ಸಾರಾಂಶ
ಗಿರೀಶ್ ಗರಗ
ಕನ್ನಡಪ್ರಭ ವಾರ್ತೆ ಬೆಂಗಳೂರುಬಿಬಿಎಂಪಿ ಬಜೆಟ್‌ಗೆ ಹಣಕಾಸು ವಿಭಾಗ ಈಗಾಗಲೇ ಸಿದ್ಧತೆ ನಡೆಸಿದ್ದು, ಬಿಬಿಎಂಪಿಯ ವಿವಿಧ ವಿಭಾಗಗಳ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಲಾಗುತ್ತಿದೆ. 2024-25ನೇ ಸಾಲಿನ ಬಜೆಟ್‌ನಲ್ಲಿ ಬಿಬಿಎಂಪಿ ಶಾಲೆ-ಕಾಲೇಜು ಮಕ್ಕಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ, ಆರೋಗ್ಯ ಮತ್ತು ಜೀವ ವಿಮೆ ನೀಡುವ ಯೋಜನೆ ಜಾರಿ ಕುರಿತು ಚಿಂತನೆ ನಡೆಸಲಾಗಿದೆ.
ಮಾರ್ಚ್ ಮೊದಲ ವಾರದಲ್ಲಿ ಬಿಬಿಎಂಪಿ ಬಜೆಟ್ ಮಂಡಿಸುವ ಕುರಿತು ಹಣಕಾಸು ವಿಭಾಗದ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಅದಕ್ಕಾಗಿ ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದ್ದು, 2024-25ನೇ ಸಾಲಿನಲ್ಲಿ ಬಿಬಿಎಂಪಿಗೆ ಬರಲಿರುವ ಆದಾಯ, ಅದಕ್ಕೆ ತಕ್ಕಂತೆ ಯೋಜನೆಗಳ ಅನುಷ್ಠಾನ, ವೆಚ್ಚಗಳ ಕುರಿತು ಲೆಕ್ಕ ಹಾಕಲಾಗುತ್ತಿದೆ. ಅದರ ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬರಲಿರುವ ಅನುದಾನಗಳ ಬಗ್ಗೆಯೂ ಚರ್ಚಿಸಲಾಗುತ್ತಿದ್ದು, ಅದಕ್ಕೆ ತಕ್ಕಂತೆ ಬಜೆಟ್ ಸಿದ್ಧಪಡಿಸಲು ಯೋಜಿಸಲಾಗುತ್ತಿದೆ. ಅದರ ಜತೆಜತೆಗೆ ಬಿಬಿಎಂಪಿಯ ವಿವಿಧ ವಿಭಾಗಗಳಿಂದ ಪಡೆಯಲಾಗುತ್ತಿರುವ ಯೋಜನೆಗಳ ಪಟ್ಟಿಯಲ್ಲಿ ಸೂಕ್ತವಾದದ್ದನ್ನು ಬಜೆಟ್‌ನಲ್ಲಿ ಸೇರಿಸಲಾಗುತ್ತದೆ. ಅದರಲ್ಲಿ ಈ ಬಾರಿ ಶಿಕ್ಷಣ ವಿಭಾಗದಿಂದ ಬಿಬಿಎಂಪಿಯ ಶಾಲಾ-ಕಾಲೇಜು ಮಕ್ಕಳಿಗೆ ಜೀವ ವಿಮೆ ಮತ್ತು ಆರೋಗ್ಯ ವಿಮೆ ಮಾಡಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ.ಯೋಜನೆ ವ್ಯಾಪ್ತಿಯಲ್ಲಿ 25 ಸಾವಿರ ಮಕ್ಕಳು:
ಬಿಬಿಎಂಪಿ ನಿರ್ವಹಣೆಯಲ್ಲಿ ಒಟ್ಟು 142 ಶಾಲೆಗಳು, 17 ಪಿಯು ಕಾಲೇಜುಗಳು, 2 ಸ್ನಾತಕೋತ್ತರ ಕಾಲೇಜುಗಳಿವೆ. ಆ ಶಾಲೆಗಳಲ್ಲಿ ಸದ್ಯ 25,397 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅವರೆಲ್ಲರ ಆರೋಗ್ಯ ಕಾಪಾಡುವ ದೃಷ್ಟಿಯಿಂದಾಗಿ ಜೀವ ವಿಮೆ ಮತ್ತು ಆರೋಗ್ಯ ವಿಮೆ ಮಾಡಿಸಲು ಬಿಬಿಎಂಪಿ ಚರ್ಚಿಸಿದೆ.ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ವಿದ್ಯಾರ್ಥಿಯು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ₹5 ಲಕ್ಷದವರೆಗೆ ಚಿಕಿತ್ಸೆ ಪಡೆಯುವ ಅವಕಾಶವಿದೆ. ಅದೇ ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ವಿದ್ಯಾರ್ಥಿಯು ಖಾಸಗಿ ಆಸ್ಪತ್ರೆಯಲ್ಲಿ ₹1.50 ಲಕ್ಷದವರೆಗೆ ಚಿಕಿತ್ಸೆ ಪಡೆಯುವುದು ಹಾಗೂ ಉಳಿದ ₹3.50 ಲಕ್ಷವನ್ನು ಬಿಬಿಎಂಪಿಯಿಂದ ಭರಿಸುವಂತೆ ಆರೋಗ್ಯ ವಿಮೆ ಮಾಡಿಸಬಹುದು ಎಂದು ಬಜೆಟ್ ಸಿದ್ಧತಾ ಸಭೆಯಲ್ಲಿ ಶಿಕ್ಷಣ ವಿಭಾಗದ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಾಲಿಕೆ ನೌಕರರಿಗೆ ನೀಡಿದ ಸೌಲಭ್ಯ ವಿದ್ಯಾರ್ಥಿಗಳಿಗೆ:ಒಂದು ವೇಳೆ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆ ಅನ್ವಯಿಸದಿದ್ದರೆ ಬಿಬಿಎಂಪಿ ಕಾಯಂ ನೌಕರರಿಗೆ ಇರುವ ಮ್ಯಾನೇಜ್ಡ್ ಹೆಲ್ತ್ ಕೇರ್ ಯೋಜನೆಯಂತೆ ಬಿಬಿಎಂಪಿ ಶಾಲೆ-ಕಾಲೇಜು ಮಕ್ಕಳಿಗೆ ಕ್ಯಾಶ್‌ಲೆಸ್ ಚಿಕಿತ್ಸಾ ವ್ಯವಸ್ಥೆ ಅನ್ವಯವಾಗುವಂತೆ ಮಾಡಬಹುದು. ಬಿಬಿಎಂಪಿ ನಿಗದಿ ಮಾಡಿರುವ ಆಸ್ಪತ್ರೆಗಳಲ್ಲಿ ವಿದ್ಯಾರ್ಥಿಗಳು ಚಿಕಿತ್ಸೆ ಪಡೆದರೆ, ಅದರ ಮೊತ್ತವನ್ನು ಬಿಬಿಎಂಪಿ ಪಾವತಿಸುವಂತೆ ಮಾಡಬಹುದು ಎಂದು ಅಧಿಕಾರಿಗಳು ಚರ್ಚಿಸಿದ್ದಾರೆ.
ಅದರ ಜತೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ನಾಲ್ಕು ಸರ್ಕಾರಿ ಸ್ವಾಮ್ಯದ ವಿಮಾ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ ಜೀವ ವಿಮೆ ಮಾಡಿಸುವ ಬಗ್ಗೆಯೂ ಚಿಂತನೆಯಿದೆ.ಸರ್ಕಾರದ ಒಪ್ಪಿಗೆ ನಂತರ ಘೋಷಣೆ:
ಬಿಬಿಎಂಪಿ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಜೀವ ಮತ್ತು ಆರೋಗ್ಯ ವಿಮೆ ನೀಡುವ ಕುರಿತು ಮೊದಲಿಗೆ ಸರ್ಕಾರದಿಂದ ಅನುಮತಿ ಪಡೆಯಲಾಗುತ್ತದೆ. ಒಂದು ವೇಳೆ ಅದಕ್ಕೆ ಸರ್ಕಾರ ಅನುಮತಿಸಿದರೆ ಬಿಬಿಎಂಪಿ ಬಜೆಟ್‌ನಲ್ಲಿ ಅದಕ್ಕೆ ಅನುದಾನ ನಿಗದಿ ಮಾಡಿ, ಘೋಷಿಸುವ ಕುರಿತು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.ಚರ್ಚೆ ನಡೆಯುತ್ತಿದೆ:
ಬಿಬಿಎಂಪಿ ಶಾಲೆ-ಕಾಲೇಜು ಮಕ್ಕಳಿಗೆ ಜೀವ ವಿಮೆ ಮತ್ತು ಆರೋಗ್ಯ ವಿಮೆ ನೀಡುವ ಕುರಿತು ಸಲಹೆಗಳು ಬಂದಿವೆ. ಅದನ್ನು ಬಜೆಟ್‌ನಲ್ಲಿ ಘೋಷಿಸುವ ಕುರಿತು ಚರ್ಚೆಗಳು ನಡೆಸಲಾಗುತ್ತಿದೆ. ಶೀಘ್ರದಲ್ಲಿ ಆ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು.-ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ.