ಅತಿಯಾದ ಮೊಬೈಲ್‌ ಬಳಕೆಯಿಂದ ಆರೋಗ್ಯ ಹಾಳು: ಪ್ರಕಾಶ ತಾರಿಕೊಪ್ಪ

| Published : Dec 06 2024, 08:57 AM IST

ಸಾರಾಂಶ

ಆಡುವುದಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಎಲ್ಲ ವಯಸ್ಸಿನವರು ಆಡಬಹುದು.

ಯಲ್ಲಾಪುರ: ಇತ್ತೀಚಿನ ವಿದ್ಯಾರ್ಥಿಗಳು ಮೊಬೈಲ್ ಗೇಮ್‌ಗಳಲ್ಲಿ ತೊಡಗಿಸಿಕೊಂಡು ಆರೋಗ್ಯಕ್ಕೆ ತಾವೇ ಹಾನಿ ತಂದುಕೊಳ್ಳುತ್ತಿದ್ದಾರೆ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ ತಿಳಿಸಿದರು.ಡಿ. ೪ರಂದು ಪಟ್ಟಣದ ವಿಶ್ವದರ್ಶನ ಸಂಸ್ಥೆಯ ಸಭಾಭವನದಲ್ಲಿ ವಿಶ್ವದರ್ಶನ ಪದವಿಪೂರ್ವ ಕಾಲೇಜಿನ ವತಿಯಿಂದ ನಡೆದ ವಾರ್ಷಿಕ ಕ್ರೀಡಾಕೂಟ ಖೇಲೋತ್ಸವವನ್ನು ಉದ್ಘಾಟಿಸಿ, ಮಾತನಾಡಿದರು.

ಆಡಿ ಬೆಳೆದ ಮಕ್ಕಳು ಆರೋಗ್ಯವಂತರಾಗುತ್ತಾರೆ. ಜನಪದರು ಹಲವಾರು ಆಟದ ಮಾದರಿಗಳನ್ನು ರೂಪಿಸಿಕೊಂಡು ಶರೀರ ಮತ್ತು ಮನಸ್ಸನ್ನು ಸದೃಢವಾಗಿಸಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಪಾಲಕರು ಮತ್ತು ಮಕ್ಕಳು ಕ್ರೀಡಾಂಗಣದಿಂದ ದೂರವಾಗುತ್ತಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ನಾಯಕ್ ಮಾತನಾಡಿ, ಆಡುವುದಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಎಲ್ಲ ವಯಸ್ಸಿನವರು ಆಡಬಹುದು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ರೂಪಿಸುವುದಕ್ಕೆ ಮಹತ್ವ ನೀಡುತ್ತಿದೆ. ಪದವಿಪೂರ್ವ ವಿದ್ಯಾರ್ಥಿಗಳು ೨ ಗುಂಪುಗಳಾಗಿ ಕ್ರೀಡಾಂಗಣದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ದತ್ತಾತ್ರೆಯ ಗಾಂವ್ಕರ್, ಕಾಲೇಜು ಕ್ರೀಡಾ ಸಂಯೋಜಕರಾದ ರಮೇಶ್ ನಾಯಕ್, ಮಹೇಶ್ ನಾಯಕ್, ಮತ್ತು ಪ್ರಸನ್ನ ಹೆಗಡೆ ಹಾಗೂ ಇತರ ಉಪನ್ಯಾಸಕರು ಉಪಸ್ಥಿತರಿದ್ದರು. ಕಾವ್ಯ ಭಟ್ಟ ಪ್ರಾರ್ಥಿಸಿದರು. ಪ್ರಭು ಅಗಡಿ ಮತ್ತು ಗುರುರಾಜ ಭಟ್ಟ ನಿರ್ವಹಿಸಿದರು.

ಹೊನ್ನಾವರದಲ್ಲಿ ವಕೀಲರ ದಿನಾಚರಣೆ

ಹೊನ್ನಾವರ: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ವತಿಯಿಂದ ವಕೀಲರ ದಿನಾಚರಣೆ ಕಾರ್ಯಕ್ರಮ ಮಂಗಳವಾರ ನಡೆಯಿತು.

ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಬಿ.ಸಿ. ಮಾತನಾಡಿ, ಕಕ್ಷಿದಾರರು ನಮಗೆ ಅನ್ನ ಕೊಡುವ ದೇವರು. ಅವರಿಗೆ ಅನ್ಯಾಯವಾಗದಂತೆ ಸೇವೆ ನೀಡಬೇಕು ಎಂದರು.ವಕೀಲವೃತ್ತಿ ಪ್ರಾರಂಭದಲ್ಲಿ ಏನು ಅಪೇಕ್ಷೆ ಇರುವುದಿಲ್ಲ. ವೃತ್ತಿಯಲ್ಲಿ ಹಿರಿಯರಾದ ಮೇಲೆ ಸೇವೆಗೆ ತಕ್ಕ ಪ್ರತಿಫಲ ಅರಸಿ ಬರುತ್ತದೆ. ವೃತ್ತಿಯನ್ನು ಕೀಳರಿಮೆ ಬಿಟ್ಟು ಗೌರವಿಸಬೇಕು ಎಂದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಈರಣ್ಣ ಹುಣಸಿಕಟ್ಟಿ ಮಾತನಾಡಿ, ವಕೀಲರು ಅಥವಾ ನ್ಯಾಯಾಧೀಶರಾದ ಮಾತ್ರಕ್ಕೆ ಎಲ್ಲ ಕಲಿತಂತಲ್ಲ‌. ಪ್ರತಿದಿನ, ಪ್ರತಿಕ್ಷಣವೂ ಕಲಿಯುವುದಿರುತ್ತದೆ ಎಂದರು.ವೃತ್ತಿ ಜೀವನದಲ್ಲಿ 50 ವರ್ಷ ಪೂರೈಸಿದ ಹಿರಿಯ ವಕೀಲರಾದ ಆರ್.ಎಸ್‌. ಕಾಮತ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ವಕೀಲ ಆರ್.ಎನ್. ನಾಯ್ಕ ಉಪನ್ಯಾಸ ನೀಡಿದರು. ಸಭಾ ಕಾರ್ಯಕ್ರಮದ ನಂತರ ಸಂಗೀತಾ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ನಂತರ ವಕೀಲ ಮಿತ್ರರಿಂದ ಗದಾಯುದ್ಧ ಯಕ್ಷಗಾನ ಜನಮನ ರಂಜಿಸಿತು.