿಗಾಗಿ ಕಾರ್ಯ ಮಾಡುವವನಿಗೆ ಎಂದಿಗೂ ಸೋಲಿಲ್ಲ. ಗೋಶಾಲೆ ಕಷ್ಟದಲ್ಲಿದೆ ಎಂದು ಸಹಾಯ ಮಾಡಬೇಕಿಲ್ಲ. ನಿಮ್ಮ ಉದ್ಧಾರಕ್ಕೆ ಕಾರಣವಾಗುತ್ತದೆಂದು ಗೋಶಾಲೆಗೆ ಸಹಾಯ ಮಾಡಿ, ಗೋಸೇವೆ ಮಾಡಿ ಎಂದರು.ಕೃತಿಕಾರ ಡಾ. ರವಿ ಎನ್. ಮಾತನಾಡಿ, ಆಯುರ್ವೇದವು ಪ್ರಕೃತಿಮಾತೆಯ ಕೊಡುಗೆಯಾಗಿದೆ. ಭಾರತೀಯ ಗೋವಂಶದ ಪಂಚಗವ್ಯ ಆಯುರ್ವೇದ ಶಾಸ್ತ್ರದ ಅವಿಭಾಜ್ಯ ಅಂಗ. ಭಾರತೀಯ ಗೋವಂಶದ ಮಹತ್ವ, ಪಂಚಗವ್ಯದ ವಿಶೇಷತೆಗಳನ್ನು ಗವ್ಯಾಮೃತ ಪುಸ್ತಕ ಒಳಗೊಂಡಿದೆ ಎಂದು ತಿಳಿಸಿದರು.ಅಮೃತಧಾರಾ ಗೋ ಶಾಲೆಯ ಗೌರವಾಧ್ಯಕ್ಷೆ ಭಾರತೀ ಪಾಟೀಲ ಸ್ವಾಗತಿಸಿದರು. ಅಧ್ಯಕ್ಷ ಮುರಳೀಧರ ಪ್ರಭು ಪ್ರಾಸ್ತಾವಿಕ ಮಾತುಗಳಲ್ಲಿ ಗೋಶಾಲೆಯ ಕುರಿತು ವಿವರಿಸಿದರು. ಗೋಶಾಲೆಯ ಪದಾಧಿಕಾರಿಗಳಾದ ಅರುಣ ಹೆಗಡೆ, ಸುಬ್ರಾಯ ಭಟ್ಟ, ಮಂಜುನಾಥ ಭಟ್ಟ, ಆರ್.ಜಿ. ಭಟ್ಟ ಇದ್ದರು. ಗಣೇಶ ಜೋಶಿ ನಿರೂಪಿಸಿದರು. ಶಾಲಾ ಮಕ್ಕಳ ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮ ರಂಜಿಸಿತು. ಆಲೆಮನೆ ಹಬ್ಬದಲ್ಲಿ ತಾಜಾ ಕಬ್ಬಿನ ಹಾಲು, ಬೆಲ್ಲ, ತೊಡದೇವು, ಬಾಳೆದಿಂಡು, ಕಬ್ಬಿನ ಹಾಲಿನ ದೋಸೆ ಇನ್ನಿತರ ತಿಂಡಿ ತಿನಿಸುಗಳನ್ನು ಜನರು ಮುಗಿಬಿದ್ದು ಆಸ್ವಾದಿಸಿದರು.