ಆರೋಗ್ಯವಂತ ಪಶು ರೈತರ ಸಂಪತ್ತು: ಡಾ.ಕಾಂತೇಶ್

| Published : Nov 10 2025, 12:45 AM IST

ಸಾರಾಂಶ

ಆರೋಗ್ಯವಂತ ಪಶು ರೈತರ ಸಂಪತ್ತು. ಈ ದಿಸೆಯಲ್ಲಿ ಅತ್ಯಂತ ಸೂಕ್ಷ್ಮವಾದ ಪಶುವಿನ ಆರೋಗ್ಯದಲ್ಲಿ ಏರುಪೇರಾಗದಂತೆ ಜಾಗ್ರತೆಯಾಗಿ ಕಾಪಾಡುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದು ಪಶು ವೈದ್ಯ ಡಾ.ಕಾಂತೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಆರೋಗ್ಯವಂತ ಪಶು ರೈತರ ಸಂಪತ್ತು. ಈ ದಿಸೆಯಲ್ಲಿ ಅತ್ಯಂತ ಸೂಕ್ಷ್ಮವಾದ ಪಶುವಿನ ಆರೋಗ್ಯದಲ್ಲಿ ಏರುಪೇರಾಗದಂತೆ ಜಾಗ್ರತೆಯಾಗಿ ಕಾಪಾಡುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದು ಪಶು ವೈದ್ಯ ಡಾ.ಕಾಂತೇಶ್ ತಿಳಿಸಿದರು.

ತಾಲೂಕಿನ ಚುರ್ಚುಗುಂಡಿ ಗ್ರಾಮದಲ್ಲಿನ ಹಾಲಿನ ಡೈರಿ ಸಮೀಪ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಪಶು ಆರೋಗ್ಯ ಜಾಗ್ರತೆ ಬಗ್ಗೆ ಗ್ರಾಮಸ್ಥರ ಜತೆ ನಡೆದ ಗುಂಪು ಚರ್ಚೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ರೈತರಿಗೆ ಪ್ರಾಣಿಗಳ ಆರೋಗ್ಯ, ಆಹಾರ ಮತ್ತು ನಿರ್ವಹಣೆ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಿದರು.

ಹಸುಗಳಲ್ಲಿ ಕಾಣಿಸಿಕೊಳ್ಳುವ ರೋಗಗಳಾದ (ಲಂಪಿ ಸ್ಕಿನ್ ಡಿಸೀಸ್), ಚರ್ಮ ಗಂಟು ರೋಗ (ಮಾಸ್ಟೈಟಿಸ್), ಕೆಚ್ಚಲು ಬಾವುರೋಗ ಮುಂತಾದವುಗಳ ಕುರಿತು ವಿವರಿಸಿ ಕೆಚ್ಚಲು ಬಾವು ರೋಗವು ಅಪೂರ್ಣ ಹಾಲು ಹಿಂಡುವಿಕೆ ಕಾರಣದಿಂದಲೂ ಅಥವಾ ಸೂಕ್ಷ್ಮಾಣುಗಳು ಹಸುಗಳ ಕೆಚ್ಚಲು ಒಳಗೆ ಪ್ರವೇಶಿಸುವುದರಿಂದಲೂ ಉಂಟಾಗಬಹುದು ಎಂದು ಹೇಳಿದರು.

ಎಚ್.ಎಫ್ ಜಾತಿಯ ಹಸುಗಳು ನೆಲಕ್ಕೆ ಮಲಗಿದಾಗ ಕೆಚ್ಚಲು ಕಾಲುವೆಗಳು ತೆರೆಯುವ ಸಾಧ್ಯತೆ ಹೆಚ್ಚಿದ್ದು ಇದರಿಂದ ಧೂಳು ಒಳಗೆ ಪ್ರವೇಶಿಸಿ ಸೋಂಕು ಉಂಟಾಗಲಿದೆ.ಆದರೆ ದೇಶಿ ಹಸುಗಳಲ್ಲಿ ಇಂತಹ ಕಾಲುವೆಗಳು ತೆರೆಯುವುದಿಲ್ಲ,ಆದ್ದರಿಂದ ಕೆಚ್ಚಲು ಬಾವು ರೋಗವು ದೇಶಿ ಹಸುಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ ಎಂದು ತಿಳಿಸಿದರು.

ಹಸುಗಳಿಗೆ ಶೇ.75 ಒಣ ಆಹಾರ ಮತ್ತು ಶೇ 25 ಹಸಿರು ಮೇವು ನೀಡುವುದು ಸೂಕ್ತ. ಹಸಿರು ಮೇವುಗಳಲ್ಲಿ ಶೇ 90 ನೀರು ಮತ್ತು ಕೇವಲ ಶೇ 10 ಪೋಷಕಾಂಶಗಳಿರುತ್ತವೆ ಎಂದು ತಿಳಿಸಿದರು. ಹಸುಗಳ ಹೊಟ್ಟೆ ಏಕಾಏಕಿ ಉಬ್ಬಿದರೆ ಸಂಗ್ರಹವಾಗಿರುವ ಗ್ಯಾಸ್ ಹೊರಹಾಕಲು ಹಸುವಿಗೆ ಮೆಲಕು ಹಾಕಿಸಬೇಕು ಎಂದರು.

ಡಾ.ಕಾಂತೇಶ್ ಅವರು ರೈತರ ಹಲವು ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದರು. ರೈತರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಾಣಿಗಳ ಆರೋಗ್ಯ ಮತ್ತು ನಿರ್ವಹಣೆ ಕುರಿತು ಮಹತ್ವದ ಮಾಹಿತಿಯನ್ನು ಪಡೆದರು. ಗ್ರಾಮಸ್ಥರಾದ ಭರತ್,ಸಂಗಪ್ಪ ಕೆಟಿ, ಹರೀಶ, ಸುರೇಶ್, ನಟರಾಜ, ರವಿಕುಮಾರ್, ಭರತ್ ಎಂ.ಬಿ., ಎಚ್.ಎಸ್.ಸಂತೋಷ್, ಮಲ್ಲಿಕಾರ್ಜುನ್ ಆರ್., ರಾಜೇಂದ್ರ, ಪ್ರೇಮ, ಚೇತನ್ ಎಚ್.ಸಿ. ಮತ್ತಿತರರು ಭಾಗವಹಿಸಿದ್ದರು.