ಉತ್ತಮ ಆರೋಗ್ಯದಿಂದ ಐಶ್ವರ್ಯ ಸಾಧ್ಯ

| Published : Jul 03 2024, 01:17 AM IST

ಸಾರಾಂಶ

ವೈದ್ಯರ ದಿನಾಚರಣೆ ಅಂಗವಾಗಿ ಬಾಳೆಹೊನ್ನೂರಿನ ಹಿರಿಯ ವೈದ್ಯ ಕೆ.ಗೋಪಾಲಕೃಷ್ಣಭಟ್ ಅವರನ್ನು ಸನ್ಮಾನಿಸಲಾಯಿತು.

ವೈದ್ಯರ ದಿನಾಚರಣೆಯಲ್ಲಿ ಎಚ್‌.ಎಚ್‌. ಕೃಷ್ಣಮೂರ್ತಿ ಸಲಹೆ

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಮನುಷ್ಯನ ಜೀವನದಲ್ಲಿ ಉತ್ತಮ ಆರೋಗ್ಯವಿದ್ದರೆ ಮಾತ್ರ ಆಸ್ತಿ, ಅಂತಸ್ತು, ನೆಮ್ಮದಿ, ಐಶ್ವರ್ಯ ದೊರೆಯಲು ಸಾಧ್ಯವಿದೆ ಎಂದು ಚಿಕ್ಕಮಗಳೂರಿನ ವಕೀಲರ ಪತ್ತಿನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಎಚ್.ಎಚ್.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಮಲೆನಾಡಿನ ಒಳ್ಳೆಯ ಮನಸ್ಸುಗಳ ಒಕ್ಕೂಟ, ಸೀನಿಯರ್ ಚೇಂಬರ್ ಇಂಟರ್‌ನ್ಯಾಶನಲ್ ಸಂಸ್ಥೆಯ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಸೋಮವಾರ ಹಿರಿಯ ವೈದ್ಯ ಕೆ.ಗೋಪಾಲಕೃಷ್ಣ ಭಟ್ (ಡಾ.ಕೆ.ಜಿ.ಭಟ್) ಅವರನ್ನು ಸನ್ಮಾನಿಸಿ ಅವರು ಮಾತನಾಡಿದ ಅವರು, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದರು.

ನಮ್ಮ ದೇಶ ನಂಬಿಕೆ ಮೇಲೆ ನಿಂತಿದ್ದು, ನಂಬಿಕೆಯ ಆಧಾರದಲ್ಲಿ ನಾವುಗಳು ವೈದ್ಯರ ಬಳಿ ಚಿಕಿತ್ಸೆಗಾಗಿ ತೆರಳುತ್ತಿದ್ದೇವೆ. ಹೆಣ್ಣಿಗೆ ಕಾಲ್ಗುಣವಿರಬೇಕು, ವೈದ್ಯಗೆ ಕೈಗುಣವಿರಬೇಕು ಎಂಬ ಮಾತಿನಂತೆ, ವೈದ್ಯರ ಕೈಗುಣ ಉತ್ತಮವಾಗಿದ್ದರೆ ಅವರು ರೋಗಿಯನ್ನು ಮುಟ್ಟಿದರೆ ರೋಗಿಯ ಎಲ್ಲಾ ಅನಾರೋಗ್ಯಗಳು ದೂರಾಗಲಿವೆ.

ಈ ನಿಟ್ಟಿನಲ್ಲಿ ಪಟ್ಟಣದ ಹಿರಿಯ ವೈದ್ಯ ಕೆ.ಜಿ.ಭಟ್ ಅವರು ತಮ್ಮ ಕೈಗುಣದಿಂದಲೇ ಹಲವಾರು ರೋಗಿಗಳನ್ನು ಗುಣಪಡಿಸಿದ್ದಾರೆ. ಅವರು ಬಾಳೆಹೊನ್ನೂರಿನಲ್ಲಿ ಕಳೆದ ನಾಲ್ಕು ದಶಕಗಳಿಂದ ವೈದ್ಯಕೀಯ ಸೇವೆ ಸಲ್ಲಿಸಿದ್ದಾರೆ. ಪಟ್ಟಣದಲ್ಲಿರುವ ಎಲ್ಲಾ ವೈದ್ಯರು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದು, ಯಾವುದೇ ಕ್ಷಣದಲ್ಲಾದರೂ ರೋಗಿಗಳಿಗೆ ಸ್ಪಂದಿಸಿ ಮಾನವೀಯತೆ ಮೆರೆಯುತ್ತಿದ್ದಾರೆ. ವೈದ್ಯರು ಕಣ್ಣಿಗೆ ಕಾಣುವ ದೇವರೇ ಆಗಿದ್ದು ಕಷ್ಟಕಾಲದಲ್ಲಿ ನಮ್ಮೊಂದಿಗೆ ಇದ್ದಾರೆ ಎಂದರು.

ಈ ವೇಳೆ ಕಾರ್ಯಕ್ರಮ ಆಯೋಜಕ ಚೈತನ್ಯ ವೆಂಕಿ, ಸೀನಿಯರ್ ಚೇಂಬರ್ ಅಧ್ಯಕ್ಷ ಡಿ.ರಾಜೇಂದ್ರ, ಸುಭದ್ರ ಸಹಕಾರ ಸಂಘದ ನಿರ್ದೇಶಕ ಎಚ್.ಗೋಪಾಲ್, ಯಜ್ಞ ಪುರುಷಭಟ್, ನಿರ್ಮಾಪಕ ಮಂಜುನಾಥ್ ತುಪ್ಪೂರು, ಉಪನ್ಯಾಸಕ ಸೋಮೇಶ್‌ಗೌಡ, ಕೆ.ಆರ್.ಬೂದೇಶ್, ಕೆ.ಎಂ.ರಾಘವೇಂದ್ರ, ಕಸಾಪ ತಾಲೂಕು ಕಾರ್ಯದರ್ಶಿ ಸತೀಶ್ ಅರಳೀಕೊಪ್ಪ, ಅಂಚೆ ಪಾಲಕ ಬಿ.ಎಸ್.ಶ್ರೀನಿವಾಸ್, ಸುಮಾ, ಮೇಲ್ಪಾಲ್ ಆಯುಷ್ ವೈದ್ಯ ಗಣೇಶ್ ಭಟ್, ಪ್ರಸನ್ನಾ ಜಿ.ಭಟ್ ಮತ್ತಿತರರು ಇದ್ದರು.