ಗದಗ: ವಿದ್ಯಾರ್ಥಿಗಳು ನಿಯಮಿತ ವ್ಯಾಯಾಮ, ಸಮತೋಲನ ಆಹಾರ, ಯೋಗ ಮತ್ತು ಧ್ಯಾನವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ದೇಹ ಮತ್ತು ಮನಸ್ಸು ಎರಡೂ ಆರೋಗ್ಯಕರವಾಗಿರುತ್ತವೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಪರಿಶೀಲನಾ ಅಧಿಕಾರಿ ಬಿ.ಎಸ್. ಹಿರೇಮಠ ತಿಳಿಸಿದರು.
ತಾಲೂಕಿನ ಹುಲಕೋಟಿ ಗ್ರಾಮದ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ನಡೆದ ಆರೋಗ್ಯಕರ ಜೀವನಶೈಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮೊಬೈಲ್ ಮತ್ತು ಡಿಜಿಟಲ್ ಸಾಧನಗಳ ಅತಿಯಾದ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ ಅವರು, ದಿನನಿತ್ಯ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡುವುದು, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಮತ್ತು ಉತ್ತಮ ನಿದ್ರೆ ಪಡೆಯುವುದು ಅತ್ಯಂತ ಅಗತ್ಯವೆಂದರು.
ಸಾವಿತ್ರಿ ಟಿ. ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವ ಆರೋಗ್ಯ ದಿನದ ಹಿನ್ನೆಲೆ, ಉದ್ದೇಶ ಮತ್ತು ಇಂದಿನ ದಿನಗಳಲ್ಲಿ ಆರೋಗ್ಯಕರ ಜೀವನಶೈಲಿಯ ಅಗತ್ಯತೆಯನ್ನು ವಿವರಿಸುತ್ತ ವಿದ್ಯಾರ್ಥಿಗಳು ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯವೆಂದರು.ಐಕ್ಯುಎಸಿ ಸಹ ಸಂಯೋಜಕ ಡಾ. ಮಂಜುನಾಥ ತ್ಯಾಲಗಡಿ ಮಾತನಾಡಿ, ವಿದ್ಯಾರ್ಥಿಗಳು ದಿನನಿತ್ಯದ ಜೀವನದಲ್ಲಿ ಸಣ್ಣ ಸಣ್ಣ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಅತ್ಯುತ್ತಮ ಆರೋಗ್ಯ ಸಾಧಿಸಬಹುದೆಂದರು.ಅಧ್ಯಕ್ಷತೆಯನ್ನ ಪ್ರಾ. ಡಾ. ಸುಧಾ ಕೌಜಗೇರಿ ವಹಿಸಿದ್ದರು. ರಂಜಿತಾ ಕಡಿ ಪ್ರಾರ್ಥಿಸಿದರು. ವಿಶಾಲ ರಹುತರ ಸ್ವಾಗತಿಸಿದರು. ತೇಜಸ್ವಿನಿ ಜಿದ್ದಿ ನಿರೂಪಿಸಿದರು. ಕಾರ್ತಿಕ ಚಲವಾದಿ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.ಮುಂಗಾರು ಹಂಗಾಮು: ರೈತರಿಗೆ ಸೂಚನೆ
ಗದಗ: ಮುಂಗಾರು ಹಂಗಾಮಿಗೆ ಭೂಮಿ ಸಿದ್ಧಪಡಿಸಿ ಹದಗೊಳಿಸಲು ಜಿಲ್ಲೆಯ ರೈತರು ಮಾಗಿ ಉಳುಮೆ ಕೈಗೊಳ್ಳಬೇಕು. ಮುಂಗಾರು ಹಂಗಾಮಿನ ಬೆಳೆಗಳು ಮಳೆ ಆಧರಿತವಾಗಿದ್ದರಿಂದ, ಸಮಯಕ್ಕೆ ಸರಿಯಾದ ತಯಾರಿ ಅತ್ಯಂತ ಮುಖ್ಯವಾಗಿದೆ.ರೈತರು ತಮ್ಮ ಕ್ಷೇತ್ರಗಳ ಮಣ್ಣಿನ ಪರೀಕ್ಷೆ ಮಾಡಿಸಿ, ಅಗತ್ಯ ಪೋಷಕಾಂಶಗಳ ಪ್ರಮಾಣವನ್ನು ತಿಳಿದುಕೊಳ್ಳಬೇಕು. ಮಣ್ಣು ಪರೀಕ್ಷೆ ಆಧಾರದ ಮೇಲೆ ಬೆಳೆಗಳಿಗೆ ಗೊಬ್ಬರ ಪೂರೈಕೆ ಮಾಡಬೇಕು. ಮಣ್ಣನ್ನು ಶಕ್ತಿಯುತವಾಗಿಸಲು ತಪ್ಪದೇ ಸಾವಯವ ಗೊಬ್ಬರಗಳನ್ನು ಭೂಮಿಗೆ ಸೇರಿಸಬೇಕು. ಇದರಿಂದ ಮಣ್ಣಿನಲ್ಲಿರುವ ಲಾಭದಾಯಕ ಸೂಕ್ಷ್ಮಾಣು ಜೀವಿಗಳಿಗೆ ಆಹಾರ ಒದಗಿಸಿದಂತಾಗಿ ಅವುಗಳ ಸಂಖ್ಯೆಯು ಹೆಚ್ಚಾಗುತ್ತದೆ. ಅಲ್ಲದೇ ರಸಗೊಬ್ಬರಗಳ ಉಪಯೋಗ ಕಡಿಮೆ ಮಾಡಬಹುದು.
ಹಿಂದಿನ ಹಂಗಾಮಿನ ಬೆಳೆಗಳ ಉಳಿಕೆಗಳನ್ನು ಸುಡಬಾರದು. ಅವುಗಳನ್ನು ಕಂಪೋಸ್ಟ್ ಮಾಡಲು ಅಥವಾ ಎರೆಹುಳು ಗೊಬ್ಬರ ತಯಾರಿಸಲು ಉಪಯೋಗಿಸಬೇಕು. ಎರೆಹುಳು ತೊಟ್ಟಿಯಲ್ಲಿ ಕನಿಷ್ಠ ಶೇ. 75ರಷ್ಟು ತೇವಾಂಶ ಇರುವ ಹಾಗೆ ನೋಡಿಕೊಳ್ಳಬೇಕೆಂದು ಕೃಷಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.