ಮಳೆಗೆ ಅಪಾರ ಬೆಳೆ ಹಾನಿ: ನಲುಗಿದ ರೈತ

| Published : Oct 11 2024, 11:55 PM IST

ಸಾರಾಂಶ

Heavy crop damage due to rain: Farmer devastated

-ಭಾರಿ ಮಳೆಯಿಂದಾಗಿ 571 ಹೆಕ್ಟೇರ್‌ ಬೆಳೆ, 175 ಮನೆ ಹಾನಿ । ದೇವದುರ್ಗದಲ್ಲಿ 444 ಹೆಕ್ಟೇರ್ ಪ್ರದೇಶ ಹಾನಿ । ಲಿಂಗಸೂಗೂರು 41.18 ಹೆಕ್ಟೇರ್ ನಷ್ಟ

------

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಕಳೆದ ವರ್ಷ ತೀವ್ರ ಬರದ ಛಾಯೆಗೆ ಬೆಂದ ಅನ್ನದಾತ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆಯ ಮಾಯೆಯ ಹೊಡೆತಕ್ಕೆ ಸಿಕ್ಕಿ ಸೊರಗಿದ್ದು ಇದೀಗ ತುಂಗಭದ್ರಾ ಎಡದಂಡೆ ಕಾಲುವೆ ಕೆಳಭಾಗದ ರೈತರ ಬೆಳೆಗಳಿಗೆ ನೀರಿಲ್ಲದೇ ಬೆಳೆಗಳು ಒಣಗಲಾರಂಭಿಸಿದ್ದು, ಹೀಗೆ ಜಿಲ್ಲೆ ರೈತ ನಲುಗಿ ಸುಸ್ತಾಗಿದ್ದಾನೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬೆಳೆ ಸೇರಿದಂತೆ ಪ್ರಾಣ ಹಾಗೂ ಆಸ್ತಿ ನಷ್ಟವಾಗಿದೆ. ಕಳೆದ ಜೂನ್‌ನಿಂದ ಆಗಸ್ಟ್‌ ವರೆಗೂ ಜಿಲ್ಲೆಯಾದ್ಯಂತ ಸುರಿದ ಮಳೆಯಿಂದಾಗಿ ಉಂಟಾಗಿರುವ ಹಾನಿ ಕುರಿತು ಜಿಲ್ಲಾಡಳಿತ ಮಾಹಿತಿ ಸಂಗ್ರಹಿಸಿ ವರದಿ ರೂಪಿಸಿದ್ದು, ಅದರಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಜೊತೆಗೆ ಮನೆಗಳ ಹಾನಿಯೂ ಜಾಸ್ತಿಯಾಗಿದ್ದು, ಅದಕ್ಕೆ ತಕ್ಕಂತೆ ಈಗಾಗಲೇ ಪರಿಹಾರ ವಿತರಣೆಯ ಕಾರ್ಯವು ಪ್ರಗತಿಯಲ್ಲಿ ಸಾಗಿದೆ.

ನಿರಂತರ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಪ್ರವಾಹ ಸನ್ನಿವೇಶವೇ ಸೃಷ್ಟಿಯಾಗಿತ್ತು ಅದರ ಪರಿಣಾಮವಾಗಿ ಜಿಲ್ಲೆಯಲ್ಲಿ ಹತ್ತಿ, ತೊಗರಿ, ಭತ್ತ ಸೇರಿದಂತೆ 571 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಅಂದಾಜು 60 ಲಕ್ಷ ರು. ಮೌಲ್ಯದ ಬೆಳೆ ಹಾನಿಗೀಡಾಗಿದೆ.

