ಮಕ್ಕಳ ಮೇಲೆ ಬಿಸಿಲಾಘಾತ, ಆರೋಗ್ಯಕ್ಕೆ ಹೊಡೆತ

| Published : Mar 13 2025, 12:49 AM IST

ಸಾರಾಂಶ

ಈಗ ಬಾಗಲಕೋಟೆ ಜಿಲ್ಲೆಯಲ್ಲಿ ವಿಪರೀತ ಬಿಸಿಲ ಬೇಗೆ ಆರಂಭಗೊಂಡಿರುವುದರಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳು ದಾಖಲಾಗುತ್ತಿರುವ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಈಶ್ವರ ಶೆಟ್ಟರ್‌

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನೆತ್ತಿಲ ಮೇಲೆ ಬಿಸಿಲ ತಾಪ ಏರುತ್ತಿದೆ. ಇದು ಇನ್ನಷ್ಟು ಏರುವ ಸಾಧ್ಯತೆಯೂ ಇದೆ. ಬಿಸಿಲ ಧಗೆಯಿಂದ ರಕ್ಷಣೆ ಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಅದರಂತೆ ಮಕ್ಕಳನ್ನು ಬಿಸಿಲಿನಿಂದ ಕಾಪಾಡುವುದು ಮಾತ್ರವಲ್ಲ, ಅವರನ್ನು ಈ ಋತುಮಾನದಲ್ಲಿ ಬರುವ ಕೆಲವು ರೋಗ ರುಜಿನಗಳಿಂದ ಕಾಪಾಡಿಕೊಳ್ಳುವುದು ಕೂಡ ಪೋಷಕರ ಮುಂದಿರುವ ದೊಡ್ಡ ಸವಾಲಾಗಿದೆ.

ಹೇಳಿಕೇಳಿ ಇದು ಪರೀಕ್ಷಾ ಸಮಯ. ಈ ಸಂದರ್ಭದಲ್ಲಿಯಂತೂ ಪೋಷಕರು ಎಷ್ಟೇ ಎಚ್ಚರ ವಹಿಸಿದರೂ ಮಕ್ಕಳು ಮಾತ್ರ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳುವುದು ಕಷ್ಟಸಾಧ್ಯ. ಅದರಂತೆ ಈಗ ಬಾಗಲಕೋಟೆ ಜಿಲ್ಲೆಯಲ್ಲಿ ವಿಪರೀತ ಬಿಸಿಲ ಬೇಗೆ ಆರಂಭಗೊಂಡಿರುವುದರಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳು ದಾಖಲಾಗುತ್ತಿರುವ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕೇವಲ ಬಾಗಲಕೋಟೆ ನಗರದಲ್ಲಿ ಮಾತ್ರವಲ್ಲ, ತಾಲೂಕು ಮತ್ತು ಹೋಬಳಿ ಪ್ರದೇಶಗಳಲ್ಲಿರುವ ಆಸ್ಪತ್ರೆಗಳಿಗೂ ಮಕ್ಕಳು ದಾಖಲಾಗುತ್ತಿರುವ ಪ್ರಮಾಣ ಹೆಚ್ಚುತ್ತಿದೆ.

ಹೆಚ್ಚುತ್ತಿರುವ ಹೀಟ್‌ವೇವ್‌:

