ಸಾರಾಂಶ
ಪ್ರವೀಣ ಹೆಗಡೆ ಕರ್ಜಗಿಶಿರಸಿ: ಅಡಕೆ ಮರಗಳಿಗೆ ವಿವಿಧ ರೋಗಗಳು ತಗುಲಿ ತೋಟಗಳು ಬರಿದಾಗುತ್ತಿರುವ ಹಿನ್ನೆಲೆ ಸಸಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಇದರೊಂದಿಗೆ ಅಡಕೆ ಕ್ಷೇತ್ರ ವಿಸ್ತರಣೆ ಆಗುತ್ತಿರುವುದರಿಂದ ಭವಿಷ್ಯದಲ್ಲಿ ದರ ಕುಸಿತವಾಗಿ ಆರ್ಥಿಕ ಸಂಕಷ್ಟ ಎದುರಿಸುವ ಆತಂಕ ಮಲೆನಾಡಿನ ಬೆಳೆಗಾರರನ್ನು ಕಾಡುತ್ತಿದೆ.
ಶಿರಸಿ ತಾಲೂಕಿನಲ್ಲಿ ೨೦೨೨- ೨೩ನೇ ಸಾಲಿನಲ್ಲಿ ೯,೮೬೬ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿತ್ತು. ೨೦೨೩- ೨೪ನೇ ಸಾಲಿನಲ್ಲಿ ೧೦,೫೮೦ ಹೆಕ್ಟೇರ್ ಪ್ರದೇಶಕ್ಕೆ ಏರಿತು. ಕಳೆದ ವರ್ಷಕ್ಕಿಂತ ಈ ವರ್ಷ ೭೧೪ ಹೆಕ್ಟೇರ್ ಪ್ರದೇಶ ಜಾಸ್ತಿಯಾಗಿದೆ. ಅದರಂತೆ ರಾಜ್ಯದಲ್ಲಿ ೩೦ ಸಾವಿರ ಹೆಕ್ಟೇರ್ ಹಾಗೂ ದೇಶದಲ್ಲಿ ೧೦೨೪ ಹೆಕ್ಟೇರ್ ಅಡಕೆ ಪ್ರದೇಶ ಹೆಚ್ಚಾಗಿದೆ. ಅಲ್ಲದೇ ಮಲೆನಾಡಿನಲ್ಲಿ ಪ್ರಸಕ್ತ ಸಾಲಿನಲ್ಲಿ ಸುರಿದ ಭಾರೀ ಗಾಳಿ- ಮಳೆಗೆ, ವಿಪರೀತ ಕೊಳೆ ರೋಗದಿಂದ ಅಡಕೆ ಉದುರಿವೆ. ಮಳೆಯ ಜತೆ ಗಾಳಿ ರಭಸಕ್ಕೆ ಮರಗಳು ಮುರಿದು ಬಿದ್ದ ಕಾರಣ ಅಡಕೆ ಸಸಿಗಳಿಗೆ ಭಾರೀ ಬೇಡಿಕೆ ಬಂದಿದೆ.ಈ ವರ್ಷದ ಮಳೆಯ ಆರ್ಭಟಕ್ಕೆ ವ್ಯಾಪಕ ಪ್ರಮಾಣದಲ್ಲಿ ಕೊಳೆರೋಗದಿಂದ ಅಡಕೆ ಮಿಳ್ಳೆಗಳು ಉದುರಿದೆ. ಅಡಕೆ ಮಿಳ್ಳೆ ಉಳಿಸಿಕೊಳ್ಳುವ ಬದಲು ೩೦ರಿಂದ ೪೦ ವರ್ಷದ ಮರಗಳನ್ನು ಉಳಿಸಿಕೊಳ್ಳಲು ಮೂರ್ನಾಲ್ಕು ಬಾರಿ ಬೋರ್ಡೋ ದ್ರಾವಣ ಸಿಂಪಡಣೆ ಮಾಡಲಾಗಿದೆ.ಕೊಳೆರೋಗ ತಗುಲಿದ ಮರಗಳು ಒಂದೊಂದೇ ನಾಶವಾಗುತ್ತಿದೆ. ಈ ವರ್ಷ ಇಳುವರಿ ಉತ್ತಮವಾಗಿದ್ದರೂ ಕೊಳೆರೋಗದಿಂದ ಅಡಕೆ ಮಿಳ್ಳೆಗಳು ಉದುರಿದ್ದರಿಂದ ಶೇ. ೪೦ರಿಂದ ಶೇ. ೫೦ರಷ್ಟು ಬೆಳೆ ನಷ್ಟವಾಗಿದೆ. ಮರಗಳು ಹೀಗೆ ನಾಶವಾದರೆ ಮುಂದಿನ ವರ್ಷ ಶೇ. ೮೦ರಷ್ಟು ಬೆಳೆ ಕುಂಠಿತವಾಗುತ್ತದೆ. ಬೆಳೆಗಾರರ ಹಿತದೃಷ್ಟಿ ಕಾಯಲು ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.ಭತ್ತದ ಕ್ಷೇತ್ರ ಇಳಿಮುಖ?: ತಾಲೂಕಿನ ಪೂರ್ವ ಭಾಗವಾದ ಬನವಾಸಿ, ಗುಡ್ನಾಪುರ, ಬಾಶಿ, ಬದನಗೋಡ, ಕೊರ್ಲಕಟ್ಟಾ, ಅಂಡಗಿ ಗ್ರಾಪಂ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರದೇಶಗಳಲ್ಲಿ ಭತ್ತ, ಜೋಳ, ಅನಾನಸ್, ಶುಂಠಿ, ಬಾಳೆ ಬೆಳೆಯನ್ನು ಪ್ರಮುಖವಾಗಿ ಬೆಳೆಯಲಾಗುತ್ತಿತ್ತು. ಆದರೆ ಕಳೆದ ೧೦ ವರ್ಷಗಳಿಂದ ಅಲ್ಲಿನ ರೈತರು ಅಡಕೆ ಬೆಳೆಯತ್ತ ಮುಖ ಮಾಡಿದ್ದರು. ಅಡಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಾಭವಿದೆ ಎಂದು ನೂರಾರು ಎಕರೆ ಭತ್ತ ಬೆಳೆಯುವ ಗದ್ದೆಗಳನ್ನು ಅಡಕೆ ತೋಟವಾಗಿ ಪರಿವರ್ತನೆ ಮಾಡುತ್ತಿದ್ದಾರೆ. ಇದರಿಂದ ತಾಲೂಕಿನಲ್ಲಿ ಅಡಕೆ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಪರ್ಯಾಯ ಬೆಳೆಗೆ ಆದ್ಯತೆ ನೀಡಿ: ಮಲೆನಾಡಿನ ರೈತರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಪರ್ಯಾಯ ಅಥವಾ ಅಂತರ್ ಬೆಳೆ ಬೆಳೆಯುವತ್ತ ದೃಷ್ಟಿ ಬೀರುವುದು ಅನಿವಾರ್ಯ. ಕೇವಲ ಅಡಕೆ ಬೆಳೆ ನಂಬಿ ಕುಳಿತರೆ ಮುಂದಿನ ೫ರಿಂದ ೧೦ ವರ್ಷಗಳಲ್ಲಿ ಮಲೆನಾಡಿನ ಅಡಕೆ ಬೆಳೆಗಾರರು ಭೀಕರ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಈಗ ಎಚ್ಚೆತ್ತು ಲಾಭದಾಯಕ ಬೆಳೆಗಳಾದ ದಾಲ್ಚಿನ್ನಿ, ಜಾಯಿಕಾಯಿ, ಬಾಳೆ, ಲವಂಗ, ಕಾಳುಮೆಣಸು, ಪಪ್ಪಾಯಿ ಬೆಳೆಯತ್ತ ಹೆಚ್ಚು ಆಸಕ್ತಿ ವಹಿಸಬೇಕು. ಇವುಗಳನ್ನು ಬೆಳೆಯಲು ನರೇಗಾ ಯೋಜನೆಯಲ್ಲಿ ಅವಕಾಶವಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು.
ಅಡಕೆ ಸಸಿ ಆಮದು ಮಾಡಿಕೊಳ್ಳಲು ಆಸಕ್ತಿಶಿವಮೊಗ್ಗ ಜಿಲ್ಲೆಯಲ್ಲಿ ಅಡಕೆ ಮರ- ಗಿಡಗಳು ಎಲೆಚುಕ್ಕಿ ರೋಗಕ್ಕೆ ತುತ್ತಾಗಿದ್ದಲ್ಲದೇ, ಉತ್ತರಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಅಡಕೆ ಬೆಳೆಯುವ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕಿನ ಅಡಕೆ ತೋಟಗಳಿಗೆ ಎಲೆಚುಕ್ಕೆ ರೋಗ ವೇಗವಾಗಿ ಹಬ್ಬುತ್ತಿದೆ. ಎಲೆಚುಕ್ಕಿ ರೋಗದಿಂದಾಗಿ ಸಣ್ಣ ಗಿಡಗಳು, ಸಸಿ ಮಡಿಯಲ್ಲಿಯೂ ಅಡಕೆ ಗಿಡಗಳು ಹಳದಿ ಬಣ್ಣಕ್ಕೆ ತಿರುಗುತ್ತಿರುವುದರಿಂದ ಹೊರ ಜಿಲ್ಲೆಯಿಂದ ಅಡಕೆ ಸಸಿ ಆಮದು ಮಾಡಿಕೊಳ್ಳಲು ಬೆಳೆಗಾರರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.ಹೆಚ್ಚಿದ ಬೇಡಿಕೆ: ಎಲೆಚುಕ್ಕಿ, ಕೊಳೆ ಸೇರಿದಂತೆ ಇನ್ನಿತರ ರೋಗದಿಂದ ಅಡಕೆ ಮರಗಳು ನಾಶವಾಗುತ್ತಿರುವುದು ಒಂದೆಡೆಯಾದರೆ ಅಡಕೆ ಪ್ರದೇಶವೂ ಹೆಚ್ಚಾಗುತ್ತಿರುವುದರಿಂದ ಸಹಜವಾಗಿ ಸಸಿಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ತಿಳಿಸಿದರು.