ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮಹಿಳೆಯರು ಹಾಗೂ ಹದಿಹರೆಯದವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಮುಂದಾಗುವ ಅನಾರೋಗ್ಯವನ್ನು ತಡೆಗಟ್ಟಬಹುದು. ಆರೋಗ್ಯ ಸದೃಢವಾಗಿದ್ದರೆ ಮಾತ್ರ ಭವ್ಯ ರಾಷ್ಟ್ರದ ನಿರ್ಮಾಣದ ಕನಸು ಪೂರ್ಣಗೊಳ್ಳುತ್ತದೆ ಎಂದು ಆರ್ಟ ಆಫ್ ಗಿವಿಂಗ್ ಫೌಂಡೇಶನದ ರಾಷ್ಟ್ರೀಯ ರಾಯಭಾರಿ ಶಿಫಾ ಜಮಾದಾರ ಹೇಳಿದರು.ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಆರ್ಟ ಆಫ್ ಗಿವಿಂಗ್ ಫೌಂಡೇಶನ ಹಾಗೂ ಆರೋಗ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಅರಿವು ಮತ್ತು ನೆರೆಹೊರೆಯವರ ಉತ್ತಮ ಬಾಂಧವ್ಯ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯುವಕರಲ್ಲಿ ಆಗುವ ಮಾನಸಿಕ ಮತ್ತು ದೈಹಿಕ ಬದಲಾವಣೆ ಬಗ್ಗೆ ಸೂಕ್ತ ತಿಳುವಳಿಕೆ ಇಂದಿನ ಜನಾಂಗದವರಿಗೆ ಅವಶ್ಯವಿದೆ. ಮನುಷ್ಯನ ಆರೋಗ್ಯ ಬಹಳ ಮುಖ್ಯ ಅದರಲ್ಲಿ ವಿಶೇಷವಾಗಿ ಇಂದು ಯುವ ಜನತೆ ದುಶ್ಚಟಗಳಿಗೆ ದಾಸರಾಗಿದ್ದಾರೆ. ಮಾದಕ ವಸ್ತುಗಳಾದ ಗಾಂಜಾ, ಅಫಿಮು, ಕುಡಿತ, ಡ್ರಗ್ ಸೇವೆನೆ ಬೀಡಿ, ಸಿಗರೆಟ್ ತಂಬಾಕು ಸೇವನೆ ಹೆಚ್ಚಾಗಿ ಕಂಡು ಬರುತ್ತಿದೆ. ಇದನ್ನು ತಡೆಗಟ್ಟಲು ಮತ್ತು ಯುವಜನತೆಗೆ ಅರಿವು ಮೂಡಿಸಬೇಕಾಗಿದೆ. ಕೋವಿಡ್ ಅಂತಹ ಮಾರಕ ರೋಗದ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ನೆರೆಹೊರೆಯವರಿಗೆ ಸಹಾಯ ಮಾಡುವುದು ಉತ್ತಮ ಸಂಬಂಧಗಳನ್ನು ಬೆಳೆಸಿ ನಿಸ್ವಾರ್ಥ ಸೇವೆ ಮುಖಾಂತರ ಸಮಾಜದಲ್ಲಿ ಶಾಂತಿ, ನೆಮ್ಮದಿ ಪ್ರಗತಿಗಾಗಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿದ್ದಂತಹ ಜನರಿಗೆ ಸಹಾಯ ಹಸ್ತ ನೀಡಿ ಮಾದರಿ ಸಮಾಜ ನಿರ್ಮಾಣ ಮಾಡುವಂತೆ ಕರೆ ನೀಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ಮಾತನಾಡಿ, ಇಂದಿನ ವಾತಾವರಣದಲ್ಲಿ ಒತ್ತಡ, ಆತಂಕ ಮತ್ತು ಕಿನ್ನತೆ ಹೆಚ್ಚಾಗಿ ಕಂಡು ಬರುತ್ತಿದೆ. ಅದಾಗ್ಯೂ ಮಾನಸಿಕ ಆರೋಗ್ಯವನ್ನು ಸಮಸ್ಯೆಯಾಗಿ ಪರಿಗಣಿಸಲಾಗಿದೆ. ನಮ್ಮ ಸವಾಲು ದೌರ್ಬಲ್ಯವಲ್ಲ ಶಕ್ತಿಯ ಸಂಕೇತ ಎಂದು ನಾವು ನಮ್ಮನ್ನು ನೆನಪಿಸಿಕೊಳ್ಳಬೇಕು. ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯದಷ್ಟು ಮುಖ್ಯವಾಗಿದೆ. ಒಟ್ಟಾಗಿ ಕೆಲಸ ಮಾಡುವದರಿಂದ ನಾವು ಜಾಗೃತಿ ಹೆಚ್ಚಸಬಹುದು. ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಎಲ್ಲ ಸೌಕರ್ಯಗಳು ಮತ್ತು ರೀತಿಯ ಶಸ್ತ್ರ ಚಿಕಿತ್ಸೆಗಳು ಉಚಿತವಾಗಿ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಗಿಂತ ಉತ್ತಮವಾಗಿ ಸೇವೆ ನೀಡಲು ಶ್ರಮಿಸುತ್ತಿದ್ದೇವೆ. ಸಾರ್ವಜನಿಕರು ಇದರ ಲಾಭ ಪಡೆಯುವಂತೆ ತಿಳಿಸಿದರು.ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ.ಜಾವೀದ ಜಮಾದಾರ, ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಇಲಿಯಾಸಅಹ್ಮದ ಸಿದ್ದಿಕಿ ಮಾತನಾಡಿದರು.
ಆರ್ಟ್ ಆಫ್ ಗಿವಿಂಗ್ ಫೌಂಡೇಶನ್ ಪರವಾಗಿ ಜಿಲ್ಲಾ ಆಸ್ಪತ್ರೆಯಲ್ಲಿರುವ ಬಡ ರೋಗಿಗಳಿಗೆ ಹಣ್ಣು-ಹಂಪಲು ಹಾಗೂ ಬಿಸ್ಕಿಟ್, ಜ್ಯೂಸ್ ಮುಂತಾದ ವಸ್ತುಗಳನ್ನೊಳಗೊಂಡ ಆಹಾರ ಕಿಟ್‌ನ್ನು ವಿತರಿಸಲಾಯಿತು.ಎಸ್.ಎ.ಮೋಮಿನ, ವೀಣಾ ಕುಲಕರ್ಣಿ, ರೇಖಾ ಇಂಗಳೇಶ್ವರ, ಸುರೇಂದ್ರಕುಮಾರ ಮಾನಕರ ಉಪಸ್ಥಿತರಿದ್ದರು.