ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ10 ಕೋಟಿಯ ಪಪಂ ಪ್ರಾಜೆಕ್ಟ್ ಬಗ್ಗೆ ನನ್ನ ಗಮನಕ್ಕೆ ಏಕೆ ತಂದಿಲ್ಲ. ಟೌನ್‌ನಲ್ಲಿ ಏನೇ ಸಮಸ್ಯೆ ಇದ್ರು ನನ್ನ ಗಮನಕ್ಕೆ ಎಂದಾದರೂ ತಂದಿದೀರಾ. ಪಪಂಯನ್ನು ಪುರಸಭೆಯನ್ನಾಗಿ ಮಾಡಿರುವ ಪ್ರಸ್ತಾವನೆ ಯಾವ ಹಂತದಲ್ಲಿದೆ ನಿಮಗೇ ಗೊತ್ತಾ. ಅಭಿವೃದ್ಧಿಯ ವಿಚಾರದಲ್ಲಿ ನಿರ್ಲಕ್ಷ ಮಾಡಿದ್ರೇ ನಿನ್ನನ್ನ ಅಮಾನತು ಮಾಡಿ ಮನೆಗೆ ಕಳಿಸ್ತೀನಿ ಎಂದು ಪಪಂ ಮುಖ್ಯಾಧಿಕಾರಿ ಕೆ.ಎಸ್.ಉಮೇಶ್‌ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದರು.ಪಟ್ಟಣದ ಪಪಂ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ತಾಪಂನಿಂದ ಸೋಮವಾರ ಏರ್ಪಡಿಸಲಾಗಿದ್ದ ಕೊರಟಗೆರೆ ಕ್ಷೇತ್ರದ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸ್ಲಂ ಬೋರ್ಡ್ ನಿಂದ ನಿವೇಶನ ರಹಿತರಿಗೆ ನೀಡುವ ಕಾಮೇನಹಳ್ಳಿಯ ವಸತಿ ಯೋಜನೆಯ ಕಥೆ ಏನಾಗಿದೆ. ಪೌರಕಾರ್ಮಿಕರಿಗೆ ನಿರ್ಮಾಣ ಮಾಡಿರುವ 13 ವಸತಿ ಗೃಹಗಳ ಉದ್ಘಾಟನೆಗೆ ಮೀನಾಮೇಷ ಏಕೆ. ಸಾರ್ವಜನಿಕ ಶೌಚಾಲಯ ಮತ್ತು ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಏನಾಗಿದೆ ಹೇಳು. ತುಮಕೂರು ನಗರದಿಂದ ಕೊರಟಗೆರೆಗೆ ಕೇವಲ 15 ನಿಮಿಷದಲ್ಲಿ ಬರಬಹುದೇ ಅಲ್ಲವೇ ಎಂದು ಮುಖ್ಯಾಧಿಕಾರಿ ವಿರುದ್ದ ಕಿಡಿಕಾರಿದರು.ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯ ಮಾಹಿತಿ ಕೇಳಿದರೆ ಆ ಕಡೆ ಮತ್ತು ಈ ಕಡೆ ಏನ್ ನೋಡ್ತಿರಾ. ಅಂಕಿಅಂಶದ ಮಾಹಿತಿ ತರದೇ ತ್ರೈಮಾಸಿಕ ಕೆಡಿಪಿ ಸಭೆಗೆ ಏತಕ್ಕೆ ಬರ್ತೀರಾ ಹೇಳಿ. ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರದ ಕಟ್ಟಡಗಳ ನಿರ್ಮಾಣದ ಹಂತದ ಬಗ್ಗೆ ಉತ್ತರ ನೀಡದ ಜಿಪಂ ಎಇಇ ಮಂಜುನಾಥಗೆ ತರಾಟೆಗೆ ತೆಗೆದುಕೊಂಡು ಇದು ನಿಮ್ಮ ಜವಾಬ್ದಾರಿ ಅಲ್ಲವೇ ಎಂದು ತಾಪಂ ಇಓ ಅಪೂರ್ವಗೆ ಪ್ರಶ್ನಿಸಿದರು.ಜಲಜೀವನ್ ಮೀಷನ್ ಯೋಜನೆಗೆ ರಾಜ್ಯ ಸರ್ಕಾರ ಶೇ. 55ರಷ್ಟು ನೀಡುತ್ತೇ. ತುಮಕೂರು ಜಿಲ್ಲೆಯ 2,400 ಕೋಟಿ ಅನುದಾನ ಬರೀ ಪುಸ್ತಕದ ದಾಖಲೆಯಲ್ಲಿ ಖರ್ಚಾದರೇ ಸಾಲದು. ಕೊರಟಗೆರೆಯ 466 ಕಾಮಗಾರಿ ಪೈಕಿ 82 ಮಾತ್ರ ಪೂರ್ಣ ಆಗಿದೆ. ಇನ್ನೂಳಿದ ಕಾಮಗಾರಿ ಪೂರ್ಣ ಆಗೋದು ಯಾವಾಗ ಹೇಳಿ. ಗ್ರಾಮೀಣ ಭಾಗದ ಅಭಿವೃದ್ದಿಗೆ ನೀಡಿರುವ ಅನುದಾನ ನಿಗದಿತ ಅವಧಿಯಲ್ಲಿ ಅನುಷ್ಠಾನ ಆದರೇ ಸರಿ ಇಲ್ಲವಾದ್ರೇ ಅದಕ್ಕೆ ಅಧಿಕಾರಿಗಳೇ ನೇರಹೊಣೆ ಎಂದು ತರಾಟೆಗೆ ತೆಗೆದುಕೊಂಡರು.ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡೋದು ಬಡವರ ಮಕ್ಕಳು ಮಾತ್ರ. ಇದು ನಿಮಗೆಲ್ಲ ನೆನಪಿರಲಿ. ಮಗು ಪಾಸ್ ಆದ್ರೇ ಮಾತ್ರ ಪೋಷಕರು ಮುಂದಕ್ಕೆ ವ್ಯಾಸಂಗ ಮಾಡಿಸ್ತಾರೇ ಇಲ್ಲದಿದ್ರೇ ಶಾಲೆ ಬಿಡಿಸಿ ಕೆಲಸಕ್ಕೆ ಕಳಿಸ್ತಾರೇ. ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಸಮಸ್ಯೆಯ ಬಗ್ಗೆ ಪ್ರತ್ಯೇಕ ಅಂಕಿಅಂಶದ ವರದಿ ಸಿದ್ದಪಡಿಸಿ ನನಗೇ ಕಡ್ಡಾಯವಾಗಿ ನೀಡಬೇಕು. ಸರ್ಕಾರಿ ಶಾಲೆ ಮತ್ತು ಆರೋಗ್ಯ ಕೇಂದ್ರಗಳಿಗೆ ಬೇಕಾದ ಅನುದಾನ ನಾನು ತರ್ತಿನಿ ಎಂದರು.ಕೆಡಿಪಿ ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಓ ಪ್ರಭು ಜಿ, ಎಎಸ್ಪಿ ಅಬ್ದುಲ್‌ಖಾದರ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಸಮಾಜ ಜಂಟಿ ನಿರ್ದೇಶಕ ಕೃಷ್ಣಪ್ಪ, ಕೃಷಿ ಜಂಟಿ ನಿರ್ದೇಶಕ ಡಾ.ರಮೇಶ್, ಉಪನಿರ್ದೇಶಕ ಚೇತನ್, ಮಧುಗಿರಿ ಎಸಿ ಶಿವಪ್ಪ, ಡಿವೈಎಸ್ಪಿ ಮಂಜುನಾಥ, ಪಿಡ್ಲ್ಯೂಡಿ ಇಇ ಹನುಂತರಾವ್, ಕೊರಟಗೆರೆ ತಹಸೀಲ್ದಾರ್ ಮಂಜುನಾಥ, ತಾಪಂ ಇಓ ಅಪೂರ್ವ ಸೇರಿದಂತೆ 200ಕ್ಕೂ ಅಧಿಕ ಅಧಿಕಾರಿ ವರ್ಗ ಉಪಸ್ಥಿತರಿದ್ದರು.