ಮನೆ ಮನೆ ಭೇಟಿ ನೀಡಿ ಖಾಸಗಿ ಶಾಲೆಯತ್ತ ಒಲವು ತೋರಿದ್ದ ಪೋಷಕರ ಮನವೊಲಿಸಿ ಮಕ್ಕಳ ದಾಖಲಾತಿ ಹೆಚ್ಚಿಸಿದ ಮುಖ್ಯಶಿಕ್ಷಕ

| Published : Sep 13 2024, 01:44 AM IST / Updated: Sep 13 2024, 12:41 PM IST

school rajasthan
ಮನೆ ಮನೆ ಭೇಟಿ ನೀಡಿ ಖಾಸಗಿ ಶಾಲೆಯತ್ತ ಒಲವು ತೋರಿದ್ದ ಪೋಷಕರ ಮನವೊಲಿಸಿ ಮಕ್ಕಳ ದಾಖಲಾತಿ ಹೆಚ್ಚಿಸಿದ ಮುಖ್ಯಶಿಕ್ಷಕ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಶಿಕ್ಷಕ ಎಚ್‌ ರಾಜನಾಯ್ಕರವರು ಸಹಶಿಕ್ಷಕರು ಹಾಗೂ ಗ್ರಾಮಸ್ಥರುಗಳ ತಂಡದೊಂದಿಗೆ ಮೇ ತಿಂಗಳಿನಿಂದಲೇ ಪೋಷಕರ ಮನೆ ಮನೆ ಭೇಟಿ ನೀಡಿ ಖಾಸಗಿ ಶಾಲೆಯತ್ತ ಒಲವು ತೋರಿದ್ದ ಪೋಷಕರನ್ನು ಮನವೊಲಿಸಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಿದರು.

 ಹಾಸನ :  ಖಾಸಗಿ ಶಾಲೆಗಳ ಹಾವಳಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಕೊರತೆಗಳ ಸವಾಲುಗಳೊಂದಿಗೆ ಪ್ರಸ್ತುತ ಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವುದು, ದಾಖಲಾತಿ ಹೆಚ್ಚಿಸುವುದು ಕಷ್ಟಸಾಧ್ಯವಾಗಿದೆ. ಇಂತಹ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಈಚಲಬೀಡಿನ ಸರ್ಕಾರಿ ಪ್ರೌಢಶಾಲೆ ವಿಶೇಷ ಉದಾಹರಣೆಯಾಗಿದೆ.

ಈ ಶಾಲೆಯಲ್ಲಿ 2024 -25 ನೇ ಸಾಲಿಗೆ ಇದ್ದದ್ದು ಕೇವಲ4 ವಿದ್ಯಾರ್ಥಿಗಳು ಮಾತ್ರ. ಕೂಡಲೇ ಕಾರ್ಯಪ್ರವೃತ್ತರಾದ ಮುಖ್ಯಶಿಕ್ಷಕ ಎಚ್‌ ರಾಜನಾಯ್ಕರವರು ಸಹಶಿಕ್ಷಕರು ಹಾಗೂ ಗ್ರಾಮಸ್ಥರುಗಳ ತಂಡದೊಂದಿಗೆ ಮೇ ತಿಂಗಳಿನಿಂದಲೇ ಪೋಷಕರ ಮನೆ ಮನೆ ಭೇಟಿ ನೀಡಿ ಖಾಸಗಿ ಶಾಲೆಯತ್ತ ಒಲವು ತೋರಿದ್ದ ಪೋಷಕರನ್ನು ಮನವೊಲಿಸಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಿದರು.