ಉತ್ತರ ಕರ್ನಾಟಕದಲ್ಲಿರುವ ಬಹುತೇಕ ಜಿಲ್ಲೆಗಳಲ್ಲಿ ಹೀಟ್‌ವೇವ್‌ ಹೆಚ್ಚಿದೆ. ಇದರಿಂದಾಗಿಯೇ ವಾತಾವರಣದಲ್ಲಿ ಉಷ್ಣಾಂಶ ಮಾತ್ರವಲ್ಲ, ಆರ್ದ್ರತೆಯ ಪ್ರಮಾಣ ಕೂಡ ಕಡಿಮೆಯಾಗುತ್ತದೆ. ಅಂದರೆ ಪರಿಸರದಲ್ಲಿ ತಂಪಿನ ಪ್ರಮಾಣ ಕಡಿಮೆಯಾಗುತ್ತದೆ. ಇದು ಚಿಕ್ಕಮಕ್ಕಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ಮಕ್ಕಳಲ್ಲಿ ವೈರಲ್ ಫಿವರ್ ಕಾಣಿಸುತ್ತಿದೆ. ಇದರಿಂದಾಗಿಯೇ ಬಾಗಲಕೋಟೆ ಜಿಲ್ಲೆಯ ಅಸ್ಪತ್ರೆಗಳಲ್ಲಿ ಅನಾರೋಗ್ಯಕ್ಕೀಡಾಗಿರುವ ಮಕ್ಕಳ ಸಂಖ್ಯೆಯಲ್ಲಿ ಶೇ.30ರಷ್ಟು ಹೆಚ್ಚಳವಾಗುತ್ತಿದೆ. ಉರಿ ಬಿಸಿಲಿನಿಂದ ಮಕ್ಕಳ ಆರೋಗ್ಯದಲ್ಲಿ ಸಹಜವಾಗಿ ವ್ಯತ್ಯಾಸ ಕಾಣಿಸುತ್ತಿದೆ. ಬಾಗಲಕೋಟೆ ಜಿಲ್ಲಾಸ್ಪತ್ರೆ ಸೇರಿದಂತೆ ತಾಲೂಕು ಆಸ್ಪತ್ರೆಗಳಲ್ಲಿಯೂ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಮಕ್ಕಳ ದಾಖಲಾತಿ ಸಂಖ್ಯೆಯೂ ಏರಿಕೆಯಾಗುತ್ತಿದೆ.

ನೆತ್ತಿ ಸುಡುವ ಬಿಸಿಲಿಗೆ 5 ವರ್ಷದವರೆಗಿನ ಮಕ್ಕಳನ್ನೇ ಹೆಚ್ಚಾಗಿ ರೋಗಗಳು ಬಾಧಿಸುತ್ತಿವೆ. ಖಾಸಗಿ ಚಿಕ್ಕಮಕ್ಕಳ‌ ಆಸ್ಪತ್ರೆಗಳಂತೂ ಮಕ್ಕಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಪಾಲಕರು ಕೂಡ ಸ್ವಲ್ಪ ಭೀತಿ ಎದುರಿಸುವಂತಾಗಿದೆ. ಡಿಹೈಡ್ರೇಶನ್ ಸೇರಿದಂತೆ ಇತರೆ ಕಾಯಿಲೆ ಭೀತಿ ಶುರುವಾಗಿದೆ. ಬಿಸಿಲಿನ ತಾಪಮಾನದಿಂದ ಲವಣಾಂಶ ಕಡಿಮೆಯಾಗಿ ಮಕ್ಕಳು ವೀಕ್‌ ನೆಸ್ ಆಗುವ ಸಾಧ್ಯತೆಯೂ ಇದೆ. ಮಾತ್ರವಲ್ಲ, ನೀರಿನ ಅಂಶ ಕಡಿಮೆಯಾಗಿ ಕಿಡ್ನಿ ಮೇಲೆ ದುಷ್ಪರಿಣಾಮ ಆಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಜತೆಗೆ ಸುಸ್ತು ಬರುವ ಅಪಾಯ ಇರುತ್ತದೆ ಎನ್ನುತ್ತಾರೆ ವೈದ್ಯರು.

ಮಕ್ಕಳನ್ನು ಬೇಸಿಗೆ ವೇಳೆ ಕಾಡುವ ರೋಗಗಳು ಯಾವುವು?:

