ಸಾರಾಂಶ
ತಾನು ಈಗಾಗಲೇ ಕಲಬುರಗಿ, ತುಮಕೂರು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಲೋಕಾಯುಕ್ತ ನ್ಯಾಯಮೂರ್ತಿಗಳು 15 ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಪರಿಶೀಲನೆ ನಡೆಸಿದ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಅಗತ್ಯ ಬಿದ್ದರೆ ಸ್ವಯಂ ಪ್ರೇರಿತ ಪ್ರಕರಣವನ್ನೂ ದಾಖಲಿಸಲಾಗುವುದು ಎಂದು ಬಿ. ವೀರಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ಹೊರವಲಯದಲ್ಲಿರುವ ಪಚ್ಚನಾಡಿ ಡಂಪಿಂಗ್ ಯಾರ್ಡ್‌ನ ವಿಷಕಾರಿ ಅಂಶ ಸುತ್ತಲಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಮಕ್ಕಳು ಸೇರಿದಂತೆ ಅಲ್ಲಿನ ಜನ- ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸುವಂತೆ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಪಚ್ಚನಾಡಿ ತ್ಯಾಜ್ಯ ಸಂಸ್ಕರಣ ಘಟಕ ಮತ್ತು ಪಾರಂಪರಿಕ ತ್ಯಾಜ್ಯ ಎಸೆದಿರುವ ಪ್ರದೇಶಕ್ಕೆ ಭಾನುವಾರ ಬೆಳಗ್ಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು, ಪರಿಶೀಲನೆ ನಡೆಸಿ ಪೂರಕ ಮಾಹಿತಿ ಪಡೆದರು.ಮಳೆಗಾಲದಲ್ಲಿ ತ್ಯಾಜ್ಯ ನೀರು ಹರಿದು ಜಲಮೂಲಗಳು ಕಲುಷಿತವಾಗುವುದರೊಂದಿಗೆ ತ್ಯಾಜ್ಯದಲ್ಲಿರುವ ವಿಷಕಾರಿ ಅಂಶ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ವೈಜ್ಞಾನಿಕ ಅಧ್ಯಯನ ನಡೆಸಬೇಕು ಎಂದು ಸೂಚಿಸಿದರು.
ತ್ಯಾಜ್ಯ ಘಟಕ ಸುತ್ತಮುತ್ತಲಿನ ಜನವಸತಿ ಪ್ರದೇಶಗಳ ಬಾವಿ ನೀರನ್ನು ಪರೀಕ್ಷಿಸಬೇಕು. ಆಸುಪಾಸಿನ ಪ್ರದೇಶದಲ್ಲಿ ಬೆಳೆಯುತ್ತಿರುವ ತರಕಾರಿ, ಹೈನುಗಾರಿಕಾ ಹಾಲನ್ನು ಪರೀಕ್ಷಿಸಬೇಕು. ಘಟಕದ ತ್ಯಾಜ್ಯ ನೀರು ಯಾವುದೇ ಕಾರಣಕ್ಕೂ ಅಕ್ಕಪಕ್ಕದ ಪ್ರದೇಶಗಳಿಗೆ ಹರಿಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಉಪಲೋಕಾಯುಕ್ತರು ನಿರ್ದೇಶಿಸಿದರು.ಪಾರಂಪರಿಕ ತ್ಯಾಜ್ಯ ರಾಶಿ- ಆತಂಕ: ವರ್ಷಗಳಿಂದ ರಾಶಿ ಹಾಕಲ್ಪಟ್ಟ ತ್ಯಾಜ್ಯ ಪ್ರದೇಶಕ್ಕೂ ಉಪಲೋಕಾಯುಕ್ತರು ಭೇಟಿ ನೀಡಿದರು. ತ್ಯಾಜ್ಯವನ್ನು ಪರ್ವತದ ರೀತಿ ರಾಶಿ ಹಾಕಿದ್ದೀರಿ. ಇದನ್ನು ಸಂಸ್ಕರಿಸುವ ಪ್ರಕ್ರಿಯೆ ಸಮರೋಪಾದಿಯಲ್ಲಿ ನಡೆಸಿ ಸಂಪೂರ್ಣ ಕಸ ಮುಕ್ತಗೊಳಿಸಬೇಕು. ಜನರು, ಪರಿಸರಕ್ಕೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ತ್ಯಾಜ್ಯ ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಿದರು.ಸಂಪೂರ್ಣ ವೈಜ್ಞಾನಿಕವಾಗಿ ತ್ಯಾಜ್ಯ ಘಟಕವನ್ನು ನಿರ್ವಹಿಸಬೇಕು. ಪ್ರಾಣಿಗಳು ತ್ಯಾಜ್ಯವನ್ನು ತಿಂದರೆ ಹಿಂಸಾತ್ಮಕವಾಗಿ ವರ್ತಿಸುವ ಸಾಧ್ಯತೆ ಇದೆ. ಇದನ್ನು ತಡೆಯಬೇಕು ಎಂದು ಸೂಚಿಸಿದರು.ಸರ್ಕಾರಕ್ಕೆ ವರದಿ: ತಾನು ಈಗಾಗಲೇ ಕಲಬುರಗಿ, ತುಮಕೂರು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಲೋಕಾಯುಕ್ತ ನ್ಯಾಯಮೂರ್ತಿಗಳು 15 ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಪರಿಶೀಲನೆ ನಡೆಸಿದ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಅಗತ್ಯ ಬಿದ್ದರೆ ಸ್ವಯಂ ಪ್ರೇರಿತ ಪ್ರಕರಣವನ್ನೂ ದಾಖಲಿಸಲಾಗುವುದು ಎಂದು ಬಿ. ವೀರಪ್ಪ ತಿಳಿಸಿದರು.ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಉಪವಿಭಾಗಾಧಿಕಾರಿ ಹರ್ಷವರ್ಧನ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್., ಲೋಕಾಯುಕ್ತ ಎಸ್.ಪಿ. ನಟರಾಜ್, ಡಿವೈಎಸ್‌ಪಿ ಡಾ. ಗಾನಾ ಪಿ. ಕುಮಾರ್ ಮತ್ತಿತರರಿದ್ದರು.