ಜಿಲ್ಲೆಯ 4 ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ

| Published : Oct 06 2024, 01:30 AM IST

ಸಾರಾಂಶ

ಜಿಲ್ಲೆಯಲ್ಲಿ 4 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಬೇಡಿಕೆ ಬಂದಿದ್ದು, ಈ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನಕಲಿ ವೈದ್ಯರ ಹಾವಳಿಯನ್ನೂ ತಡೆಯಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿ ಒಟ್ಟು 11 ಕಾಮಗಾರಿಗಳ ಉದ್ಘಾಟನೆ, 3 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿದೆ. ಜಿಲ್ಲೆಯ ಗುಡಿಬಂಡೆಯಲ್ಲಿ ವಸತಿ ಗೃಹಗಳ ನಿರ್ಮಾಣಕ್ಕೆ ಒಂದೂವರೆ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಶಿಡ್ಲಘಟ್ಟದಲ್ಲಿಯೂ ವಸತಿಗೃಹ ನಿರ್ಮಾಣಕ್ಕೆ ಎರಡೂವರೆ ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಅಭಿವೃದ್ದಿಗೆ 1.80 ಕೋಟಿ ರುಪಾಯಿಗಳನ್ನು ಮಂಜೂರು ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್ ತಿಳಿಸಿದರು.ಶನಿವಾರ ತಾಲ್ಲೂಕಿನ ನಂದಿ ಮತ್ತು ನಾಯನಹಳ್ಳಿ ಗ್ರಾಮಗಳಲ್ಲಿ ಉನ್ನತೀಕರಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳನ್ನು ಉದ್ಘಾಟಿಸಿದ ನಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ನ ಹೆಚ್. ನರಸಿಂಹಯ್ಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಡೆಂಘೀ ನಿಯಂತ್ರಣ

ರಾಜ್ಯದಲ್ಲಿ ಡೆಂಘೀ ನಿಯಂತ್ರಣದಲ್ಲಿದ್ದು, ನಗರ ಮತ್ತು ಗ್ರಾಮೀಣ ಸ್ಥಳಿಯ ಸಂಸ್ಥೆಗಳ ಸಹಕಾರದೊಂದಿಗೆ ಡೆಂಘೀ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ವರ್ಷ ಡೆಂಗ್ಯೂ ಹರಡುವಿಕೆ ನಿಯಂತ್ರಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 28 ಉಪ ಕೇಂದ್ರಗಳನ್ನು ಹೊಸದಾಗಿ ಆರಂಭಿಸುವಂತೆ ಕೋರಿ ಜಿಲ್ಲಾಡಳಿತ ಬೇಡಿಕೆ ಸಲ್ಲಿಸಿದೆ. ಸದ್ಯ 12 ಉಪ ಕೇಂದ್ರಗಳಿಗೆ ನಿವೇಶನ ಸಿದ್ದವಿದೆ. ಮೊದಲ ಹಂತದಲ್ಲಿ 6 ಮತ್ತು 2 ನೇ ಹಂತದಲ್ಲಿ 6 ಉಪಕೇಂದ್ರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

4 ಆರೋಗ್ಯ ಕೇಂದ್ರ ಮೇಲ್ದರ್ಜೆಗೆ

ಜಿಲ್ಲೆಯಲ್ಲಿ 4 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಬೇಡಿಕೆ ಬಂದಿದ್ದು, ಈ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನಕಲಿ ವೈದ್ಯರ ಹಾವಳಿಯನ್ನೂ ತಡೆಯಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿಯೂ ಡೇ ಕೇರ್, ಕಿಮೋ ಥೆರಫಿ ಕೇಂದ್ರಗಳನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರನ್ನು ಒಂದು ತಿಂಗಳಲ್ಲಿ ಭರ್ತಿ ಮಾಡಲಾಗುವುದು. ಈ ಮೊದಲು ವೈದ್ಯರಿಗೆ 45 ಸಾವಿರ ಮಾಸಿಕ ವೇತನ ನೀಡುತ್ತಿದ್ದೇವು, ಈಗ 62 ಸಾವಿರ ರು.ಗಳನ್ನು ನೀಡಲಾಗುತ್ತಿದೆ. ತಜ್ಞ ವೈದ್ಯರಿಗೆ 1.10 ಲಕ್ಷದಿಂದ 2 ಲಕ್ಷದವರೆಗೂ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ನುರಿತ ತಜ್ಞರು ತಾವು ಪರಿಣಿತಿ ಪಡೆದ ವಿಭಾಗಗಳಲ್ಲೆ ಚಿಕಿತ್ಸಕರಾಗಿರುವಂತೆ ಅನುವು ಮಾಡಿಕೊಡಲಾಗಿದೆ ಎಂದರು.

ಕ್ಯಾನ್ಸರ್‌ ಚಿಕಿತ್ಸೆಗೆ ವ್ಯವಸ್ಥೆ

ಅದೇರೀತಿ ಮೂಳೆ, ಮೊಳಕಾಲು ಚಿಪ್ಪು ಬದಲಿ ಚಿಕಿತ್ಸೆ, ಕ್ಯಾನ್ಸರ್ ಗೆ ನೀಡುವ ಕಿಮೋ ತೆರಫಿ ಚಿಕಿತ್ಸೆಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡುವುಕ್ಕೆ ಸಿದ್ದತೆ ಮಾಡಿದ್ದೇವೆ ಒಂದು ತಿಂಗಳಲ್ಲಿ ಎಲ್ಲಾ ವ್ಯೆವಸ್ಥೆಯನ್ನು ಮಾಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್, ಶಾಸಕರಾದ ಪ್ರದೀಪ್ ಈಶ್ವರ್, ಕೆ.ಹೆಚ್.ಪುಟ್ಟಸ್ವಾಮಿಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಪ್ರಕಾಶ್ ಜಿ.ಟಿ ನಿಟ್ಟಾಲಿ,ಪೋಲಿಸ್ ವರಿಷ್ಠಾಧಿಖಾರಿ ಕುಶಾಲ್ ಚೌಕ್ಸೆ, ಜಿಲ್ಲಾ ಆರೋಗ್ಯಾಧಿಕಾರಿ ಎಸ್.ಎಸ್ ಮಹೇಶ್ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಮಂಜುಳಾ ದೇವಿ, ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಜಿ.ಹರೀಶ್, ಆರೋಗ್ಯ ಶಿಕ್ಷಣಾಧಿಕಾರಿ ಸುಧಾ, ಮೀನಾ, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ರಾಜಕೀಯ ಪ್ರತಿನಿಧಿಗಳು ಮತ್ತಿತರರು ಇದ್ದರು.