ಸಾರಾಂಶ
ಕನ್ನಡಪ್ರಭವಾರ್ತೆ ತುರುವೇಕೆರೆ
ಮಕ್ಕಳ ಶಿಕ್ಷಣ ಮತ್ತು ಅವರ ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ತಿಳಿಸಿದರು.ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಾಲ್ಟ್ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸರ್ಕಾರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನೂರಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕೇವಲ ಭೋಧನೆಗಾಗಿ ಸೀಮಿತವಾಗದೇ, ಮಕ್ಕಳು ದೈಹಿಕವಾಗಿ ಸಧೃಢರಾದರೆ ಮಾತ್ರ ಶಿಕ್ಷಣದಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂಬುದನ್ನು ಮನಗಂಡು ಮಕ್ಕಳಿಗೆ ಬಿಸಿಯೂಟ, ಕ್ಷೀರಭಾಗ್ಯ, ಮೊಟ್ಟೆ, ಬಾಳೆಹಣ್ಣು ವಿತರಣೆ ಸೇರಿದಂತೆ ವಿವಿಧ ಪೌಷ್ಠಕಾಂಶಯುಕ್ತ ಅಹಾರವನ್ನು ಕೊಡುತ್ತಿದೆ. ಇದರಿಂದಾಗಿ ಮಕ್ಕಳು ದೈಹಿಕವಾಗಿ ಬಲಗೊಂಡು ಮಾನಸಿಕ ಸ್ಥಿತಿ ಉತ್ತಮಗೊಂಡು ಶೈಕ್ಷಣಿಕವಾಗಿ ಮುಂದುವರೆಯಲು ಸಾಧ್ಯ ಎಂಬುದನ್ನು ಗಮನಿಸಿದೆ ಎಂದರು.ಸರ್ಕಾರ ಇಂದು ರಾಜ್ಯದಾದ್ಯಂತ ಏಕಕಾಲದಲ್ಲಿ ರಾಗಿ ಮಾಲ್ಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ತಾಲೂಕಿನ ೨೯೭ ಸರ್ಕಾರಿ ಹಾಗು ಅನುದಾನಿತ ಶಾಲೆಗಳ ೧ ರಿಂದ ೧೦ ನೇ ತರಗತಿಯ ೧೦,೮೦೮ ಮಕ್ಕಳಿಗೆ ಪ್ರಯೋಜನವಾಗಲಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆ, ಕ್ಷೀರಭಾಗ್ಯ ಸೇರಿದಂತೆ ಸರ್ಕಾರ ನೀಡುವ ಎಲ್ಲಾ ಸೌಲಭ್ಯಗಳನ್ನು ಮಕ್ಕಳು ಪಡೆದುಕೊಳ್ಳಬೇಕು. ದೈಹಿಕವಾಗಿ ಸಧೃಢರಾಗಿ ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಸಲಹೆ ಇತ್ತರು.
ಕಾರ್ಯಕ್ರಮ ಉದ್ಘಾಟಿಸಿದ ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಮಾತನಾಡಿ, ಸರ್ಕಾರ ನೀಡುತ್ತಿರುವ ಎಲ್ಲ ಸೌಲಭ್ಯಗಳು ಅರ್ಹರಿಗೆ ತಲುಪಿದಾಗ ಮಾತ್ರ ಯೋಜನೆ ಯಶಸ್ವಿಯಾಗುತ್ತದೆ. ಸರ್ಕಾರಕ್ಕೆ ಹೆಸರು ಬರಲು ಕಾರಣವಾಗುತ್ತದೆ. ಸಂಬಂಧಿಸಿದ ನೌಕರರು ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಮಾಡಬೇಕು. ಮುಂದಿನ ಪ್ರಜೆಗಳನ್ನು ತಯಾರು ಮಾಡಬೇಕಾದ ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ. ಅದು ಶಿಕ್ಷಕರಿಂದ ಮಾತ್ರ ಸಾಧ್ಯವಿದೆ ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ. ರಂಗನಾಥ್ ಮಾತನಾಡಿ, ಜನರು ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್‌ಗೆ ಮಾರುಹೋಗಿ ಸಿರಿಧಾನ್ಯಗಳನ್ನು ಮರೆತು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ರಾಗಿ, ಜೋಳ, ಗೋಧಿ, ಆರಕ ಮುಂತಾದ ಸಿರಿಧಾನ್ಯಗಳಿಂದ ಆರೋಗ್ಯ ವೃದ್ದಿಯಾಗುತ್ತದೆ. ರೋಗಗಳನ್ನು ತಡೆಗಟ್ಟಲು ಆಹಾರ ಪದ್ಧತಿ ಅಗತ್ಯವಿದೆ. ಗುಣಮಟ್ಟದ ಆಹಾರದಿಂದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಅಕ್ಷರದಾಸೋಹ ಇಲಾಖಾ ಪ್ರಭಾರ ಸಹಾಯಕ ನಿರ್ದೇಶಕಿ ಸವಿತಾ, ಮುಖ್ಯ ಶಿಕ್ಷಕ ವೆಂಕಟೇಶ್, ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಶೇಖರ್, ಬೋರೇಗೌಡ, ಸಿಆರ್‌ಪಿಗಳಾದ ಲೋಕೇಶ್, ಚಿರಂಜೀವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.