ಮಕ್ಕಳಲ್ಲಿ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು, ಪೌಷ್ಟಿಕ ಆಹಾರ ಪದ್ಧತಿ ರೂಢಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು, ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಹಾಗೂ ಬಾಯಿ ಮತ್ತು ಹಲ್ಲುಗಳ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಶಿಬಿರದ ಪ್ರಮುಖ ಉದ್ದೇಶವಾಗಿದೆ.
ಅಳ್ನಾವರ:
ವಿಜ್ಞಾನ ಮತ್ತು ಎಐ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಇಂದಿನ ಸಂದರ್ಭದಲ್ಲಿ ದೇಶದ ಭವಿಷ್ಯ ರೂಪಿಸುವ ಮಕ್ಕಳ ಆರೋಗ್ಯ ಸದೃಢವಾಗಿರುವುದು ಅತ್ಯಗತ್ಯ. ಮಕ್ಕಳಲ್ಲಿ ರೋಗಗಳು ಕಾಣಿಸಿಕೊಂಡ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗ ಬಾರದಂತೆ ಬಾಲ್ಯದಿಂದಲೇ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ ಎಂದು ಮಕ್ಕಳ ತಜ್ಞ ಡಾ. ಕವನ್ ದೇಶಪಾಂಡೆ ಹೇಳಿದರು.ಇಲ್ಲಿನ ಅಳ್ನಾವರ ಎಜುಕೇಶನ್ ಸೊಸೈಟಿಯ ಅನ್ನಪೂರ್ಣಾ ಚಂದ್ರಶೇಖರಯ್ಯ ಹಿರೇಮಠ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್ ಜಿಲ್ಲಾ ಶಾಖೆ ಹಾಗೂ ಧಾರವಾಡದ ಎಸ್‌ಡಿಎಂ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳಲ್ಲಿ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು, ಪೌಷ್ಟಿಕ ಆಹಾರ ಪದ್ಧತಿ ರೂಢಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು, ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಹಾಗೂ ಬಾಯಿ ಮತ್ತು ಹಲ್ಲುಗಳ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಶಿಬಿರದ ಪ್ರಮುಖ ಉದ್ದೇಶವಾಗಿದೆ. ಆರೋಗ್ಯವಂತ ಮಕ್ಕಳು ಉತ್ತಮ ಸಮಾಜದ ಭದ್ರ ಬುನಾದಿಯಾಗುತ್ತಾರೆ. ಆದ್ದರಿಂದ ಬಾಲ್ಯದಿಂದಲೇ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು. ಮಕ್ಕಳು ಜಂಕ್‌ಫುಡ್‌ನಿಂದ ದೂರವಿದ್ದು, ಪೌಷ್ಟಿಕ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪ್ರತಿದಿನ ಆಟ, ವ್ಯಾಯಾಮ ಸೇರಿದಂತೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಸಿ. ಹಿರೇಮಠ ಮಾತನಾಡಿ, ದಿನನಿತ್ಯದ ಪಾಠದ ಜತೆಗೆ ಮಕ್ಕಳು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸದೆ ನುರಿತ ವೈದ್ಯರ ಸಲಹೆ ಪಡೆದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.ಶಿಬಿರದಲ್ಲಿ ಎಸ್‌ಡಿಎಂ ಆಸ್ಪತ್ರೆಯ ವೈದ್ಯರು ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ದಂತ ವೈದ್ಯ ಡಾ. ವಿಜಯ ತ್ರಾಸಾದ, ಡಾ. ಮಾಧುರಿ ಕಬಾಡಿ, ಆಹಾರ ಮತ್ತು ಪೌಷ್ಟಿಕ ತಜ್ಞೆ ರೇಖಾ ಮಾನೆ, ವಿನಾಯಕ ಹಿರೇಮಠ, ಆಶೀಷ್ ಪಟೇಲ್, ಮುಖ್ಯ ಶಿಕ್ಷಕಿ ಶೋಭಾ ನಾಯಕ್, ಡಾ. ವಿ.ಡಿ. ಆದಿತ್ಯ, ಡಾ. ಸಿದ್ದಾರ್ಥ್, ಡಾ. ಪ್ರಶಾಂತ, ಡಾ. ರಿಚ್ಚು, ಡಾ. ಪ್ರತೀಕ್ಷಾ, ಡಾ. ಶ್ರುತಿ ಸೇರಿದಂತೆ ವೈದ್ಯರು, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.