ಡೆಂಘೀ ನಿಯಂತ್ರಣಕ್ಕೆ ಆರೋಗ್ಯಇಲಾಖೆ ನೆರವು: ಮುಖ್ಯ ಆಯುಕ್ತ

| Published : Jul 03 2024, 01:18 AM IST

ಡೆಂಘೀ ನಿಯಂತ್ರಣಕ್ಕೆ ಆರೋಗ್ಯಇಲಾಖೆ ನೆರವು: ಮುಖ್ಯ ಆಯುಕ್ತ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಡೆಂಘೀ ಪ್ರಕರಣ ಹೆಚ್ಚಾಗುತ್ತಿದ್ದು, ನಿಯಂತ್ರಣ ಕಾರ್ಯಕ್ಕೆ ಆರೋಗ್ಯ ಇಲಾಖೆಯಿಂದ ನೆರವು ಪಡೆಯಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಡೆಂಘೀ ಪ್ರಕರಣ ಹೆಚ್ಚಾಗುತ್ತಿದ್ದು, ನಿಯಂತ್ರಣ ಕಾರ್ಯಕ್ಕೆ ಆರೋಗ್ಯ ಇಲಾಖೆಯಿಂದ ನೆರವು ಪಡೆಯಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಜೂನ್‌ ನಿಂದ ನವೆಂಬರ್‌ ವರೆಗೆ ಡೆಂಘೀ ಪ್ರಕರಣಗಳು ಕಾಣಿಸಿಕೊಳ್ಳಲಿವೆ. ಆಗಸ್ಟ್‌ ಮತ್ತು ಸೆಪ್ಟಂಬರ್‌ನಲ್ಲಿ ಅತಿ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಳ್ಳಲಿವೆ. ಆದರೆ, ಈ ಬಾರಿ ನಗರದಲ್ಲಿ ಮಳೆ ಬಂದು ಉಷ್ಣಾಂಶದಲ್ಲಿ ಇಳಿಕೆ ಉಂಟಾಗಿರುವುದರಿಂದ ಹೆಚ್ಚಿನ ಡೆಂಘೀ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ.

ಕಳೆದ ವರ್ಷ 11 ಸಾವಿರಕ್ಕೂ ಅಧಿಕ ಡೆಂಘೀ ಪ್ರಕರಣ ನಗರದಲ್ಲಿ ದೃಢಪಟ್ಟಿದ್ದವು. ಜೂನ್‌ ನಲ್ಲಿ 50 ಪ್ರಕರಣ ಮಾತ್ರ ಕಾಣಿಕೊಂಡಿದ್ದವು. ಆದರೆ, ಈಬಾರಿ ಜೂನ್‌ನಲ್ಲಿ 1 ಸಾವಿರ ಪ್ರಕರಣ ಕಾಣಿಸಿಕೊಂಡಿವೆ. ಮೊದಲ ಬಾರಿ ಜೂನ್‌ ನಲ್ಲಿ ಇಷ್ಟೊಂದು ಪ್ರಕರಣ ಕಾಣಿಸಿಕೊಂಡಿವೆ. ಮಳೆಗಾಲದ ಕೊನೆಯ ಅವಧಿಯಲ್ಲಿ ಪ್ರಕರಣ ಸಂಖ್ಯೆ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಅದಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಅದಕ್ಕೆ ಬೇಕಾದ ಸಹಕಾರವನ್ನು ಆರೋಗ್ಯ ಇಲಾಖೆಯಿಂದ ಪಡೆಯಲಾಗುವುದು ಎಂದರು.

ಡೆಂಘೀ ಕುರಿತು ಜಾಗೃತಿ ಮತ್ತು ಸರ್ವೇ ಕಾರ್ಯಕ್ಕೆ ಸ್ವಯಂ ಸೇವಕರನ್ನು ಪಡೆಯಲಾಗುತ್ತಿದೆ. ಜತೆಗೆ, ತಂಡಗಳ ಸಂಖ್ಯೆಯನ್ನು ಒಂದು ಸಾವಿರದಿಂದ 1500ಕ್ಕೆ ಹೆಚ್ಚಿಸಲಾಗಿದೆ. ಇದರಲ್ಲಿ ನರ್ಸಿಂಗ್‌ ಕಾಲೇಜು ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸುವ ಕೆಲಸಗಳನ್ನು ಆರೋಗ್ಯ ಇಲಾಖೆಯಿಂದ ಮಾಡಲಾಗುತ್ತಿದೆ. ಬಿಬಿಎಂಪಿಯಿಂದ ಮನೆ ಮನೆ ತೆರಳಿ ಕರ ಪತ್ರ ಹಂಚಿಕೆ ಮಾಡುವುದು. ಬಸ್‌ ನಿಲ್ದಾಣ ಸೇರಿದಂತೆ ಮೊದಲಾದ ಕಡೆ ಜಾಹೀರಾತು ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಜನರು ಸಹಕಾರ ನೀಡಿದರೆ, ಸುಲಭವಾಗಿ ತಡೆಗಟ್ಟಬಹುದಾಗಿದೆ ಎಂದರು.

ಲಕ್ಷಣ ಇರುವವರ ಪರೀಕ್ಷೆ

ಶೇ.90 ರಷ್ಟು ಡೆಂಘೀ ಪ್ರರಕಣಗಳು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗುತ್ತಿವೆ. ಬಿಬಿಎಂಪಿ ಆಸ್ಪತ್ರೆಯಲ್ಲಿ 6 ಸಾವಿರ ಡೆಂಘೀ ಪರೀಕ್ಷೆ ಕಿಟ್‌ ಇವೆ. ಡೆಂಘೀ ಲಕ್ಷಣ ಇರುವವರನ್ನು ಮಾತ್ರ ಬಿಬಿಎಂಪಿಯ ನಗರ ಪ್ರಾಥಮಿಕ ಆರೋಗ್ಯಕ್ಕೆ ಬಂದವರನ್ನು ಪರೀಕ್ಷೆ ಮಾಡಲಾಗುತ್ತಿದೆ ಎಂದು ತುಷಾರ್‌ ಗಿರಿನಾಥ್‌ ಮಾಹಿತಿ ನೀಡಿದರು.

ತೀವ್ರ ಸಮಸ್ಯೆ ಉಂಟಾದ ರೋಗಿಗಳಿಗೆ ನಗರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಬಿಳಿ ರಕ್ತದ ಕಣದ ವ್ಯವಸ್ಥೆ ಇದ್ದು, ಯಾವುದೇ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.