ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಜೀಪ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಜೀಪಿನಲ್ಲಿದ್ದ ನಾಲ್ವರು ಕೃಷಿ ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟರೆ, ಐವರು ತೀವ್ರವಾಗಿ ಗಾಯಗೊಂಡಿದ್ದು, ವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಬಸ್ ನ ಚಾಲಕ ಕೂಡ ಗಾಯಗೊಂಡಿದ್ದಾನೆ. ಬಸ್ ನಲ್ಲಿದ್ದ ಕೆಲವರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.ಮಂಗಳವಾರ ಬೆಳಗ್ಗೆ 9ರ ಸಮಯದಲ್ಲಿ ಪಟ್ಟಣದದ ಬೈಪಾಸ್ ರಸ್ತೆ (ರಾಷ್ಟ್ರೀಯ ಹೆದ್ದಾರಿ 275)ಯ ಅಯ್ಯಪ್ಪಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ದುರ್ಘಟನೆ ಸಂಭವಿಸಿದೆ. ಜೀಪಿನಲ್ಲಿ 9 ಮಂದಿ ಪ್ರಯಾಣಿಸುತ್ತಿದ್ದರು. ಮೃತರು ಎಚ್.ಡಿ. ಕೋಟೆ ತಾಲೂಕಿನ ಅಂತರಸಂತೆ ಹೋಬಳಿ ವ್ಯಾಪ್ತಿಯ ದಮ್ಮನಕಟ್ಟೆ ಮತ್ತು ಜೀಯಾರ ನಿವಾಸಿಗಳಾಗಿದ್ದಾರೆ. ದಮ್ಮನಕಟ್ಟೆಯ ಲೋಕೇಶ್ (40), ರಾಜು (38), ಸೋಮೇಶ್ (45) ಮತ್ತು ಜೀಪ್ ಚಾಲಕ ಮನು (28) ಮೃತಪಟ್ಟವರಾಗಿದ್ದಾರೆ.
ಗಾಯಗೊಂಡವರ ಪೈಕಿ ರವಿ ಮತ್ತು ಕರಿಯನ ಸ್ಥಿತಿ ಚಿಂತಾಜನಕವಾಗಿದ್ದು, ಇಬ್ಬರ ಎರಡೂ ಕಾಲುಗಳು ಕತ್ತರಿಸಲ್ಪಟ್ಟಿವೆ. ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ್ದ ಹೊಸಮಾಳ ಗ್ರಾಮದ ಲಿಂಗರಾಜು, ಸಣ್ಣಸ್ವಾಮಿ, ಗೋಪಾಲ್ ಅವರ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದೆ. ಬಸ್ ಚಾಲಕ ಕುಮಾರಸ್ವಾಮಿಗೆ ಕೂಡ ತೀವ್ರ ಸ್ವರೂಪದ ಗಾಯವಾಗಿದ್ದು, ಎಲ್ಲ ಗಾಯಾಳುಗಳಿಗೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ತಥಮ ಚಿಕಿತ್ಸೆ ನೀಡಿದ ನಂತರ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗಿದೆ.ಘಟನೆ ವಿವರ: ಎಚ್.ಡಿ. ಕೋಟೆಯ ಕೃಷಿ ಕಾರ್ಮಿಕರು ಪಿರಿಯಾಪಟ್ಟಣ ಮತ್ತು ಕುಶಾಲನಗರದ ವಿವಿಧ ಗ್ರಾಮಗಳಲ್ಲಿ ಶುಂಠಿ ಕೃಷಿ ಜಮೀನಿನಲ್ಲಿ ಕೆಲಸಕ್ಕೆ ತಮ್ಮೂರಿದ್ದೇ ಜೀಪಿನಲ್ಲಿ ತೆರಳಿದ್ದರು. ಪಟ್ಟಣದ ಅಯ್ಯಪ್ಪಸ್ವಾಮಿ ಬೆಟ್ಟದ ತಪ್ಪಲಿನ ತಿರುವಿನಲ್ಲಿ ವಿರಾಜಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ.ಯ ಎಲೆಕ್ಟ್ರಿಕ್ (ಇವಿ) ಪವರ್ ಪ್ಲಸ್ ಬಸ್ ನೇರವಾಗಿ ಜೀಪಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಜೀಪ್ ಉಲ್ಟಾ ತಿರುಗಿ 50 ಮೀಟರ್ ದೂರ ಬಿದ್ದಿದೆ. ಜೀಪಿನ ಟಾಪ್ ಕಿತ್ತು ಹೋಗಿ ಇಡೀ ಜೀಪ್ ನುಜ್ಜುಗುಜ್ಜಾಗಿದೆ. ಜೀಪಿನಿಂದ 2-3 ದೇಹಗಳು ರಸ್ತೆಯ ಮೇಲೆ ಮಾಂಸದ ಮುದ್ದೆಯಾಗಿ ಬಿದ್ದಿದೆ. ಈ ಪೈಕಿ ಮೃತರೊಬ್ಬರ ತಲೆಯ ಮೆದುಳು ರಸ್ತೆ ಬದಿಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಂಡು ಜನತೆ ಹೌಹಾರಿದರು. ಜೀಪಿನ ಎರಡು ಚಕ್ರಗಳು ಕಳಚಿ ಉರುಳಿವೆ. ಇಡೀ ರಸ್ತೆಯ ತುಂಬೆಲ್ಲಾ ರಕ್ತದ ಓಕುಳಿ ಹರಿದಾಡಿದೆ. ಬಸ್ ನ ಚಾಲಕ ಕೂರುವ ಸ್ಥಳವು ಕಿತ್ತು ಹೋಗಿದೆ. ಹುಣಸೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಮತ್ತು ಜೀಪನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಷಯ ತಿಳಿದೊಡನೆ ಸ್ಥಳಕ್ಕೆ ನಗರಠಾಣೆ ಇನ್ಸ್ಪೆಕ್ಟರ್ ದೇವೇಂದ್ರ ಮತ್ತವರ ತಂಡ ಕೂಡಲೇ ಗಾಯಾಳುಗಳನ್ನು ಮತ್ತು ಮೃತದೇಹಗಳನ್ನು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದರು. ಸ್ತಬ್ದವಾಗಿದ್ದ ಸಂಚಾರವನ್ನು ಸುಗಮಗೊಳಿಸಿದರು. ಗಾಯಗೊಂಡವರು ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದರೆ, ಸ್ಥಳೀಯ ಜನರು ಮತ್ತು ದಾರಿ ಹೋಕರು ತಮ್ಮ ತಮ್ಮ ಮೊಬೈಲ್ ನಲ್ಲಿ ಘಟನೆಯ ಚಿತ್ರೀಕರಣ ಮಾಡುವುದಲ್ಲೇ ಬಿಜಿಯಾಗಿದ್ದ ದೃಶ್ಯ ಕಂಡುಬಂದಿತು.;Resize=(128,128))
;Resize=(128,128))
;Resize=(128,128))