ಗುರು ಎಂದರೆ ಅಂಧಕಾರವನ್ನು ಹೋಗಲಾಡಿಸುವವನು, ಜ್ಞಾನದ ಬೆಳಕನ್ನು ಚೆಲ್ಲುವವನು ಎಂದರ್ಥ. ಹಾಗೆಯೇ ಎಲ್ಲೋ ಇರುವ ಸತ್ಯವನ್ನು ಹೊರ ತೆಗೆಯುವುದೇ ಸಂಶೋಧನೆ. ಈಗಾಗಲೇ ಹಲವಾರು ಜ್ಞಾನಿಗಳು ವಿಜ್ಞಾನಿಗಳು ಶೋಧನೆ ಮಾಡಿರುವ ವಿಷಯದ ಕುರಿತು ಅಧ್ಯಯನ ಮಾಡುವುದೇ ಸಂಶೋಧನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಅಧ್ಯಾಪನ ಮತ್ತು ಅಧ್ಯಯನ ಸಂಶೋಧನೆಗೆ ಬಹಳ ಮುಖ್ಯ. ಸಾಮಾಜಿಕ ವಿಜ್ಞಾನದ ಸಂಶೋಧನೆಗೂ ಕನ್ನಡ ಸಾಹಿತ್ಯದ ಸಂಶೋಧನೆಗೆ ಬಹಳ ವ್ಯತ್ಯಾಸವಿದೆ ಎಂದು ಮಂಡ್ಯ ವಿಶ್ವವಿದ್ಯಾಲಯ ಉಪ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಹೇಳಿದರು.

ಸೋಮವಾರ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ ) ಸ್ನಾತಕ, ಸ್ನಾತಕೋತ್ತರ ಕನ್ನಡ ವಿಭಾಗ ಮತ್ತು ಸಂಶೋಧನಾ ಕೇಂದ್ರ, ರೂಸಾ ೨.೦ ಯೋಜನೆಯಡಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಸಂಶೋಧನೆಯ ಹೊಸ ಸಾಧ್ಯತೆಗಳು ಮತ್ತು ಸವಾಲುಗಳ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಗುರು ಎಂದರೆ ಅಂಧಕಾರವನ್ನು ಹೋಗಲಾಡಿಸುವವನು, ಜ್ಞಾನದ ಬೆಳಕನ್ನು ಚೆಲ್ಲುವವನು ಎಂದರ್ಥ. ಹಾಗೆಯೇ ಎಲ್ಲೋ ಇರುವ ಸತ್ಯವನ್ನು ಹೊರ ತೆಗೆಯುವುದೇ ಸಂಶೋಧನೆ. ಈಗಾಗಲೇ ಹಲವಾರು ಜ್ಞಾನಿಗಳು ವಿಜ್ಞಾನಿಗಳು ಶೋಧನೆ ಮಾಡಿರುವ ವಿಷಯದ ಕುರಿತು ಅಧ್ಯಯನ ಮಾಡುವುದೇ ಸಂಶೋಧನೆ. ಅಸ್ಥಿತ್ವದಲ್ಲಿರುವ ಜ್ಞಾನದ ಹೊಸತನವನ್ನು ಹುಡುಕುವುದು. ಸಂಶೋಧನೆಯಲ್ಲಿ ಪ್ರಶ್ನೆಗಳಿಲ್ಲದೆ ಉತ್ತರ ಹುಡುಕುವುದು ಸಾಧ್ಯವಿಲ್ಲ. ಕನ್ನಡ ಸಾಹಿತ್ಯವನ್ನು ಅವಲೋಕಿಸಿದಾಗ ಮಾತ್ರ ಯಾವ ವಿಷಯದ ಮೇಲೆ ಸಂಶೋಧನೆ ಮಾಡಬಹುದು ಎಂದು ತಿಳಿಯುತ್ತದೆ ಎಂದರು.

ಯಾವುದೇ ವಿಷಯವಾಗಲಿ ವಿಷಯವನ್ನು ಅವಲೋಕಿಸದೆ ಸೂಕ್ತ ಸಂಶೋಧನಾ ವಿಷಯ ದೊರೆಯುವುದಿಲ್ಲ. ಕನ್ನಡ ಸಾಹಿತ್ಯ ಸಂಶೋಧನೆ ಮಾಡುವಲ್ಲಿ ಸಾಹಿತಿಗಳ ಜವಾಬ್ದಾರಿ ದೊಡ್ಡದಿದೆ. ಮಂಡ್ಯ ವಿಶ್ವವಿದ್ಯಾಲಯದಲ್ಲಿ ಹೆಚ್ಚು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸುವ ಕೆಲಸವಾಗಬೇಕಿದೆ. ಈಗಾಗಲೇ ೫ ಸಂಶೋಧನಾ ಕೇಂದ್ರಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. ಜಿಲ್ಲೆಯ ವಿದ್ಯಾರ್ಥಿಗಳು ಬೆರೇಲ್ಲೋ ಹೋಗಿ ಸಂಶೋಧನೆ ಮಾಡುವ ಬದಲು ಇಲ್ಲಿಯೇ ಸಂಶೋಧನೆ ಮಾಡಬೇಕು ಎಂಬ ಉದ್ದೇಶದಿಂದ ಇಷ್ಟೆಲ್ಲಾ ಮಾಡಲಾಗುತ್ತಿದೆ ಎಂದರು.

ಸಂಶೋಧನೆ ಯಾವಾಗಲೂ ಸಕಾರಾತ್ಮಕವಾಗಿರಬೇಕು. ಸಮಾಜಕ್ಕೆ ಸಂಶೋಧಕರ ಅಗತ್ಯವಿದೆ. ನೀವು ಮಾಡುವ ಸಂಶೋಧನೆ ಯಾವಾಗಲೂ ಗುಣಮಟ್ಟದಿಂದ ಕೂಡಿರುವಂತೆ ಆಶಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಗುರುರಾಜ್ ಪ್ರಭು ಮಾತನಾಡಿ, ಸಂಶೋಧಕರಿಗೂ ಹಾಗೂ ಅಧ್ಯಾಪಕರಿಗೆ ಇಂತಹ ಕಾರ್ಯಕ್ರಮಗಳು ಅತಿ ಮುಖ್ಯ. ಸಂಶೋಧನೆ ಮನುಷ್ಯ ಮತ್ತು ವಸ್ತು ವಿಷಯಗಳ ನಡುವಿನ ನಿರಂತರ ಪ್ರಕ್ರಿಯೆ. ಸಂಶೋಧನೆ ಪ್ರತಿ ತಲೆಮಾರಿಗೂ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ವಿ.ಶಿವಕೀರ್ತಿ, ರೂಸಾ ಸಂಯೋಜಕ ಪ್ರೊ.ಕೆ.ಎಂ.ಮಂಗಳಮ್ಮ ಸೇರಿದಂತೆ ಪ್ರೊ.ಕೆ.ವಿ.ಜ್ಯೋತಿ, ಕೆ.ಪಿ.ರವಿಕಿರಣ್, ವರದರಾಜ ಸೇರಿದಂತೆ ಇತರರಿದ್ದರು.