ಸಾರಾಂಶ
ಕ್ರೀಡೆಯ ಮಹತ್ವ ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ ಎಂದು ವೈದ್ಯಾಧಿಕಾರಿ ಡಾ. ಸುಜಯ್ ಹೇಳಿದರು. ಸ್ಪೋರ್ಟ್ಸ್ ಫಿಯೆಸ್ಟಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕ್ರೀಡೆಯ ಮಹತ್ವ ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ. ಪ್ರತಿನಿತ್ಯ ಕ್ರೀಡೆ ಹಾಗೂ ದೈಹಿಕ ಕಸರತ್ತುಗಳ ಮೂಲಕ ಸದೃಢರಾಗಲು ಸಾಧ್ಯ ಎಂದು ಕುಶಾಲನಗರ ಬಿ.ಎಸ್.ಆರ್.ಹೆಲ್ತ್ ಕೇರ್ ನ ವೈದ್ಯಾಧಿಕಾರಿ ಡಾ.ಸುಜಯ್ ತಿಳಿಸಿದರು.ಕುಶಾಲನಗರದ ವಿವೇಕಾನಂದ ಪಿ.ಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ಪೋರ್ಟ್ಸ್ ಫಿಯೆಸ್ಟಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ನಿರಂತರವಾಗಿ ದೈಹಿಕ ಚಟುವಟಿಕೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಇದರಿಂದ ಆರೋಗ್ಯ ವೃದ್ದಿಸುವುದರೊಂದಿಗೆ ಭವಿಷ್ಯದಲ್ಲೂ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ. ಫಲಿತಾಂಶಕ್ಕಿಂತ ಕ್ರೀಡಾ ಸ್ಪೂರ್ತಿಯಿಂದ ಭಾಗಿಯಾಗುವುದು ಮುಖ್ಯವಾಗಿದೆ ಎಂದು ತಿಳಿಸಿ ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ ಮಾತನಾಡಿ,
ಕೊರೊನ ಸಂದರ್ಭ ಯಾವುದಕ್ಕೂ ಅಂಜದೆ ಸುಜಯ್ ಅವರು ಸ್ವಯಂಪ್ರೇರಿತರಾಗಿ ಮುಂದೆ ಬಂದು ರೋಗಿಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದು ಶ್ಲಾಘನೀಯ ವಿಚಾರ. ಹುಟ್ಟಿದ ಊರಿಗೆ ಸೇವೆ ಸಲ್ಲಿಸಬೇಕೆಂಬ ಸದುದ್ದೇಶದಿಂದ ಇಲ್ಲಿಯೇ ನೆಲೆಸಿ ತಮ್ಮ ವೈದ್ಯಕೀಯ ವೃತ್ತಿ ಮುಂದುವರೆಸಿರುವ ಸುಜಯ್ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಕೂಡ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗುವಂತೆ ಕರೆ ನೀಡಿದರು.ಕಾಲೇಜಿನ ಪ್ರಾಂಶುಪಾಲೆ ಕ್ಲಾರಾ ರೇಷ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಲೇಜು ವಿದ್ಯಾರ್ಥಿನಿಯರ ತಂಡದಿಂದ ಆಕರ್ಷಕ ಪಿರಮಿಡ್ ಸ್ವಾಗತ ನೃತ್ಯ ಎಲ್ಲರ ಗಮನ ಸೆಳೆಯಿತು.ಈ ಸಂದರ್ಭ ಮಹಾತ್ಮಾಗಾಂಧಿ ಪದವಿ ಕಾಲೇಜಿನ ಪ್ರಾಂಶುಪಾಲೆ ಲಿಖಿತಾ, ಸಂಸ್ಥೆ ಪ್ರಮುಖರಾದ ಮಹೇಶ್, ನಂಜಪ್ಪ ಸೇರಿದಂತೆ ಉಪನ್ಯಾಸಕ ವೃಂದದವರು ಹಾಜರಿದ್ದರು.
ಇದೇ ಸಂದರ್ಭ ಡಾ.ಸುಜಯ್ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ವಿದ್ಯಾರ್ಥಿಗಳಿಗೆ ಕ್ರಿಕೆಟ್, ಹಗ್ಗಜಗ್ಗಾಟ, ಹ್ಯಾಂಡ್ ಬಾಲ್, ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ.