ನೈಸರ್ಗಿಕ ಹಾಗೂ ಸಾವಯವ ಕೃಷಿಯ ಬೆಳೆ, ಆಹಾರಗಳು, ಹಣ್ಣುಗಳು ಮನುಷ್ಯನ ಆರೋಗ್ಯ ವೃದ್ಧಿಸುತ್ತವೆ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
- ಹೊನ್ನಾಳಿಯಲ್ಲಿ ಐದು ದಿನಗಳ ಹಲಸು, ಆಹಾರ ಮೇಳ ಕಾರ್ಯಕ್ರಮ ಉದ್ಘಾಟನೆ
- - -ಕನ್ನಡಪ್ರಭಾ ವಾರ್ತೆ ಹೊನ್ನಾಳಿ
ನೈಸರ್ಗಿಕ ಹಾಗೂ ಸಾವಯವ ಕೃಷಿಯ ಬೆಳೆ, ಆಹಾರಗಳು, ಹಣ್ಣುಗಳು ಮನುಷ್ಯನ ಆರೋಗ್ಯ ವೃದ್ಧಿಸುತ್ತವೆ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಬುಧವಾರ ಹಿರೇಕಲ್ಮಠದಲ್ಲಿ ಶ್ರೀ ಚನ್ನಪ್ಪ ಸ್ವಾಮಿ ಜನಕಲ್ಯಾಣ ಸೇವಾ ಟ್ರಸ್ಟ್, ಶ್ರೀ ಚನ್ನಪ್ಪ ಸ್ವಾಮಿ ಸೌಹಾರ್ದ ಸಹಕಾರಿ ಸಂಘದ ಸಹಯೋಗದಲ್ಲಿ ಆದಿಶಂಕರ ಈವೆಂಟ್ ಕ್ರಿಯೇಷನ್ಸ್ ವತಿಯಿಂದ ಜುಲೈ 29ರಿಂದ ಆಗಸ್ಟ್ 2 ರವರೆಗೆ 5 ದಿನಗಳ ಕಾಲ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಏರ್ಪಡಿಸಿರುವ ಹಲಸು ಹಾಗೂ ಆಹಾರ ಮೇಳ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿಶೇಷವಾಗಿ ಭತ್ತ, ಮೆಕ್ಕೆಜೋಳ ಬೆಳೆಗಳಂತೆ ಹಣ್ಣುಗಳ ಮರ, ಗಿಡಗಳಿಗೆ ಹೆಚ್ಚು ನೀರಿನ ಅವಶ್ಯಕತೆ ಇರುವುದಿಲ್ಲ. ಮನೆ ಆವರಣ, ರಸ್ತೆಗಳು, ಜಮೀನುಗಳಲ್ಲಿ ವಿವಿಧ ಆರೋಗ್ಯಪೂರ್ಣ ಹಣ್ಣುಗಳನ್ನು ಬೆಳೆಯಬಹುದಾಗಿದೆ. ಹಣ್ಣು, ಹೂವುಗಳ ಕೃಷಿಯು ಬೆಳೆಗಾರನಿಗೆ ಆರ್ಥಿಕ ಪ್ರಗತಿಗೆ ಸಹಕಾರಿಯಾಗುತ್ತವೆ ಎಂದು ಹೇಳಿದರು.ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಪುತ್ರ, ಶಿವಮೊಗ್ಗ ಜಿ.ಪಂ. ಮಾಜಿ ಸದಸ್ಯ ಕಾಂತೇಶ್ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಪಿಜ್ಜಾ, ಬರ್ಗರ್ ಬಿಡಿ, ಪ್ರಕೃತಿದತ್ತ ಹಣ್ಣು, ಆಹಾರಗಳನ್ನು ಸೇವಿಸಬೇಕು. ಹಿಂದಿನ ಕಾಲದಲ್ಲಿ ಜನರು ಕೇವಲ ಮನೆಯಲ್ಲಿ ಮಾಡಿದ ಆರೋಗ್ಯಯುತ, ಸತ್ವಯುತ ಆಹಾರಗಳ ಮಾತ್ರ ಸೇವಿಸುತ್ತಿದ್ದರು. ಈ ಕಾರಣಕ್ಕೆ ಅವರು ನೂರಾರು ವರ್ಷ ಅರೋಗ್ಯವಾಗಿ ಬದುಕಿ ಬಾಳಿದ್ದಾರೆ ಎಂದರು.
ಮುಖಂಡರಾದ ಎಚ್.ಎ. ಉಮಾಪತಿ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರ ಎಂ.ಪಿ.ರಮೇಶ್, ಕಾರ್ಯಕ್ರಮದ ಆಯೋಜಕರಾದ ವೀರೇಶ್ ಶೆಟ್ಟರ್ ಮಾತನಾಡಿದರು.ಮೇಳದಲ್ಲಿ ಹಲಸಿನ ಹಣ್ಣುಗಳು, ಅದರ ವಿವಿಧ ಖಾದ್ಯಗಳು ಮಾತ್ರವಲ್ಲದೆ ವಿವಿಧ ಬಗೆಯ ಹಣ್ಣಿನ ಹಾಗೂ ಹೂವುಗಳ ಗಿಡಗಳು, ದೇಶಿಯ ಆಹಾರ ಪದಾರ್ಥಗಳು, ರೇಷ್ಮೆ ಸೀರೆಗಳು, ನಿತ್ಯಬಳಕೆ ವಸ್ತುಗಳು, ಸಾವಯವ, ಸಿರಿಧ್ಯಾನಗಳ ಪ್ರದರ್ಶನ, ಮಾರಾಟ ವ್ಯವಸ್ಥೆ ಮಾಡಲಾಗಿತ್ತು,
ಶ್ರೀ ಚನ್ನಪ್ಪಸ್ವಾಮಿ ಸೌಹಾರ್ದ ಸಹಕಾರಿ ಬ್ಯಾಂಕಿನ ಸುರೇಶ್ ಹೊಸಕೇರಿ, ಕತ್ತಿಗೆ ನಾಗರಾಜ್, ವಿದ್ಯಾ ಟಿ. ಸಂತೋಷ್, ಶ್ರೀಮಠದ ವ್ಯವಸ್ಥಾಪಕ ಎಂ.ಪಿ.ಎಂ. ಚನ್ನಬಸಯ್ಯ, ಬಿ.ಎಲ್.ಕುಮಾರ ಸ್ವಾಮಿ, ಆಟೋ ಹಳದಜಪ್ಪ, ರೂಪ ರೂಪದರ್ಶಿ ಮಹಿಳಾ ಸಂಘದ ಎ.ಜಿ.ಹೇಮಲತ, ಸುನಂದ ವಿದೂಷಿ ಪ್ರತಿಮಾ ಸೇರಿದಂತೆ ಶ್ರೀಮಠದ ಭಕ್ತರು ಇದ್ದರು.- - -
-29ಎಚ್.,ಎಲ್.ಐ1: ಹಲಸು, ಆಹಾರ ಮೇಳ ಕಾರ್ಯಕ್ರಮವನ್ನು ಶಿವಮೊಗ್ಗದ ಜಿ.ಪಂ. ಮಾಜಿ ಸದಸ್ಯ ಕಾಂತೇಶ್ ಉದ್ಘಾಟಿಸಿದರು. ಹಿರೇಕಲ್ಮಠದ ಸ್ವಾಮೀಜಿ ಮತ್ತಿತರ ಗಣ್ಯರು ಇದ್ದರು.