ಸಾರಾಂಶ
ಕಾಲ ಕಾಲಕ್ಕೆ ತಮ್ಮ ಆರೋಗ್ಯ ತಪಾಸಣೆ ಮಾಡಿಕೊಂಡರೆ ಉತ್ತಮ ಆರೋಗ್ಯ ಮತ್ತು ಸುಂದರ ಬದುಕನ್ನು ನಿಮ್ಮದಾಗಿಸಿಕೊಳ್ಳಬಹುದು
ಕನ್ನಡಪ್ರಭ ವಾರ್ತೆ ತಿಪಟೂರು
ಬದಲಾದ ಅಹಾರ ಪದ್ಧತಿ ಹಾಗೂ ಜೀವನ ಶೈಲಿಯ ಪರಿಣಾಮ ಮನುಷ್ಯ ಇಂದು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದು, ಪ್ರತಿಯೊಬ್ಬರು ಕಾಲ ಕಾಲಕ್ಕೆ ತಮ್ಮ ಆರೋಗ್ಯ ತಪಾಸಣೆ ಮಾಡಿಕೊಂಡರೆ ಉತ್ತಮ ಆರೋಗ್ಯ ಮತ್ತು ಸುಂದರ ಬದುಕನ್ನು ನಿಮ್ಮದಾಗಿಸಿಕೊಳ್ಳಬಹುದು ಎಂದು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಡಾ. ಸಂಜಯ್ ತಿಳಿಸಿದರು. ನಗರದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಹಾಗೂ ಸಿದ್ದೇಶ್ವರ ಸೂಪರ್ ಸ್ಪೆಶಾಲಿಟಿ ಕ್ಲಿನಿಕ್, ಶ್ರೀ ಸತ್ಯ ಗಣಪತಿ ಸೇವಾ ಸಂಘ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಮತ್ತು ಬಡವರಿಗೆ, ಅಸಹಾಯಕರಿಗೆ ನುರಿತ ವೈದ್ಯರು ಹಾಗೂ ವೈದ್ಯಕೀಯ ತಂತ್ರಜ್ಞರಿಂದ ಉಚಿತ ವೈದ್ಯಕೀಯ ನೆರವು ನೀಡುವುದು ನಮ್ಮ ಉದ್ದೇಶವಾಗಿದೆ. ಆರೋಗ್ಯವನ್ನು ಹಣ ನೀಡಿ ಪಡೆಯಲಾಗುವುದಿಲ್ಲ. ಗ್ರಾಮೀಣರಿಗೆ ಅನುಕೂಲವಾಗಲೆಂದು ಇಂತಹ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಆದ್ದರಿಂದ ಗ್ರಾಮೀಣ ಭಾಗದ ಜನರು ತಮ್ಮಲ್ಲಿರುವ ಸಂಕುಚಿತ ಮನೋಭಾವನೆ ಬಿಟ್ಟು ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸಿ ಸೂಕ್ತ ಮಾರ್ಗದರ್ಶನ ಮತ್ತು ಚಿಕಿತ್ಸೆಗಳನ್ನು ಪಡೆದು ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು. ನಮ್ಮ ರೆಡ್‌ಕ್ರಾಸ್ ಸಂಸ್ಥೆ ಕೋರೋನಾ ಸಂದರ್ಭದಲ್ಲಿ ಜನರಿಗೆ ಅಗತ್ಯ ಔಷಧಿ, ಕಿಟ್‌ಗಳನ್ನು ನೀಡುವ ಮೂಲಕ ಸೇವೆ ಸಲ್ಲಿಸಿತ್ತು. ಮುಂದಿನ ದಿನಗಳಲ್ಲಿ ರೆಡ್‌ಕ್ರಾಸ್ ವತಿಯಿಂದ ತಿಪಟೂರಿನಲ್ಲಿ ಬ್ಲಡ್ ಬ್ಯಾಂಕ್ ತೆರೆಯುವ ಚಿಂತನೆ ಮಾಡಲಾಗಿದೆ ಎಂದರು. ನಿವೃತ್ತ ಪ್ರಾಂಶುಪಾಲ ಶಂಕರಪ್ಪ ಮಾತನಾಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಹಾಗೂ ನಗರ ಜನತೆಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದು ಶಿಬಿರಗಳಿಗೆ ಅವಶ್ಯಕತೆಯುಳ್ಳವರು ಭಾಗವಹಿಸುವ ಮೂಲಕ ಉತ್ತಮ ಆರೋಗ್ಯವನ್ನು ತಮ್ಮದಾಗಿಸಿಕೊಳ್ಳಬೇಕೆಂದರು. ಶಿಬಿರದಲ್ಲಿ ಹೃದಯ ರೋಗ, ಸಕ್ಕರೆ ಕಾಯಿಲೆ, ಬಿಪಿ, ಪ್ಯಾರಲಿಸಿಸ್, ಕಿಡ್ನಿ ಮತ್ತು ಲೀವರ್ ಸಮಸ್ಯೆ, ಮೂರ್ಛೆ ರೋಗ, ಥೈರಾಯ್ಡ್ ಸಮಸ್ಯೆ, ಅಸ್ತಮಾ, ಉಸಿರಾಟದ ತೊಂದರೆ, ಸಂಧಿವಾತ, ಮಂಡಿ ನೋವು, ರಕ್ತ ಹೀನತೆ, ಗ್ಯಾಸ್ಟ್ರಿಕ್, ನಿದ್ರಾಹೀನತೆ, ತಲೆನೋವು ಸಂಬಂಧಪಟ್ಟಂತೆ ಕಾಯಿಲೆಗಳಿಗೆ ತಪಾಸಣೆ ಮಾಡಿದರು. ಕಾರ್ಯಕ್ರಮದಲ್ಲಿ ಹೃದಯ ರೋಗ ಮತ್ತು ಸಕ್ಕರೆ ಕಾಯಿಲೆ ತಜ್ಞ ಡಾ. ಬಿ.ಟಿ. ಸಂತೋಷ, ಸ್ತ್ರೀರೋಗ ಮತ್ತು ಹೆರಿಗೆ ತಜ್ಞೆ ಡಾ. ಕೆ.ವಿ. ಉಷಾ, ಡಾ. ವಿನಯ್, ರೆಡ್ ಕ್ರಾಸ್ ಸಂಸ್ಥೆಯ ಡಾ. ರವಿ, ರೇಷ್ಮಾ, ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ್, ಉಪಾಧ್ಯಕ್ಷೆ ಪೂರ್ಣಿಮಾ, ರೇಷ್ಮಾ, ಅಣ್ಣಾಪುರದ ರಾಜಣ್ಣ, ಶಂಕರ್ ಮೂರ್ತಿ, ಭಾಸ್ಕರ್, ಶುಭ, ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಬಸವರಾಜು ಸೇರಿದಂತೆ ಶಿಬಿರದಲ್ಲಿ ಸುಮಾರು 200ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದರು. ಎಲ್ಲರಿಗೂ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು.;Resize=(128,128))
;Resize=(128,128))
;Resize=(128,128))