ದೇವದುರ್ಗ ತಾಲೂಕಿನಲ್ಲಿ ಅತಿ ಹೆಚ್ಚು ಬೆಳೆ ಹಾನಿಯಾಗಿದೆ. 444 ಹೆಕ್ಟೇರ್ ಪ್ರದೇಶ ಹಾಳಾಗಿದೆ. ಲಿಂಗಸೂಗೂರು ತಾಲೂಕಿನಲ್ಲಿ 41.18 ಹೆಕ್ಟೇರ್, ರಾಯಚೂರು ತಾಲೂಕಿನಲ್ಲಿ 86.37 ಹೆಕ್ಟೇರ್ ಹಾನಿಗೀಡಾಗಿದೆ. ಮಾನ್ವಿ, ಸಿಂಧನೂರು, ಮಸ್ಕಿ, ಸಿರವಾರದಲ್ಲಿ ಬೆಳೆ ಹಾನಿ ವರದಿಯಾಗಿಲ್ಲ. ನಾರಾಯಣಪುರ ಬಲದಂಡೆ ಕಾಲುವೆ ಹಾಗೂ ತುಂಗಭದ್ರಾ ಎಡದಂಡೆ ಕಾಲುವೆಗಳಿಗೆ ನೀರು ತಡವಾಗಿ ಬಂದ ಕಾರಣ ಭತ್ತ ಬೆಳೆ ಹೆಚ್ಚಾಗಿ ಹಾನಿಗೊಳಗಾಗಿಲ್ಲ. ಆದರೆ ಕೆಳ ಭಾಗದ ರೈತರಿಗೆ ಸಮರ್ಪಕ ನೀರು ಸರಬರಾಜು ಅಗದ ಕಾರಣಕ್ಕೆ ಬೆಳೆಗಳು ಒಣಗಲಾರಂಭಿಸಿರುವುದು ರೈತರು ಆತಂಕಗೊಳ್ಳುವಂತೆ ಮಾಡಿದೆ.

175 ಮನೆಗಳಿಗೆ ಹಾನಿ: ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ 175 ಮನೆಗಳು ಹಾನಿಗೀಡಾಗಿದ್ದು, ಅವುಗಳಲ್ಲಿ ಶೇ.15ರಿಂದ ಶೇ.20ರಷ್ಟು ಪ್ರಮಾಣದಲ್ಲಿ 87 ಮನೆಗಳು ಹಾನಿಯಾಗಿದ್ದರೆ, ಶೇ.20ರಿಂದ ಶೇ.50ರಷ್ಟು ಪ್ರಮಾಣದಲ್ಲಿ 80 ಮನೆಗಳು ಹಾನಿಗೀಡಾಗಿವೆ. ಇನ್ನೂ ಶೇ.50ರಿಂದ ಶೇ.75 ರಷ್ಟು ಪ್ರಮಾಣದಲ್ಲಿ ಎಂಟು ಮನೆಗಳು ಹಾನಿಗೀಡಾಗಿವೆ. ಇಷ್ಟೇ ಅಲ್ಲದೇ 2 ಗುಡಿಸಲು ಹಾಳಾಗಿವೆ. ಅದರಲ್ಲಿ ಹಾನಿ ಆಧರಿಸಿ 6500, 30 ಸಾವಿರ ರು. ಹಾಗೂ 50 ಸಾವಿರ ರು.ವರೆಗೆ ಪರಿಹಾರ ನೀಡಲಾಗಿದೆ. ಅದರಲ್ಲಿ ಈಗಾಗಲೇ 104 ಮನೆಗಳ ಮಾಲೀಕರಿಗೆ ಪರಿಹಾರ ಹಣ ಜಮಾ ಮಾಡಿದ್ದು, ಉಳಿದವರಿಗೆ ಪರಿಹಾರದ ಮೊತ್ತವನ್ನು ಜಮಾ ಮಾಡಲಾಗುತಿದೆ.

ಪ್ರಾಣಹಾನಿ 31.15 ಲಕ್ಷ ಪರಿಹಾರ: ಜಿಲ್ಲೆಯಲ್ಲಿ ಬರೀ ಮಳೆ ಸುರಿಯದೆ ಗುಡುಗು ಸಿಡಿಲಾರ್ಭಟದ ಮಳೆ ಸುರಿದಿದೆ. ಇದರಿಂದ ಸಾಕಷ್ಟು ಮಾನವ, ಜಾನುವಾರು ಜೀವಹಾನಿ ಕೂಡ ಆಗಿದೆ. ಸರ್ಕಾರ 31.15 ಲಕ್ಷ ರು. ಪರಿಹಾರ ಕೂಡ ವಿತರಣೆ ಮಾಡಿದೆ. ಜೂನ್‌ ನಿಂದ ಆಗಸ್ಟ್ ವರೆಗೂ ಸುರಿದ ಮಳೆಯಲ್ಲಿ 7 ಜನ ಸಿಡಿಲು ಬಡಿದು ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರು. ನಂತೆ 30 ಲಕ್ಷ ರು. ಪರಿಹಾರ ವಿತರಣೆ ಮಾಡಲಾಗಿದೆ. ಇನ್ನೂ ಒಂದು ಕುಟುಂಬಕ್ಕೆ ಪರಿಹಾರ ನೀಡುವುದು ಬಾಕಿ ಉಳಿದಿದೆ. ಇನ್ನೂ ಎಂಟು ದೊಡ್ಡ ಜಾನುವಾರು ಮೃತಪಟ್ಟಿದ್ದು, ಜಾನುವಾರು ಮಾಲೀಕರಿಗೆ 1.15 ಲಕ್ಷ ರು. ಪರಿಹಾರ ನೀಡಲಾಗಿದೆ. ಅದೇ ರೀತಿ ಎಂಟು ಆಡು, ಕುರಿಯಂತ ಸಣ್ಣ ಜಾನುವಾರು ಮೃತಪಟ್ಟಿದ್ದು, 32 ಸಾವಿರ ರು. ಪರಿಹಾರ ವಿತರಿಸಲಾಗಿದೆ.

ಭಾರಿ ಮಳೆಯಿಂದಾಗಿ ಉಂಟಾಗಿರುವ ಜೀವ ಹಾನಿ ಮತ್ತು ಮನೆ ಹಾನಿಗೆ ಈಗಾಗಲೇ ಜಿಲ್ಲಾಡಳಿತದಿಂದ ಪರಿಹಾರ ವಿತರಿಸಲಾಗುತ್ತಿದ್ದು, ಬೆಳೆ ಹಾನಿಯ ಪರಿಹಾರ ಪ್ರಕ್ರಿಯೇಯು ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಬೆಳೆ ಪರಿಹಾರವನ್ನು ಸಹ ವಿತರಿಸಲು ಜಿಲ್ಲಾಡಳಿತ ಕ್ರಮವಹಿಸಿದೆ.

....ಕೋಟ್ಸ್....

ಮುಂಗಾರು ಹಂಗಾಮಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬೆಳೆ-ಆಸ್ತಿ ನಷ್ಟದಿಂದ ರೈತರು ಸಂಕಟ ಅನುಭವಿಸುತ್ತಿದ್ದಾರೆ. ಇದರ ಜೊತೆಗೆ ಟಿಎಲ್‌ಬಿಸಿ ಕೆಳಭಾಗದ ರೈತರಿಗೆ ನೀರು ಸಹ ಸಮರ್ಪಕವಾಗಿ ತಲುಪದ ಕಾರಣಕ್ಕೆ ಆತಂಕ ಇನ್ನು ಹೆಚ್ಚಾಗಿದೆ. ಜಿಲ್ಲಾಡಳಿತ ಅಗತ್ಯ ಪರಿಹಾರ ನೀಡಬೇಕು, ಕೆಳಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕ ನೀರು ಹರಿಸಲು ಕ್ರಮ ವಹಿಸಬೇಕು.-ಎನ್‌.ಲಕ್ಷ್ಮಣಗೌಡ ಕಡಗಂದೊಡ್ಡಿ, ಜಿಲ್ಲಾಧ್ಯಕ್ಷ, ರೈತ ಸಂಘ

------------------

....ಕೋಟ್ಸ್....

ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಂಭವಿಸಿರುವ ಹಾನಿಯ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಈಗಾಗಲೇ ಪರಿಹಾರ ವಿತರಣೆ ಕಾರ್ಯವನ್ನು ಸಹ ಆರಂಭಿಸಲಾಗಿದೆ. ಶೀಘ್ರದಲ್ಲೇ ಎಲ್ಲರಿಗೂ ಪರಿಹಾರ ಜಮಾ ಮಾಡಲಾಗುವುದು. ಟಿಎಲ್‌ಬಿಸಿ ಕೆಳಭಾಗದ ರೈತರ ಜಮೀನುಗಳಿಗೆ ನೀರು ತಲುಪಿಸುವ ನಿಟ್ಟಿನಲ್ಲಿ ಮೇಲುಸ್ತುವಾರಿ ತಂಡಗಳನ್ನು ರಚಿಸಲಾಗಿದೆ.

-ಕೆ.ನಿತೀಶ್, ಜಿಲ್ಲಾಧಿಕಾರಿ, ರಾಯಚೂರು