ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಅಕಾಲಿಕ ಮಳೆಯ ಅಬ್ಬರ ಮುಂದುವರಿದಿದ್ದು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಮಳೆಯಾಗಿದೆ.ಶನಿವಾರ ಮಧ್ಯಾಹ್ನದ ಬಳಿಕ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕಿನ ಹಲವೆಡೆ ಗಾಳಿ, ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆ ಸುರಿದಿದ್ದು, ವ್ಯಾಪಕ ಹಾನಿ ಸಂಭವಿಸಿದೆ. ಮಧ್ಯಾಹ್ನ 3ರ ಸುಮಾರಿಗೆ ಆರಂಭವಾದ ಮಳೆ ಸಂಜೆವರೆಗೂ ಮುಂದುವರಿಯಿತು.
ಬೆಳ್ತಂಗಡಿ ತಾಲೂಕಿನ ವಿವಿಧೆಡೆ ನೂರಾರು ಅಡಕೆ, ರಬ್ಬರ್ ಮರಗಳು ಮುರಿದುಬಿದ್ದಿವೆ. ಬೆಳ್ತಂಗಡಿ ನಗರದ ಸಂತೆಕಟ್ಟೆಯಲ್ಲಿ ಗಾಳಿಗೆ ರಿಕ್ಷಾ ಸ್ಟ್ಯಾಂಡ್ ಧರಾಶಾಹಿಯಾಗಿದ್ದು, ರಿಕ್ಷಾವೊಂದಕ್ಕೆ ಭಾಗಶಃ ಹಾನಿ ಉಂಟಾಗಿದೆ. ತಣ್ಣೀರು ಪಂತ ಗ್ರಾಮದ ಪೆರೊಡಿತ್ತಾಯನ ಕಟ್ಟೆ ಪರಿಸರದಲ್ಲಿ ಭಾರಿ ಗಾಳಿ ಬೀಸಿದ್ದು, 20ಕ್ಕಿಂತ ಅಧಿಕ ಮನೆಗಳ ಮೇಲೆ ಮರಗಳು ಬಿದ್ದು, ಶೀಟುಗಳು ಹಾರಿ ಹೋಗಿವೆ. ನೆರಿಯ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ಮನೆಯೊಂದರ ಶೀಟುಗಳು ಗಾಳಿಗೆ ಹಾರಿಹೋಗಿವೆ. ಅಲ್ಲಲ್ಲಿ ಮರಗಳು ಬಿದ್ದು, ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ.ಮಳೆಗೆ ವಿದ್ಯುತ್ ಕಂಬ, ಮರಗಳು ಧರೆಗುರುಳಿದ್ದು, ರಾಷ್ಟ್ರೀಯ ಹೆದ್ದಾರಿ 73ರ ಕಕ್ಕಿಂಜೆ ಪೇಟೆ, ಸುಳ್ಯ- ಸುಬ್ರಹ್ಮಣ್ಯ ಮುಖ್ಯರಸ್ತೆ, ಬೆಳಾಲು-ಉಜಿರೆ ರಸ್ತೆಗಳಲ್ಲಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು.
ಹಾಸನ ಜಿಲ್ಲೆ ಸಕಲೇಶಪುರ ಸುತ್ತಮುತ್ತ ಮಳೆಯಾಗಿದೆ. ತಾಲೂಕಿನ ದಿಣಹಳ್ಳಿ ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಐವರು ಮಹಿಳಾ ಕಾರ್ಮಿಕರು ಸಿಡಿಲು ಬಡಿದು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ಮಧ್ಯಾಹ್ನ ಕಾಫಿ ಎಸ್ಟೇಟ್‌ನಲ್ಲಿ ಔಷಧಿ ಸಿಂಪಡಿಸುತ್ತಿದ್ದಾಗ ಸಿಡಿಲು ಬಡಿಯಿತು.
ಕೊಡಗಿನ ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಸುಮಾರು 2 ಗಂಟೆಗಳ ಕಾಲ ಗುಡುಗು-ಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಕುಶಾಲನಗರ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದು, ಕೆಲವು ಗಂಟೆಗಳ ಕಾಲ ಸಂಚಾರ ವ್ಯವಸ್ಥೆಗೆ ಅಡ್ಡಿ ಉಂಟಾಗಿತ್ತು. ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡು ಸ್ವಲ್ಪಕಾಲ ಆತಂಕದ ಸ್ಥಿತಿ ಸೃಷ್ಟಿಯಾಗಿತ್ತು.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಶನಿವಾರ ಸುರಿದ ಭಾರಿ ಗಾಳಿ-ಮಳೆಗೆ ಅಡಕೆ ಮತ್ತು ತೆಂಗಿನ ಮರಗಳು ಧರೆಗುರುಳಿವೆ. ಮೂಡಿಗೆರೆಯಲ್ಲಿ ರಸ್ತೆ ಬದಿ ಪಾರ್ಕ್ ಮಾಡಿದ್ದ ಕಾರಿನ ಮೇಲೆ ಮರ ಬಿದ್ದು, ಕಾರು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಶೃಂಗೇರಿ ತಾಲೂಕಿನಾದ್ಯಂತ ಸಂಜೆ 5 ಗಂಟೆಯಿಂದ ರಾತ್ರಿ 8ರವರೆಗೂ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಭಾರೀ ಮಳೆ ಸುರಿದಿದ್ದು, ಶೃಂಗೇರಿ ಪಟ್ಟಣ, ಗ್ರಾಮೀಣ ಪ್ರದೇಶದೆಲ್ಲೆಡೆ ವಿದ್ಯುತ್ ಸ್ಥಗಿತಗೊಂಡಿತ್ತು. ಪಟ್ಟಣದ ಶಾರದಾ ನಗರದಲ್ಲಿ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು, ತೆಂಗಿನಮರ ಹೊತ್ತಿ ಉರಿದಿದೆ. ಚಾರ್ಮಾಡಿ ಘಾಟಿಯ ತಪ್ಪಲಿನ ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.
ಮಂಡ್ಯ ಜಿಲ್ಲೆ ಮೇಲುಕೋಟೆಯಲ್ಲಿ ಸುರಿದ ಮಳೆಯಿಂದಾಗಿ ವೈರಮುಡಿ ಉತ್ಸವ ಕಳೆಗುಂದಿತ್ತು. ಮೈಸೂರಿನಲ್ಲೂ ಸಂಜೆಯ ವೇಳೆ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.