ಅರಣ್ಯ ಸಿಬ್ಬಂದಿಗೆ ಆರೋಗ್ಯ ತಪಾಸಣಾ ಶಿಬಿರ

| Published : Dec 03 2024, 12:31 AM IST

ಸಾರಾಂಶ

ಒಂದು ದಿನದ ಈ ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ಪರೀಕ್ಷೆ,, ಆಂಥ್ರೊಪೊಮೆಟ್ರಿ, ಶುಗರ್, ಬಿಪಿ ತಪಾಸಣೆ, ಹಿಮೋಗ್ಲೋಬಿನ್ ಅಂದಾಜು, ಇಸಿಜಿ (ಅಗತ್ಯವಿರುವವರಿಗೆ) ಸೇವೆಗಳನ್ನು ಒದಗಿಸಲಾಯಿತು.

ಬೇರು ಸೇವಾ ಟ್ರಸ್ಟ್, ಬಿಜಿಎಸ್- ಗ್ಲೋಬಲ್ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಿಂದ ಶಿಬಿರಕನ್ನಡಪ್ರಭ ವಾರ್ತೆ ಮೈಸೂರು

ಬೇರು ಸೇವಾ ಟ್ರಸ್ಟ್, ಬಿಜಿಎಸ್- ಗ್ಲೋಬಲ್ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಹಯೋಗದೊಂದಿಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ನಾಗರಹೊಳೆ ಮತ್ತು ಕಲ್ಲಳ್ಳ ವನ್ಯಜೀವಿ ವಲಯದ ಅರಣ್ಯ ಸಿಬ್ಬಂದಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದರು.

ಈ ವೇಳೆ ಎಸಿಎಫ್ ಜೆ. ಅನನ್ಯಕುಮಾರ್ ಮಾತನಾಡಿ, ಅರಣ್ಯ ಸಿಬ್ಬಂದಿಗೆ ಹೊರಗಿನ ಜಗತ್ತಿನಿಂದ ಸಹಕಾರ ಸಿಗುವುದು ತುಂಬಾ ಕಷ್ಟ. ಇಂತಹ ಸಂದರ್ಭದಲ್ಲಿ ಬೇರು ತರದ ಸಂಸ್ಥೆಗಳು ಇತ್ತ ಕಡೆ ಗಮನ ಹರಿಸಿರುವುದು ತುಂಬಾ ಸಂತೋಷ. ಈ ರೀತಿಯ ವೈದ್ಯಕೀಯ ಶಿಬಿರಗಳು ಅರಣ್ಯ ಸಿಬ್ಬಂದಿ ಆರೋಗ್ಯ ಸ್ಥಿತಿ ಮತ್ತು ಕೆಲವು ಮುನ್ನೆಚ್ಚರಿಕೆ ವಹಿಸಲು ಸಹಾಯವಾಗುತ್ತದೆ ಎಂದರು.

ಬೇರು ಟ್ರಸ್ಟ್ ಸಂಸ್ಥಾಪಕಿ ಹಾಗೂ ಟ್ರಸ್ಟಿ ಡಿ. ಸುಮನ ಕಿತ್ತೂರು ಮಾತನಾಡಿ, ಮಾನವೀಯ ಮೌಲ್ಯ, ಪ್ರಕೃತಿ ಮತ್ತು ಶಾಂತಿಯುತ ಸಹಬಾಳ್ವೆಗಾಗಿ ಬೇರು ತಂಡ ಕಾರ್ಯ ನಿರ್ವಹಿಸಲು ಸದಾ ಸಿದ್ಧ ಎಂದು ಹೇಳಿದರು.

ಬೇರು ತಂಡದ ಮತ್ತೊಬ್ಬ ಟ್ರಸ್ಟಿ ಹಾಗೂ ನಟ ಕಿಶೋರ್ ಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ಪರಿಸರದ ಬಗ್ಗೆ ನಮ್ಮ ನಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದರು.

ಕಲಾವಿದೆ ಮೇಘನಾ ಗಾಂವ್ಕರ್ ಮಾತನಾಡಿ, ಪರಿಸರಕ್ಕೆ ಮತ್ತು ಅದರ ರಕ್ಷಕರಿಗೆ ನಾವು ಗೌರವ ನೀಡಬೇಕು ಎಂದು ತಿಳಿಸಿದರು.

ಒಂದು ದಿನದ ಈ ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ಪರೀಕ್ಷೆ,, ಆಂಥ್ರೊಪೊಮೆಟ್ರಿ, ಶುಗರ್, ಬಿಪಿ ತಪಾಸಣೆ, ಹಿಮೋಗ್ಲೋಬಿನ್ ಅಂದಾಜು, ಇಸಿಜಿ (ಅಗತ್ಯವಿರುವವರಿಗೆ) ಸೇವೆಗಳನ್ನು ಒದಗಿಸಲಾಯಿತು. 70ಕ್ಕೂ ಹೆಚ್ಚಿನ ಸಿಬ್ಬಂದಿ ಮತ್ತು ನಾಗರಹೊಳೆಯ ಸರ್ಕಾರಿ ವಾಲ್ಮೀಕಿ ಆಶ್ರಮ ಶಾಲೆಯ ಮಕ್ಕಳಿಗೆ ಕೂಡ ಚರ್ಮರೋಗದ ಸಂಬಂಧಿತ ತಪಾಸಣೆ ನಡೆಸಲಾಯಿತು. ಜೊತೆಗೆ ಆರೋಗ್ಯ, ಆರೈಕೆ, ಸ್ವಚ್ಛತೆ ಬಗೆಗೆ ವೈದ್ಯರಿಂದ ಅರಿವು ಮೂಡಿಸಲಾಯಿತು.

ಬೇರು ತಂಡದ ಪ್ರಾಣಿಗಳ ರಕ್ಷಣಾ ಸಲಹೆಗಾರ ಡಾ. ಪ್ರಯಾಗ್, ಬಿಜಿಎಸ್ ವೈದ್ಯ ಡಾ. ಸತೀಶ್ ಚಂದ್ರ ಅವರು, ಅರಣ್ಯ ಸಿಬ್ಬಂದಿ ಕಾಡಿನಲ್ಲಿ ಎದುರಿಸುವ ಪ್ರಾಣಿಗಳ ಕಡಿತ ಮತ್ತು ನಂತರದ ಪ್ರಥಮ ಚಿಕಿತ್ಸೆ ಹಾಗೂ ವೈದ್ಯಕೀಯ ಸವಾಲುಗಳ ಕುರಿತು ಸಂವಾದ ನಡೆಸಿಕೊಟ್ಟರು.

ಶಿಬಿರದಲ್ಲಿ ಅರಣ್ಯ ಇಲಾಖೆಯ ಆರ್ ಎಫ್ಒ ಮಂಜುನಾಥ್, ಡಿಆರ್ ಎಫ್ಒ ನವೀನ್ ರಾವತ್, ನಿರ್ಮಾಪಕಿ ರೇಖಾರಾಣಿ, ಸುಚಿತ್ರಾ ವೇಣುಗೋಪಾಲ್, ಶ್ರೀನಿವಾಸ್, ಸುರಭಿ, ವಿಷ್ಣುಕುಮಾರ್, ಯಶೋಧಾ, ಹರ್ಷಿತಾ ವಿಷ್ಣು, ಗಾಯತ್ರಿ ಮೊದಲಾದವರು ಇದ್ದರು.