ಬೇಸಿಗೆ ಋತುಮಾನದಲ್ಲಿ ವಾತಾವರಣ ಆರ್ದ್ರತೆಯಿಂದ ಕೂಡಿರುವುದರಿಂದ ನೀರಿನಂಶ ವಾತಾವರಣದಲ್ಲಿ ಕಡಿಮೆಯಾಗುತ್ತದೆ. ಇದರಿಂದ ಮಕ್ಕಳಿಗೆ ಉಷ್ಣ (ಬಿಸಿ) ವಾತಾವರಣ ಸಿಗುತ್ತದೆ. ಇದರಿಂದ ಜ್ವರ, ಕೆಮ್ಮು, ವಾಂತಿ, ನಿರ್ಜಲೀಕರಣ, ಮೂತ್ರ ಉರಿಯುವಿಕೆ, ಬಳಲುವಿಕೆ, ಹಸಿವಾಗದಿರುವುದು ಸೇರಿದಂತೆ ಇತರೆ ರೋಗಗಳು ಬಾಧಿಸುತ್ತವೆ. ಸದ್ಯದ ಪರಿಸ್ಥಿತಿಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಬರೋಬ್ಬರಿ 40.1 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಇದರಿಂದಾಗಿ ಇದು ಮಕ್ಕಳನ್ನು ಮತ್ತಷ್ಟು ರೋಗಕ್ಕೆ ದೂಡುವಂತೆ ಮಾಡಬಹುದು ಎನ್ನುತ್ತಾರೆ ತಜ್ಞ ವೈದ್ಯರು.

ಪೋಷಕರು ಏನು ಮಾಡಬೇಕು?:

ಬೇಸಿಗೆ ಸಂದರ್ಭದಲ್ಲಿ ಮಕ್ಕಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂದು ವೈದ್ಯರು ಕೂಡ ಕೆಲವು ಸಲಹೆಗಳನ್ನು ನೀಡುತ್ತಿದ್ದಾರೆ. ಬೇಸಿಗೆ ವೇಳೆ ಮಕ್ಕಳಿಗೆ ಊಟಕ್ಕಿಂತ ನೀರಿನಂಶ ಇರುವ ಪದಾರ್ಥ ಮತ್ತು ಹಣ್ಣುಗಳನ್ನೇ ನೀಡಬೇಕು. ನೀರನ್ನು ಹೆಚ್ಚಾಗಿ ಸೇವಿಸುವುದರಿಂದ ಡಿಹೈಡ್ರೇಶನ್‌ನಿಂದ ಬಳಲುವುದನ್ನು ತಪ್ಪಿಸಬಹುದು. ಆದರೆ, ಮಕ್ಕಳು ನೀರು ಕುಡಿ ಎಂದರೆ ಕುಡಿಯಲು ಮುಂದಾಗುವುದಿಲ್ಲ. ಅದರ ಬದಲಾಗಿ ತಂಪು ಪಾನೀಯ, ನೀರಿನ ಜತೆಗೆ ಸ್ವಲ್ಪ ಲಿಂಬು, ಉಪ್ಪು ಹಾಕಿ ಜ್ಯೂಸ್‌ ರೀತಿ ಮಾಡಿಕೊಟ್ಟು ಕುಡಿಯಲು ಹೇಳಬೇಕು. ಜತೆಗೆ ಎಳನೀರು, ನೀರಿನಂಶ ಇರುವ ಹಣ್ಣುಗಳನ್ನು ನೀಡಬೇಕು. ಜತೆಗೆ ಬಿಸಿಲಿನ ಸಂದರ್ಭದಲ್ಲಿ ಮಕ್ಕಳನ್ನು ಹೆಚ್ಚಾಗಿ ಹೊರಗೆ ಬಿಡಬೇಡಿ ಎಂದು ವೈದ್ಯರ ಸಲಹೆ ನೀಡುತ್ತಿದ್ದಾರೆ. ವಿಶೇಷವಾಗಿ ಬೆಳಗ್ಗೆ ೧೦ ರಿಂದ ಸಂಜೆ 5 ರೊಳಗೆ ಬಿಸಿಲಲ್ಲಿ ಆಟವಾಡಲು ಮಕ್ಕಳನ್ನು ಬಿಡಬೇಡಿ ಎಂದು ವೈದ್ಯರು ಸಲೆ ನೀಡುತ್ತಿದ್ದಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಹೊರಗಿನ ಎಣ್ಣೆಯಲ್ಲಿ ಕರದಿರುವ ಪದಾರ್ಥಗಳನ್ನು ತಿನ್ನಲು ನೀಡಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.