ಕೊಪ್ಪಳ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ವಿಶ್ವ ಫಾರ್ಮಸಿಸ್ಟ್ ದಿನಾಚರಣೆ, ಜಿಲ್ಲಾ ಮಟ್ಟದ ಉತ್ತಮ ಫಾರ್ಮಸಿಸ್ಟ್ ಪ್ರಶಸ್ತಿ ಪ್ರದಾನ ಹಾಗೂ ಹಿರಿಯ ಫಾರ್ಮಸಿಸ್ಟ್‌ಗಳ ಸನ್ಮಾನ ಸಮಾರಂಭ ನಡೆಯಿತು.
ಕೊಪ್ಪಳ: ವೈದ್ಯಕೀಯ ಹಾಗೂ ಆರೋಗ್ಯ ಕ್ಷೇತ್ರ ಕೇವಲ ಆದಾಯ ಗಳಿಸುವ ವ್ಯಾಪಾರವಲ್ಲ, ಸಾರ್ವಜನಿಕರ ಜೀವ ರಕ್ಷಿಸುವ ಸೇವಾ ಕ್ಷೇತ್ರವಾಗಿದೆ. ಫಾರ್ಮಸಿಸ್ಟ್‌ಗಳು ಯಾವುದೇ ಕಾರಣಕ್ಕೂ ವೃತ್ತಿ ನೈತಿಕತೆಯನ್ನು ಬಿಡಬಾರದು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಫಾರ್ಮಸಿಸ್ಟ್ ದಿನಾಚರಣೆ, ಜಿಲ್ಲಾ ಮಟ್ಟದ ಉತ್ತಮ ಫಾರ್ಮಸಿಸ್ಟ್ ಪ್ರಶಸ್ತಿ ಪ್ರದಾನ ಹಾಗೂ ಹಿರಿಯ ಫಾರ್ಮಸಿಸ್ಟ್‌ಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ‘ಆರೋಗ್ಯಕರ ಭವಿಷ್ಯಕ್ಕಾಗಿ ಫಾರ್ಮಸಿಸ್ಟ್‌ಗಳನ್ನು ಸಬಲೀಕರಿಸುವುದು’ ಈ ಬಾರಿಯ ಧ್ಯೇಯವಾಕ್ಯವಾಗಿದೆ. ಡಿಜಿಟಲ್ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ಫಾರ್ಮಸಿಸ್ಟ್‌ಗಳು ಹೊಸ ತಂತ್ರಜ್ಞಾನ ಹಾಗೂ ಸುಧಾರಿತ ಜ್ಞಾನವನ್ನು ಅಳವಡಿಸಿಕೊಳ್ಳಬೇಕು. ನಿರಂತರ ತರಬೇತಿ ಮತ್ತು ಸಂಶೋಧನೆ ಮೂಲಕ ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು ಎಂದರು.ರೋಗಿಗಳ ಜೀವದೊಂದಿಗೆ ನೇರ ಸಂಪರ್ಕ ಹೊಂದಿರುವ ವೃತ್ತಿಯಾಗಿರುವುದರಿಂದ ಸಣ್ಣ ತಪ್ಪಿಗೂ ಅವಕಾಶ ನೀಡಬಾರದು. ಕಾನೂನಿನ ಚೌಕಟ್ಟಿನಲ್ಲಿ ಶಿಸ್ತಿನಿಂದ ಕಾರ್ಯನಿರ್ವಹಿಸುವ ಫಾರ್ಮಸಿಸ್ಟ್‌ಗಳ ಬೆಂಬಲಕ್ಕೆ ಜಿಲ್ಲಾಡಳಿತ ಸದಾ ಇರಲಿದೆ ಎಂದು ಹೇಳಿದರು.
ಕೊಪ್ಪಳ ನಗರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಸುರೇಶ ಮಾತನಾಡಿ, ವೈದ್ಯರ ಶಿಫಾರಸಿನ ಆಧಾರದ ಮೇಲೆಯೇ ಔಷಧ ವಿತರಿಸಬೇಕು. ಯುವಕರು ಹಾಗೂ ವಿದ್ಯಾರ್ಥಿಗಳು ಕೆಮ್ಮಿನ ಸಿರಪ್, ನಿದ್ರೆ ಮಾತ್ರೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿರುವುದು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು. ಮಾದಕ ವ್ಯಸನ ತಡೆಗೆ ‘ಬ್ಯಾಡ್ ಬ್ರೋ’ ಜಾಗೃತಿ ಅಭಿಯಾನ ರೂಪಿಸಲಾಗಿದೆ ಎಂದು ತಿಳಿಸಿದರು.ಸಹಾಯಕ ಔಷಧ ನಿಯಂತ್ರಕ ವೆಂಕಟೇಶ ರಾಠೋಡ್ ಮಾತನಾಡಿ, ಶಿಫಾರಸಿನಲ್ಲಿ ವೈದ್ಯರ ಹೆಸರು, ಕೆಎಂಸಿ ಸಂಖ್ಯೆ, ಸಹಿ ಹಾಗೂ ರೋಗಿಯ ವಿವರಗಳಿದ್ದಾಗ ಮಾತ್ರ ಔಷಧ ನೀಡಬೇಕು. ಬಿಳಿ ಹಾಳೆಯಲ್ಲಿ ಬರೆದುಕೊಟ್ಟ ಚೀಟಿಗೆ ಔಷಧ ನೀಡಬಾರದು. ಪ್ರತಿಜೀವಕಗಳ ನಿರೋಧಕತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಮ ಪಾಲನೆ ಅಗತ್ಯ ಎಂದರು.
ಪ್ರಶಸ್ತಿ, ಸನ್ಮಾನ: ಉತ್ತಮ ಸಾಧನೆ ಮಾಡಿದ ಐದು ಫಾರ್ಮಸಿಸ್ಟ್‌ಗಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಲಾಯಿತು. 25 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಜಿಲ್ಲೆಯ 125 ಹಿರಿಯ ಫಾರ್ಮಸಿಸ್ಟ್‌ಗಳನ್ನು ಸನ್ಮಾನಿಸಲಾಯಿತು.ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ದರಗದ, ಉಪವಿಭಾಗಾಧಿಕಾರಿ ಮೆಹಬೂಬ ಜಿಲಾನ್, ಡಿಎಚ್‌ಒ ಡಾ. ಈಶ್ವರ ಸವಡಿ ಉಪಸ್ಥಿತರಿದ್ದರು.