ಇತಿಹಾಸದ ಪುಟ ಸೇರಿದ ಭೂಲೋಕದ ಸ್ವರ್ಗ ದೇವಕಾರ ಹಳ್ಳಿ

| Published : Dec 16 2024, 12:48 AM IST

ಸಾರಾಂಶ

1996ರಲ್ಲಿ ಕದ್ರಾದಲ್ಲಿ ಅಣೆಕಟ್ಟು ನಿರ್ಮಾಣ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಮುಳುಗಡೆಯಾಗುವ ದೇವಕಾರದ 12 ಮನೆಗಳಿಗೆ ಮನೆ ತೆರವುಗೊಳಿಸಲು ನೋಟಿಸ್ ನೀಡಿ ತೆರವುಗೊಳಿಸಲಾಯಿತು.

ವಸಂತಕುಮಾರ್ ಕತಗಾಲಕಾರವಾರ: ಜಲವಿದ್ಯುತ್ ಯೋಜನೆಯಿಂದಾಗಿ ಪ್ರವಾಹದ ಭೀತಿ, ಅಣು ವಿದ್ಯುತ್ ಯೋಜನೆಯಿಂದಾಗಿ ಪರಮಾಣುವಿನ ಭಯದಿಂದ ಭೂಲೋಕದಲ್ಲಿ ದೇವಲೋಕದಂತಿದ್ದ ದೇವಕಾರ ಊರಿಗೆ ಊರೇ ಕಣ್ಮರೆಯಾಗಿದೆ. ದೇವಕಾರದ ಕೊನೆಯ ಕುಟುಂಬವೊಂದು ಮನೆ ಖಾಲಿ ಮಾಡಿ ಭಾರದ ಹೃದಯದೊಂದಿಗೆ ಹೊರಟು ಬರುತ್ತಿದ್ದಂತೆ ದೇವಕಾರ ಇತಿಹಾಸದ ಪುಟಗಳಲ್ಲಿ ಸೇರುವಂತಾಗಿದೆ.ಕಾರವಾರ ಹಾಗೂ ಯಲ್ಲಾಪುರ ತಾಲೂಕಿನ ನಡುವೆ ಇರುವ ದೇವಕಾರ ಕೊಡಸಳ್ಳಿ ಹಾಗೂ ಕದ್ರಾ ಡ್ಯಾಂ ನಡುವಣ ಕಾಳಿ ನದಿ ದಂಡೆಯ ಮೇಲಿದೆ. ಎರಡು ದಿಕ್ಕಿನಲ್ಲಿಯೂ ಸುತ್ತುವರಿದ ಜಲರಾಶಿ, ಒಂದೆಡೆ ದಟ್ಟ ಅರಣ್ಯದಿಂದ ಕೂಡದ ಬೃಹತ್ ಪರ್ವತ. ಇನ್ನೊಂದೆಡೆ ಕಡಿದಾದ ಗುಡ್ಡದಿಂದ ಧುಮ್ಮಿಕ್ಕುವ ಜಲಪಾತ. ನಡುವೆ ತೊನೆದಾಡುವ ಭತ್ತದ ಬೆಳೆ. ಅಲ್ಲೊಂದು ಇಲ್ಲೊಂದು ಮನೆ. ಸಮೃದ್ಧ ಊರು. ನೋಡಿದವರೆಲ್ಲ ಭೂಸ್ವರ್ಗ ಎಂದು ಉದ್ಗರಿಸಲೇಬೇಕು. ಈಗ ಬೆಟ್ಟ ಗುಡ್ಡಗಳೂ ಹಾಗೆ ಇವೆ. ಜಲಪಾತವೂ ಇದೆ. ಆದರೆ ಊರಿಗೆ ಊರೇ ಮಾಯವಾಗಿದೆ. ಒಂದು ಮನೆಯೂ ಇಲ್ಲ. ನೀರವ ಮೌನ. ಭತ್ತದ ಗದ್ದೆಗಳಿರುವಲ್ಲೆಲ್ಲ ಅಕೇಶಿಯಾ ಮರಗಳೆದ್ದಿವೆ. ದೇವಕಾರ ಮರೆಯಾಗಿದೆ.1996ರಲ್ಲಿ ಕದ್ರಾದಲ್ಲಿ ಅಣೆಕಟ್ಟು ನಿರ್ಮಾಣ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಮುಳುಗಡೆಯಾಗುವ ದೇವಕಾರದ 12 ಮನೆಗಳಿಗೆ ಮನೆ ತೆರವುಗೊಳಿಸಲು ನೋಟಿಸ್ ನೀಡಿ ತೆರವುಗೊಳಿಸಲಾಯಿತು.2000 ಸುಮಾರಿಗೆ ಕೈಗಾದಲ್ಲಿ ಅಣು ವಿದ್ಯುತ್ ಯೋಜನೆಗೆ ಚಾಲನೆ ದೊರೆಯುತ್ತಿದ್ದಂತೆ ಅಮಾಯಕ ದೇವಕಾರದ ಜನತೆ ಪರಮಾಣು ಸ್ಥಾವರದ ಅಪಾಯದ ಬಗ್ಗೆ ಆತಂಕಗೊಂಡರು. ಎರಡನೇ ಮಹಾಯುದ್ಧದಲ್ಲಿ ಜಪಾನ್‌ದ ಹಿರೋಶಿಮಾ ನಾಗಸಾಕಿ ಮೇಲೆ ಪರಮಾಣು ಬಾಂಬ್ ಬಿದ್ದು ಉಂಟಾದ ಅನಾಹುತವನ್ನು ಹೇಳಿ, ಅಣು ವಿಕಿರಣದಿಂದ ಉಂಟಾಗುವ ದುಷ್ಪರಿಣಾಮ ವಿವರಿಸಿದಾಗ ಭಯಭೀತರಾದರು. ಊರಿಗೆ ಊರನ್ನೇ ತೊರೆಯಲು ಕೆಲವರು ಮುಂದಾದರು. ಮನೆ ತೊರೆಯಲು ಮುಂದಾದವರಿಗೆ ಪರಿಹಾರ ನೀಡಲಾಯಿತು. ಪರಿಹಾರ ನೀಡಿಕೆ ಸಮರ್ಪಕವಾಗಿಲ್ಲ ಎಂಬ ಅಸಮಾಧಾನ ಹೊಗೆ ಎದ್ದರೂ ಅಣು ವಿಕಿರಣದ ಭಯ ಅದನ್ನು ತಣ್ಣಗಾಗಿಸಿತು.194ರಷ್ಟು ಕುಟುಂಬಗಳು, 400ಕ್ಕೂ ಹೆಚ್ಚು ಜನರು ಮನೆ ಮಾಡಿಕೊಂಡಿದ್ದ ದೇವಕಾರ ಊರಿನ ಒಂದೊಂದೆ ಕುಟುಂಬಗಳು ಗುಳೆ ಎದ್ದು ಹೋಗತೊಡಗಿದರು. ಕೆಲವರು ಕಲ್ಲೇಶ್ವರ, ಕನಕನಹಳ್ಳಿ, ಹೆಗ್ಗಾರ, ಕಳಚೆ, ಈರಾಪುರದತ್ತ ತೆರಳಿದರು.ಈ ನಡುವೆ ದೇವಕಾರ ಊರನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. ಮನೆ ಖಾಲಿ ಮಾಡಿ ಹೊರಟವರ ಭೂಮಿಯಲ್ಲಿ ಅಕೇಶಿಯಾ ನೆಡುತೋಪು ನಿರ್ಮಾಣವಾಯಿತು. ಬೇಲಿಗಳು ಎದ್ದವು. ಊರು ಬಹುತೇಕ ಖಾಲಿಯಾಯಿತು. ಬೇರೆಡೆ ಭೂಮಿ ಲಭ್ಯವಾಗದೆ ಕೆಲವು ಕುಟುಂಬಗಳು ಅಲ್ಲೇ ಉಳಿಯುವಂತಾಯಿತು.ದಾಖಲೆಯಲ್ಲಿ ದೇವಕಾರ ಮರೆಯಾಗಿದ್ದರಿಂದ ಯಾವುದೆ ಸೌಲಭ್ಯಗಳಿಲ್ಲದೆ ಅಳಿದುಳಿದ 25ರಷ್ಟು ಕುಟುಂಬಗಳ ಬದುಕು ಅಸನೀಯವಾಯಿತು. ಇದರಿಂದ ಆ ಕುಟುಂಬಗಳೂ ಒಂದೊಂದಾಗಿ ಊರಿಗೆ ಟಾಟಾ ಹೇಳುವಂತಾಯಿತು ಎಂದು ದೇವಕಾರ ನಿವಾಸಿಯಾಗಿದ್ದ ಉಪನ್ಯಾಸಕ ರಾಜೇಶ ಮರಾಠೆ ಬೇಸರ ವ್ಯಕ್ತಪಡಿಸುತ್ತಾರೆ.ಊರಿಗೆ ಹೋಗಬೇಕೆಂದರೆ ಕಾಳಿ ನದಿಯಲ್ಲಿ ದೋಣಿಗೆ ಹುಟ್ಟುಹಾಕಲೇ ಬೇಕು. ಈಚೆಗೆ ಉಲ್ಲಾಸ ಪಾಗಿ, ರಾಮಕೃಷ್ಣ ಪಾಗಿ, ನಾಗೇಶ ಪಾಗಿ ಹಾಗೂ ಕುಟುಂಬದ ಸದಸ್ಯರು ತಮ್ಮ ಪಾತ್ರೆ, ಪರಿಕರ, ದವಸ, ಧಾನ್ಯದೊಂದಿಗೆ ಹುಟ್ಟು ಹಾಕುತ್ತ ಬರುವಾಗ ಕಣ್ಣಾಲಿಗಳು ತೇವವಾಗಿತ್ತು. ಇಡಿ ಊರು ಶಾಶ್ವತವಾಗಿ ಕಣ್ಮರೆಯಾಯಿತು.

