ಬೇಸಿಗೆಯಲ್ಲಿ ಆರೋಗ್ಯ ಸುರಕ್ಷತೆ ಬಹುಮುಖ್ಯ

| Published : May 02 2024, 01:31 AM IST / Updated: May 02 2024, 11:21 AM IST

ಸಾರಾಂಶ

 ಬೇಸಿಗೆ ದಿನಗಳಲ್ಲಿ ಹೊರಗಿನ ಬಿಸಿಯ ವಾತಾವರಣಕ್ಕೆ ನಮ್ಮ ದೇಹದ ಮುಕ್ಕಾಲು ಭಾಗದಷ್ಟು ನೀರಿನ ಅಂಶ ಮಾಯವಾಗುತ್ತದೆ 

 ಮುಧೋಳ  : ಬೇಸಿಗೆ ದಿನಗಳಲ್ಲಿ ಹೊರಗಿನ ಬಿಸಿಯ ವಾತಾವರಣಕ್ಕೆ ನಮ್ಮ ದೇಹದ ಮುಕ್ಕಾಲು ಭಾಗದಷ್ಟು ನೀರಿನ ಅಂಶ ಮಾಯವಾಗುತ್ತದೆ, ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಈ ಸಮಯದಲ್ಲಿ ನಮ್ಮ ದೇಹಕ್ಕೆ ಹೆಚ್ಚು ದ್ರವ ಪದಾರ್ಥ ಸೇವಿಸುವುದು ಅಗತ್ಯವಾಗಿದೆ ಎಂದು ಮುಧೋಳ ಸರ್ಕಾರಿ (ಸಾರ್ವಜನಿಕ) ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಅಶೋಕ ಸೂರ್ಯವಂಶಿ ಹೇಳಿದರು.

ಮುಧೋಳ ಎಸ್.ಆರ್. ಕಂಠಿ ಕಾಲೇಜಿನ ಐಕ್ಯೂಎಸಿ ಹಾಗೂ ಕ್ರೈಟೇರಿಯಾ-7ರ ಅಡಿಯಲ್ಲಿ ನಗರದ ಸರ್ಕಾರಿ (ಸಾರ್ವಜನಿಕ) ಆಸ್ಪತ್ರೆಯ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆರೋಗ್ಯ ಕಾಳಜಿ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಯಥೇಚ್ಛವಾಗಿ ನೀರು, ಹಣ್ಣಿನ ರಸ, ಒಆರ್‌ ಎಸ್‌ ಇತ್ಯಾದಿಗಳು ನಮ್ಮ ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡಿ ನಮ್ಮ ದೇಹದ ಪೌಷ್ಟಿಕ ಸತ್ವಗಳ ಸಂಚಾರ ವೃದ್ಧಿಸುತ್ತವೆ. ಹಣ್ಣುಗಳು ಬೇಸಿಗೆ ಸಮಯಕ್ಕೆ ಹೇಳಿ ಮಾಡಿಸಿದ ಆಹಾರ ಪದಾರ್ಥಗಳಾಗಿವೆ, ಹಣ್ಣುಗಳನ್ನು ಹೆಚ್ಚೆಚ್ಚು ಸೇವಿಸುವುದರಿಂದ ದೇಹದಲ್ಲಿ ನೀರಿನ ಅಂಶ ತಾನಾಗಿಯೇ ಸಮತೋಲನಗೊಳ್ಳುತ್ತದೆ. ಹಾಗಾಗಿ ನಿಮಗೆ ಸುಲಭವಾಗಿ ಸಿಗುವ ಕಲ್ಲಂಗಡಿ, ದ್ರಾಕ್ಷಿ, ಪೈನಾಪಲ್, ಮಾವು, ಏಪ್ರಿಕಾಟ್, ಗೂಸ್ಬೇರ್ರಿ, ಒಯ್ಸರ್‌ ಹೀಗೆ ಹೆಚ್ಚಿನ ದ್ರವ ಅಂಶ ಹೊಂದಿರುವ ಹಣ್ಣುಗಳನ್ನು ಮಧ್ಯಾಹ್ನ ಊಟ ಮಾಡಿದ ನಂತರ ಸೇವಿಸುವ ಅಭ್ಯಾಸ ಇಟ್ಟುಕೊಳ್ಳಬೇಕು, ಬೇಸಿಗೆ ಸಮಯದಲ್ಲಿ ತುಂಬಾ ತೆಳ್ಳಗಿರುವ ಬಟ್ಟೆ ಧರಿಸಬೇಕು, ಕರಿದ ಮಸಾಲೆ ಪದಾರ್ಥ ಒಳಗೊಂಡ ಆಹಾರ ಸೇವಿಸದೇ, ಪ್ರೊಟೀನ್ ಹೆಚ್ಚಾಗಿರುವ ಆಹಾರಗಳು ಅಂದರೆ ಟೊಮ್ಯಾಟೊ ಸಲಾಡ್, ಸೌತೆಕಾಯಿ ಸಲಾಡ್, ಪಾಲಕ್ ಸಲಾಡ್, ಹುರುಳಿ ಕಾಯಿ ಮತ್ತು ಇನ್ನಿತರ ತರಕಾರಿಗಳನ್ನು ಒಳಗೊಂಡ ತಿಳಿಸಾರು ಅಥವಾ ನಮಗಿಷ್ಟವಾಗುವ ಸುಲಭವಾಗಿ ಜೀರ್ಣವಾಗುವಂತಹ ಅಡುಗೆಗಳು ದಿನನಿತ್ಯದ ಆಹಾರದಲ್ಲಿರಲಿ. ಇದರಿಂದ ನಿಮಗೆ ಬೇಸಿಗೆಯ ಸಮಯದಲ್ಲಿ ಅಜೀರ್ಣತೆಯ ಸಮಸ್ಯೆ ದೂರವಾಗುತ್ತದೆ. ಜೊತೆಗೆ ನಿಮ್ಮ ದೇಹದ ತೂಕ ಕೂಡ ನಿರ್ವಹಣೆ ಆಗುತ್ತದೆ ಎಂದು ಹೇಳಿದರು.

