ಮಡಿಕೇರಿ: ಇಂದಿನ ಸ್ಥಿತಿಗತಿಯಲ್ಲಿ ಪ್ರತಿಯೊಬ್ಬರು ಆರೋಗ್ಯದ ಕಡೆ ಗಮನ ಹರಿಸದೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದಾಗಿ ಪ್ರತಿಯೊಬ್ಬರಿಗೂ ಆರೋಗ್ಯ ತಪಾಸಣೆ ಅತ್ಯಗತ್ಯ, ತಪಾಸಣೆಯಿಂದ ಮಾತ್ರ ಕಾಯಿಲೆಗಳನ್ನು ಪತ್ತೆಹಚ್ಚಲು ಸಾಧ್ಯ, ಇದಕ್ಕೆ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಸಹಕಾರಿ ಎಂದು ಡಾ.ನಿತ್ಯಪ್ರಿಯ ಅಭಿಪ್ರಾಯ ಪಟ್ಟಿದ್ದಾರೆ.

ಹಿಲ್ ಬ್ಲೂಮ್ ಹೆಲ್ತ್ ಕೇರ್ ವತಿಯಿಂದ ಅಭ್ಯತ್ ಮಂಗಲ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ನೇತೃತ್ವ ವಹಿಸಿದ್ದ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.ಯಾವುದೇ ಕಾಯಿಲೆಯಾಗಲಿ, ತಪಾಸಣೆಗಳ ಮೂಲಕ ಮೊದಲು ರೋಗದ ಮೂಲ ಕಾರಣವನ್ನು ಪತ್ತೆ ಹಚ್ಚುವುದು ಮತ್ತು ನಂತರ ವೈದ್ಯರ ಸಲಹೆಯ ಮೇರೆಗೆ ಹಂತ ಹಂತವಾಗಿ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ರೋಗ ರುಜಿನಗಳಿಂದ ಮುಕ್ತಿ ಹೊಂದಬೇಕಾದರೆ ಆಗಾಗ ವೈದ್ಯರನ್ನು ಕಂಡು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

ಶಾಸಕ ಮಂತರ್ ಗೌಡ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ, ಮುಖ್ಯೋಪಾಧ್ಯಾಯಿನಿ ಶಮೀನ ಅಶ್ರಫ್, ಪಿಡಿಓ ಮಾದಪ್ಪ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯಶ್ ಧೋಲ್ಪಾಡಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನೀತಾ ಮಂಜುನಾಥ್, ಹಿಲ್ ಬ್ಲೂಮ್ ವ್ಯವಸ್ಥಾಪಕ ಸಮದ್, ಅಭಿರಾಮಿ ಕಾಂಗ್ರೆಸ್ ವಲಯ ಅಧ್ಯಕ್ಷ ಹನೀಫ್ ಎ.ಎಂ, ಪ್ರಮುಖರಾದ ಮಜೀದ್, ಮಣಿ, ದಾನಿ ಮಂಜುನಾಥ್ ಕೆದಂಬಾಡಿ ಮತ್ತಿತರರಿದ್ದರು.