ಯಾತನೆ ಅಷ್ಟಿಷ್ಟಲ್ಲ: ಹುಟ್ಟಿ ಬೆಳೆದ ಊರನ್ನು ಬಿಟ್ಟು ಬರುವಾಗ ಆದ ಯಾತನೆ ಅಷ್ಟಿಷ್ಟಲ್ಲ. ಆದರೆ ಅಲ್ಲೀಗ ಯಾವುದೆ ಸೌಲಭ್ಯ ಇರಲಿಲ್ಲ. ಇಡಿ ಊರಿನಲ್ಲಿ ನಮ್ಮದೊಂದೆ ಮನೆ ಇತ್ತು. ಅನಿವಾರ್ಯವಾಗಿ ಊರು ತೊರೆಯಬೇಕಾಯಿತು ಎಂದು ಕೊನೆಯದಾಗಿ ದೇವಕಾರ ತೊರೆದ ಉಲ್ಲಾಸ ಪಾಗಿ ತಿಳಿಸಿದರು.ಸಮೀಕ್ಷಾ ಪ್ರವಾಸದಲ್ಲಿ ಗ್ರಾಮದ ಬಗ್ಗೆ ಉಲ್ಲೇಖ

ಬ್ರಿಟಿಷ್ ಆಡಳಿತದಲ್ಲಿ 18ನೇ ಶತಮಾನದಲ್ಲಿ ಫ್ರಾನ್ಸಿಸ್ ಬುಕಾನಿನ್ ಕೈಗೊಂಡ ಸಮೀಕ್ಷಾ ಪ್ರವಾಸದಲ್ಲಿ ದೇವಕಾರಕ್ಕೂ ಭೇಟಿ ನೀಡಿದ್ದ. ಇಲ್ಲಿ 8 ಮನೆಗಳಿತ್ತು. 4 ಮನೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿತ್ತು. ಊರಿನ ಸುತ್ತ ಬಿದಿರುಗಳಿದ್ದವು. ಈ ಊರಿಗೆ ಕಳ್ಳನೊಬ್ಬ ದಾಳಿ ಮಾಡುತ್ತಿದ್ದ. ಆತ ಬರುತ್ತಿದ್ದ ದಾರಿಗೆ ಚೋರಾ ಬಾರ್ ಎಂದು ಕರೆದರೆ, ಚೋರಾ ಫಾತರ್ (ಕಳ್ಳನ ಕಲ್ಲು) ಅಂದರೆ ಅರೆಯುವ ಕಲ್ಲು ಈಗಲೂ ಇದೆ. ಬ್ರಿಟಿಷ್ ಕಲೆಕ್ಟರ್ ಸೈನಿಕರನ್ನು ಕಳುಹಿಸಿ ಕಳ್ಳನನ್ನು ಸದೆಬಡಿದ ಎಂದು ಬುಕಾನಿನ್ ದಾಖಲಿಸಿದ್ದಾರೆ.

ಬುಕಾನಿನ್ ಹಾದಿಯಲ್ಲಿ ಎರಡು ಶತಮಾನಗಳ ತರುವಾಯ ಮರುಪ್ರವಾಸ ಕೈಗೊಂಡ ಪರಿಸರ ಬರಹಗಾರ ಶಿವಾನಂದ ಕಳವೆ ದೇವಕಾರಕ್ಕೆ ಭೇಟಿ ನೀಡಿ ಊರಿನ ಬಗ್ಗೆ ವಿವರಿಸಿದ್ದಾರೆ.

ಯುದ್ಧಭೂಮಿಯಂತೆ ಕಾಣುತ್ತಿರುವ ಊರು...

ಇಡಿ ದೇವಕಾರ ಯುದ್ಧ ಭೂಮಿಯಂತೆ ಕಾಣಿಸುತ್ತಿದೆ. ಮುರಿದ ಮನೆಗಳು, ರಾಶಿ ಬಿದ್ದ ಕಲ್ಲು, ಮಣ್ಣು, ಭಗ್ನಗೊಂಡ ದೇವರ ಮೂರ್ತಿ, ವೀರಗಲ್ಲುಗಳು. ಅವಶೇಷಗಳು ಎಲ್ಲೆಡೆ ಕಾಣಸಿಗುತ್ತದೆ.

ಇಷ್ಟೊಂದು ದೊಡ್ಡ ಊರಿನಲ್ಲಿ ಈಗ ಅಕೇಶಿಯಾ ನೆಡುತೋಪು ಬಿಟ್ಟರೆ ಬೇರೇನೂ ಇಲ್ಲ. ಕುಟುಂಬದ ಸದಸ್ಯರು ಹೋದರೂ ಇಲ್ಲೇ ಉಳಿದ ದನಕರುಗಳನ್ನೆಲ್ಲ ಹುಲಿ, ಚಿರತೆಗಳು ಬೇಟೆಯಾಡಿವೆ. ದೇವಕಾರ ಖಾಲಿ, ಖಾಲಿಯಾಗಿದೆ.