ಅತಿಥಿ ಉಪನ್ಯಾಸನ ನೀಡಿದ ಡಾ.ಶ್ರೇಣಿ ಸುನೀಲ ನಾವಲಗಿ ಮಾತನಾಡಿ, ಬೇಸಿಗೆ ಸಮಯದಲ್ಲಿ ನಮ್ಮ ದೇಹದ ಚರ್ಮವನ್ನು ಬಿಸಿಲಿನಿಂದ ಕಾಪಾಡಿಕೊಳ್ಳಲು ಮನೆಯಿಂದ ಹೊರಹೋಗುವ ಸಮಯದಲ್ಲಿ ಸನ್ ಸ್ಕ್ರೀನ್ ಅಪ್ಲೈ ಮಾಡಬೇಕು, ಬೇಸಿಗೆಯ ಬಿರು ಬಿಸಿಲಿಗೆ ಕೂಲ್-ಕೂಲ್ ನ್ಯಾಚುರಲ್ ಫೇಸ್ ಪ್ಯಾಕ್‌ಗಳನ್ನು ಬಳಸಬೇಕು. ಸೂರ್ಯನಿಂದ ಹೊರಹೊಮ್ಮುವ ಹಾನಿಕಾರಕ ವಿಕಿರಣಗಳು ಕೇವಲ ನಿಮ್ಮ ದೇಹದ ಚರ್ಮದ ಮೇಲೆ ಮಾತ್ರ ಪ್ರಭಾವ ಬೀರುವುದಿಲ್ಲ, ಬದಲಿಗೆ ಕಣ್ಣುಗಳಿಗೂ ಸಹ ಹಾನಿ ಉಂಟು ಮಾಡುತ್ತವೆ. ಆದ್ದರಿಂದ ನಿಮ್ಮ ಕಣ್ಣುಗಳ ರಕ್ಷಣೆ ಹಾಗೂ ಜವಾಬ್ದಾರಿ ನಿಮ್ಮದು. ಮನೆಯಿಂದ ಹೊರ ನಡೆದ ಸಂದರ್ಭದಲ್ಲಿ ಸನ್ ಗ್ಲಾಸ್ ಹಾಕಿಕೊಳ್ಳಬೇಕು ಎಂದು ಹೇಳಿದರು.

ಎಸ್.ಆರ್. ಕಂಠಿ ಕಾಲೇಜಿನ ಪ್ರಾಚಾರ್ಯ ಪ್ರೊ.ಮಲ್ಲಣ್ಣ ಜಿಗಬಡ್ಡಿ ಅಧ್ಯಕ್ಷತೆ ವಹಿಸಿ ಸಾಂದರ್ಭಿಕವಾಗಿ ಮಾತನಾಡಿದರು, ಐಕ್ಯೂಎಸಿ ಕ್ರೈಟೇರಿಯಾ-7ರ ಬೆಸ್ಟ್ ಪ್ರ್ಯಾಕ್ಟಿಸಿಸ್ ಸಂಯೋಜನಾಧಿಕಾರಿ ಪ್ರೊ.ಎ.ಎಚ್. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೊ.ವಿಶ್ವನಾಥ ಮುನವಳ್ಳಿ ವೇದಿಕೆ ಮೇಲಿದ್ದರು.

ಪ್ರೊ.ಬನಶಂಕರಿ ಹಲಸಗಿ ಸ್ವಾಗತಿಸಿದರು. ಪ್ರೊ.ಶ್ವೇತಾ ಶಿರಬಡಗಿ ನಿರೂಪಿಸಿದರು. ಪ್ರೊ.ಕೆ.ಕೆ. ಕಿತ್ತೂರ ವಂದಿಸಿದರು.

ಸರ್ಕಾರಿ (ಸಾರ್ವಜನಿಕ) ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ಆಸ್ಪತ್ರೆಯ ರೋಗಿಗಳು, ಎಸ್.ಆರ್. ಕಂಠಿ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.