ಮುಂಡರಗಿ ಪಟ್ಟಣದ ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಉಚಿತ ಆರೋಗ್ಯ ಶಿಬಿರ, ಬಿಪಿ ತಪಾಸಣೆ ಮತ್ತು ಉಚಿತ ಔಷಧ ವಿತರಣೆ ಕಾರ್ಯಕ್ರಮ ನಡೆಯಿತು.
ಮುಂಡರಗಿ: ಒಂದು ದೇಶ ಪ್ರಗತಿಯಾಗಬೇಕಾದರೆ ಆರೋಗ್ಯ ಮತ್ತು ಶಿಕ್ಷಣ ಎರಡೂ ಅತ್ಯಂತ ಅವಶ್ಯ. ಹೀಗಾಗಿ ಈ ಎರಡೂ ವಿಷಯಗಳಲ್ಲಿ ಪಾಲಕರು ಅತ್ಯಂತ ಜಾಗ್ರತೆ ವಹಿಸಬೇಕು ಎಂದು ಪಟ್ಟಣದ ಮಕ್ಕಳ ವೈದ್ಯ ಡಾ. ಗೋಣೇಶ ಮೇವುಂಡಿ ಹೇಳಿದರು.
ಪಟ್ಟಣದ ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲೈಫ್ ಕೇರ್ ಆಸ್ಪತ್ರೆ ಹಾಗೂ ನ್ಯೂ ನಳಂದ ಹೋಟೆಲ್ ಆಶ್ರಯದಲ್ಲಿ ಶನಿವಾರ ಜರುಗಿದ ಆರೋಗ್ಯ ಶಿಬಿರ, ಬಿಪಿ ತಪಾಸಣೆ ಮತ್ತು ಉಚಿತ ಔಷಧ ವಿತರಣೆ ಕಾರ್ಯಕ್ರಮದಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅವರು ಮಾತನಾಡಿದರು.ಇಂದಿನ ಕಾಲದಲ್ಲಿ 10ರಿಂದ 15 ವರ್ಷದೊಳಗಿನ ಮಕ್ಕಳಲ್ಲಿ ಪೋಷಕಾಂಶಗಳ ಕೊರತೆ ಹಾಗೂ ಹೊಟ್ಟೆಯಲ್ಲಿ ಜಂತುಗಳು ಇರುತ್ತವೆ. ಇದರಿಂದಾಗಿ ಮಕ್ಕಳ ಮುಖದ ಮೇಲೆ ಬಿಳಿ ಕಲೆಗಳು (ತದ್ದು) ಕಾಣಿಸಿಕೊಳ್ಳುತ್ತವೆ. ಇವು ತಪಾಸಣೆ ನಡೆಸದೇ ಗೊತ್ತಾಗುವುದಿಲ್ಲ. ಹೀಗಾಗಿ ವರ್ಷದಲ್ಲಿ 1-2 ಬಾರಿಯಾದರೂ ಪಾಲಕರು ತಪ್ಪದೇ ಮಕ್ಕಳ ಆರೋಗ್ಯ ತಪಾಸಣೆ ನಡೆಸುವುದು ಅವಶ್ಯವಾಗಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ ಮಾತನಾಡಿ, ಮಕ್ಕಳ ಆರೋಗ್ಯ ತಪಾಸಣೆ ಅತಿ ಅವಶ್ಯ. ಮಕ್ಕಳಲ್ಲಿರುವ ಕಾಯಿಲೆಗಳು ಯಾರಿಗೂ ತಿಳಿದಿರುವುದಿಲ್ಲ. ಅದರ ಬಗ್ಗೆ ಹೇಳಿಕೊಳ್ಳಲು ಮಕ್ಕಳು ಹಿಂಜರಿಯುತ್ತಾರೆ. ಹೀಗಾಗಿ ಕಾಲಕಾಲಕ್ಕೆ ಚಿಕ್ಕ ಮಕ್ಕಳ ತಜ್ಞರೊಂದಿಗೆ ತಪಾಸಣೆ ನಡೆಸುವುದು ಅವಶ್ಯವಾಗಿದೆ ಎಂದರು.ಶಾಲಾ ಮುಖ್ಯೋಪಾಧ್ಯಾಯ ಡಾ. ನಿಂಗು ಸೊಲಗಿ ಮಾತನಾಡಿ, ನಮ್ಮದು ಸರ್ಕಾರಿ ಶಾಲೆಯಾದರೂ ಸಮುದಾಯದ ಸಹಭಾಗಿತ್ವದಲ್ಲಿ ಈಗಾಗಲೇ 6 ಲಕ್ಷಕ್ಕೂ ಅಧಿಕ ಹಣವನ್ನು ಸಮುದಾಯದಿಂದ ಪಡೆದುಕೊಂಡು ಖರ್ಚು ಮಾಡಲಾಗಿದೆ. ಮಾದರಿ ಶಾಲೆ ನಿರ್ಮಾಣ ಮಾಡುವಲ್ಲಿ ಈ ಗ್ರಾಮಸ್ಥರ ಪ್ರಯತ್ನ ನಿರಂತರವಾಗಿ ನಡೆದಿದೆ ಎಂದರು.
ಸೇತುರಾಮಾಚಾರ್ಯ ಕಟ್ಟಿ ಮಾತನಾಡಿದರು. ಶಿಬಿರದಲ್ಲಿ ತಮ್ಮ ಮಕ್ಕಳೊಂದಿಗೆ ತಾಯಂದಿರು, ಹಿರಿಯ ನಾಗರಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಜತೆಗೆ ಭೀಮಾಂಬಿಕಾನಗರದ ಡಾ. ಬಿ.ಎಸ್. ಮೇಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಎಸ್‌ಡಿಎಂಸಿ ಅಧ್ಯಕ್ಷ ಉಮೇಶ ದಂಡಿನ ಅಧ್ಯಕ್ಷತೆ ವಹಿಸಿದ್ದರು. ಡಾ. ಗೋಣೇಶ, ಡಾ. ಲಕ್ಷ್ಮಣ, ನ್ಯೂ ನಳಂದ ಹೋಟೆಲ್ ಮಾಲೀಕ ಜಗದೀಶ ಸಂಗಟಿ, ಡಾ. ಪ್ರಶಾಂತ ಅವರನ್ನು ಸನ್ಮಾನಿಸಲಾಯಿತು.ಬಸವರಾಜ ತಿಗರಿ, ರಂಗಪ್ಪ ಮೇಟಿ, ಸಿದ್ದರಾಮಗೌಡ ಪಾಟೀಲ, ಯಲ್ಲಪ್ಪ ಅಬ್ಬೀಗೇರಿ, ಅಶೋಕ ಕೋಳಿ, ವಿಠ್ಠಲ ಜಂಬಿಗಿ, ಪರಮೇಶ ದಂಡಿನ, ಜಿತೇಂದ್ರ ಬಾಗಳಿ, ಪ್ರಭಾವತಿ ಆರ್. ಗಾಡದ, ಶಿವಲೀಲಾ ಅಬ್ಬಿಗೇರಿ, ಬಸವರಾಜ ಹೆಬಲಿ , ಲಕ್ಷ್ಮಣ ಸಂಗಟಿ ಉಪಸ್ಥಿತರಿದ್ದರು. ಶಿಕ್ಷಕರಾದ ಬಿ.ಎಚ್. ಹಲವಾಗಲಿ ಸ್ವಾಗತಿಸಿದರು. ಪಿ.ಎಂ. ಲಾಂಡೆ ಕಾರ್ಯಕ್ರಮ ನಿರೂಪಿಸಿದರು. ಎಂ.ಆರ್. ಗುಗ್ಗರಿ ವಂದನಾರ್ಪಣೆ ಮಾಡಿದರು.