ಸರ್ಕಾರ ನೀಡಿರುವ ಉಚಿತ ಸಮವಸ್ತ್ರ, ಪಠ್ಯಪುಸ್ತಕಗಳೊಂದಿಗೆ ತಮ್ಮ ಹಳೆಯ ವಿದ್ಯಾರ್ಥಿಗಳು, ದಾನಿಗಳು ಹಾಗೂ ತಮ್ಮ ಕುಟುಂಬದವರ ಆರ್ಥಿಕ ಸಹಾಯದೊಂದಿಗೆ ಹೆಚ್ಚುವರಿಯಾಗಿ 2 ಜೊತೆ ಟ್ರ್ಯಾಕ್‌ ಸೂಟ್‌ಗಳು, ಬಿಳಿಯ ಸಮವಸ್ತ್ರ, ನೋಟ್‌ ಪುಸ್ತಕಗಳು ವರ್ಷಕ್ಕಾಗುವಷ್ಟು ಪೆನ್ನುಗಳು, ಪೆನ್ಸಿಲ್‌ಗಳನ್ನು ನೀಡಿ ಮಕ್ಕಳನ್ನು ಶಾಲೆಗೆ ಆಕರ್ಷಿಸಿದ್ದಾರೆ. ಶಾಲೆಯಲ್ಲಿ ಈಗ ದಾಖಲಾತಿ 28 ಅನ್ನು ತಲುಪಿರುವುದು ಶಿಕ್ಷಕರು ಎಸ್‌ಡಿಎಂಸಿ, ಪೋಷಕರು ಹಾಗೂ ಗ್ರಾಮಸ್ಥರಲ್ಲಿ ಸಂತಸವನ್ನು ತಂದಿದೆ.

ಇಷ್ಟೇ ಅಲ್ಲದೇ1 ಲಕ್ಷಕ್ಕೂ ಅಧಿಕವಾಗಿ ತಮ್ಮದೇ ಸ್ವಂತ ಹಣದಿಂದ ಶಾಲೆಯ ಆವರಣದ ಸುತ್ತಲೂ ಈಚಲಬೀಡು ಶ್ರೀ ಬಸವೇಶ್ವರ ಗ್ರಾಮಾಭಿವೃದ್ಧಿ ಸಂಘದ ಸುಮಾರು 70 ಸದಸ್ಯರ ಸಹಕಾರ ಪಡೆದು 2 ಭಾನುವಾರಗಳು ತಂತಿಬೇಲಿ ಅಳವಡಿಸಿ ತೆಂಗಿನ ಸಸಿಗಳನ್ನು ನೆಟ್ಟು ಶಾಲಾ ಆವರಣವನ್ನು ಹಸಿರುಮಯವಾಗಿಸಿರುತ್ತಾರೆ. ಇದರೊಂದಿಗೆ ಶಾಲಾ ಪೋಷಣ ಕೈತೋಟ ನಿರ್ಮಾಣ ಮಾಡುವ ಸದುದ್ದೇಶದೊಂದಿಗೆ ಈಗಾಗಲೇ ವಿವಿಧ ರೀತಿಯ ತರಕಾರಿಗಳು ಹಾಗೂ ಸೊಪ್ಪಿನ ಮಡಿಗಳನ್ನು ಮಾಡಿ ಬೆಳೆಸುತ್ತಿದ್ದಾರೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಶ್ರೀ ರಾಜನಾಯ್ಕ ಎಚ್ ರವರ ಸೇವಾವಧಿಯಲ್ಲಿನ ಸಾಧನೆಗಳನ್ನು ಗುರುತಿಸಿ ೨೦೨೪-೨೫ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಶಾಲೆ ನಿರ್ಮಾಣವಾದಾಗಿನಿಂದಲೂ ಇದುವರೆವಿಗೂ ಸುಣ್ಣ ಬಣ್ಣ ಕಂಡಿಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ದಾನಿಗಳನ್ನು ಸಂಪರ್ಕಿಸಿ ಹಣ ಸಂಗ್ರಹಿಸಲಾಗುತ್ತಿದೆ. ಇದರ ಜೊತೆಗೆ ಇಲಾಖೆಯ ಹಾಗೂ ಜಿಲ್ಲಾ ಪಂಚಾಯತ್‌ ಹಾಸನ ಇವರ ನೆರವಿನೊಂದಿಗೆ ಶಾಲಾ ಮೇಲ್ಛಾವಣಿಗೆ ಶೀಟ್‌ ಅಳವಡಿಕೆಗೂ ಕ್ರಿಯಾಯೋಜನೆ ತಯಾರಿಸಲಾಗಿದೆ. ಮುಖ್ಯಶಿಕ್ಷಕ ಈ ಸಾಧನೆ ಇತರೆ ಶಾಲೆಗಳಿಗೂ ಮಾದರಿಯಾದಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸಿ ಶಾಲೆಗಳನ್ನು ಉಳಿಸಬಹುದಾಗಿದೆ.