ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ವಯಸ್ಸಾದಂತೆ ಜನರು ಆರೋಗ್ಯದ ವಿಚಾರದಲ್ಲಿ ಎಷ್ಟು ಜಾಗರೂಕತೆ ಮಾಡುತ್ತಾರೆಯೋ ಅಷ್ಟು ಒಳ್ಳೆಯದು. ವಯಸ್ಸು ಮೂವತ್ತು ದಾಟಿದ ಬಳಿಕ, ಹೆಚ್ಚಿನವರಿಗೆ ಒಂದರ ಮೇಲೊಂದು ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ. ಈ ಸಮಯದಲ್ಲಿ ರೋಗಲಕ್ಷಣಗಳು ಗೊತ್ತಾಗದೇ ಇರುವಂತಹ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ. ಆದ್ದರಿಂದ ಗ್ರಾಮಾಂತರ ಪ್ರದೇಶದ ಜನ ಉಚಿತ ಆರೋಗ್ಯ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಾಹೇ ವಿವಿ ಉಪಕುಲಪತಿ ಡಾ.ಕೆ.ಬಿ. ಲಿಂಗೇಗೌಡ ಕರೆ ನೀಡಿದರು.ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಕೊರಟಗೆರೆ ತಾಲೂಕಿನ ದಾಸಲುಕುಂಟೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸೈಲೆಂಟ್ ಕಿಲ್ಲರ್ ಎಂದೇ ಕರೆಯಲಾಗುವ ಕಾಯಿಲೆಗಳಾದ ಬಿಪಿ, ಶುಗರ್ ಕಾಯಿಲೆಯ ಜೊತೆಗೆ ಇತರ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿ ಕಂಡು ಬರಬಹುದಾದ ಸಾಧ್ಯತೆಗಳಿರುವುದರಿಂದ ಉಚಿತ ಆರೋಗ್ಯ ತಪಾಸಣೆಯ ವೇಳೆ, ರೋಗಲಕ್ಷಣಗಳನ್ನು ಗ್ರಾಮೀಣ ಪ್ರದೇಶದ ಜನ ಪತ್ತೆ ಹಚ್ಚಿಕೊಳ್ಳಬಹುದು ಎಂದು ಡಾ.ಕೆ.ಬಿ. ಲಿಂಗೇಗೌಡ ಅವರು ಗ್ರಾಮಾಂತರ ಪ್ರದೇಶದ ಜನರಿಗೆ ಆರೋಗ್ಯ ಜಾಗೃತಿ ವಹಿಸಿಕೊಳ್ಳುವಂತೆ ಮನವಿ ಮಾಡಿದರು.ಸಾಹೇ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಎಂ.ಝಡ್. ಕುರಿಯನ್ ಮಾತನಾಡಿ, ಪುರುಷರಾಗಿರಲಿ ಅಥವಾ ಮಹಿಳೆಯ ರಾಗಿರಲಿ 30 ದಾಟಿದ ಬಳಿಕ, ಕೆಲವೊಂದು ಆರೋಗ್ಯಕ್ಕೆ ಸಂಬಂಧಪಟ್ಟ ಪರೀಕ್ಷೆಗಳನ್ನು ವರ್ಷಕ್ಕೆ ಒಮ್ಮೆಯಾದರೂ ಕಡ್ಡಾಯವಾಗಿ ಮಾಡಿಸಿಕೊಂಡರೆ, ಏನೆಲ್ಲಾ ಕಾಯಿಲೆಗಳಿಂದ ವ್ಯಕ್ತಿ ಬಳಲುತ್ತಿದ್ದಾರೆ ಎನ್ನುವುದನ್ನು ಪತ್ತೆಹಚ್ಚಲು ನೆರವಾಗುತ್ತದೆ ಎಂದರು.
ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಉಪಪ್ರಾಂಶುಪಾಲ ಡಾ. ಪ್ರಭಾಕರ್ ಮಾತನಾಡಿ, ಉಚಿತ ಆರೋಗ್ಯ ಮೇಳೆ ಕಾರ್ಯಕ್ರಮ ಹಳ್ಳಿಗಳಲ್ಲಿ ನಡೆಯುವುದರಿಂದ ಬಡಜನತೆಗೆ ಉಚಿತ ಆರೋಗ್ಯ ಶಿಬಿರಗಳಿಂದ ತುಂಬಾ ಅನುಕೂಲವಾಗುತ್ತದೆ. ಹಣವಿಲ್ಲದೆ ಜನರು ಅಸ್ಪತ್ರೆಗೆ ತೆರಳುವುದಿಲ್ಲ. ಅದರೆ ಶಿಬಿರದಲ್ಲಿ ಉಚಿತ ತಪಾಸಣೆ ಮತ್ತು ಔಷಧಿ ನೀಡುತ್ತಿರುವುದರಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಉಪಯೋಗವಾಗುತ್ತದೆ ಎಂದರು.ಆರೋಗ್ಯ ಶಿಬಿರದಲ್ಲಿ ವೈದ್ಯರಾದ ಡಾ. ಭರತೇಶ, ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಘವೇಂದ್ರ ಮತ್ತು ದಾಸಲುಕುಂಟೆ ಗ್ರಾಮದ ಗುರುಶಾಂತಪ್ಪ, ನವೀನ್, ಪ್ರಸನ್‌ಕುಮಾರ್ ಸೇರಿದಂತೆ ಪಂಚಾಯಿತಿಯ ಪ್ರಮುಖರು ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ಶಿಬಿರದಲ್ಲಿ 10 ಮಂದಿ ತಜ್ಞ ವೈದ್ಯರ ತಂಡ ಭಾಗವಹಿಸಿ, ಸ್ತ್ರೀ ಹಾಗೂ ಪ್ರಸೂತಿ, ಚರ್ಮರೋಗ, ಮಕ್ಕಳ ರೋಗಗಳು, ಮನೋವೈದ್ಯಕೀಯ ನೆರವು, ಕಿವಿ-ಮೂಗು ಮತ್ತುಗಂಟಲು ಹಾಗೂ ಇತರೆ ಸಾಮಾನ್ಯ ಕಾಯಿಲೆಗಳ ಬಗ್ಗೆ ತಪಾಸಣೆ ನಡೆಸಿತು. ಶಿಬಿರದಲ್ಲಿ 200 ಕ್ಕೂ ಹೆಚ್ಚು ಮಂದಿಗೆ ವೈದ್ಯಕೀಯಚಿಕಿತ್ಸೆ ಮತ್ತು ಔಷೋಧಪಚಾರ ನೀಡಲಾಯಿತು.ಆರೋಗ್ಯ ಶಿಬಿರಕ್ಕೆ ಬಂದಿದ್ದ ಗ್ರಾಮದ ರಂಗಮ್ಮ ಮಾತನಾಡಿ, ದೂರದಲ್ಲಿರುವ ನಗರಗಳಿಗೆ ಹೋಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗಿರಲಿಲ್ಲ. ಶಿಬಿರದಲ್ಲಿ ಅನೇಕ ರೀತಿಯ ರೋಗಗಳಿಗೆ ಸ್ಥಳದಲ್ಲಿಯೇ ಚಿಕಿತ್ಸೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನೀಡುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.