ಸಾರಾಂಶ
ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸಬಾರದು.
ಹೂವಿನಹಡಗಲಿ; ವಿದ್ಯಾರ್ಥಿಗಳು ಜಂಕ್ ಆಹಾರ ಬಳಸದೇ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಆರೋಗ್ಯಕರ ಹವ್ಯಾಸಗಳಿಂದ ಮನಸ್ಸು ಉಲ್ಲಾಸದಾಯವಾಗುತ್ತದೆ ಎಂದು ವೈದ್ಯ ಡಾ.ಎಚ್.ಎಂ. ವೀರೇಶ್ ಹೇಳಿದರು.
ಪಟ್ಟಣದ ಜ್ಞಾನಗಂಗಾ ಪ್ರೌಢಶಾಲೆಯಲ್ಲಿ ಗುರುವಾರ ಜೆಸಿಐ ಹೂವಿನ ಹಡಗಲಿ ರಾಯಲ್ 2025 ಸಂಸ್ಥೆ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಶಾಲಾ ವಿದ್ಯಾರ್ಥಿಗಳಿಗಾಗಿ ಆರೋಗ್ಯ ಸಂಪದ ಕಾರ್ಯಕ್ರಮದಲ್ಲಿ ಮಾತನಾಡಿದರು.ಓದಿದ್ದು ಮನನ, ಏಕಾಗ್ರತೆ ಹೆಚ್ಚಿಸಲು ಪ್ರತಿನಿತ್ಯ ನಿಗದಿತ ಸಮಯದಲ್ಲಿ ಆಹಾರ ಸೇವಿಸಬೇಕು. ಆಹಾರದಲ್ಲಿ ಹೆಚ್ಚು ಕಾಳು ತರಕಾರಿ ಹಣ್ಣು ಇರುವಂತೆ ನೋಡಿಕೊಳ್ಳಬೇಕು. ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸಬಾರದು ಎಂದು ಹೇಳಿದರು.
ನಿತ್ಯ ವ್ಯಾಯಾಮ ನಡಿಗೆ ಧ್ಯಾನ ದೈಹಿಕ ಬೆಳವಣಿಗೆ ಪೂರಕ. ಓದಿನ ಜೊತೆಗೆ ಸಂಜೆ ಒಂದು ತಾಸು ಕ್ರೀಡೆಗಳಲ್ಲಿ ಭಾಗವಹಿಸಿರಿ. ರಸ್ತೆ ಬದಿಯಲ್ಲಿನ ಪಾನಿಪುರಿ ಮಸಾಲ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಸೇವಿಸದಿರಿ ಎಂದು ಹೇಳಿದರು.ನಿಕಟಪೂರ್ವ ಅಧ್ಯಕ್ಷ ಜೇಸಿ ಡಾ.ಜೆ.ಡಿ. ಉಮೇಶ್ ಮಾತನಾಡಿ, ಮೊಬೈಲ್ ಹೆಚ್ಚು ವೀಕ್ಷಿಸಿದರೆ ಕಣ್ಣಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಜಾಲತಾಣಗಳ ದಾಸರಾಗದೆ ಓದಿನ ಕಡೆ ಗಮನ ಹರಿಸಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಜೇಸಿಐ ರಾಯಲ್ ಸಂಸ್ಥೆ ನೂತನ ಅಧ್ಯಕ್ಷ ವಿನಾಯಕ ಕೋಡಿಹಳ್ಳಿ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸುವುದಾಗಿ ಹೇಳಿದರು.ಶಾಲೆಯ ಮುಖ್ಯ ಗುರು ವಿಜಯ್ ಲಿಂಗದಹಳ್ಳಿ, ವಿಶ್ವನಾಥ ಬಾರಿಕರ, ಜೆಸಿಐ ಕಾರ್ಯದರ್ಶಿ ಹಿತೇಶಕುಮಾರ್, ಶಿವರಾಜ್ ಎಸ್.ಎಂ., ರಫೀನಾಬೇಗಂ ಇತರರಿದ್ದರು.